ಎಚ್‌ಐವಿ ಪೀಡಿತರ ರಕ್ಷಣೆಗೆ ಕಾನೂನು ಅಗತ್ಯ

7

ಎಚ್‌ಐವಿ ಪೀಡಿತರ ರಕ್ಷಣೆಗೆ ಕಾನೂನು ಅಗತ್ಯ

Published:
Updated:

ಬೆಳಗಾವಿ: ಎಚ್‌ಐವಿ/ಏಡ್ಸ್ ಪೀಡಿತರ ಹಕ್ಕುಗಳ ರಕ್ಷಣೆಗಾಗಿ ಕಾನೂನೊಂದು ರಚನೆಯಾಗಬೇಕಿದೆ ಎಂದು ನ್ಯಾಯಾಧೀಶ ರವಿ ನಾಯ್ಕ ಅಭಿಪ್ರಾಯಪಟ್ಟರು.ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ, ಸೀಫಾರ್ ಹಾಗೂ ಇನ್ನಿತರ ಸಂಘಗಳ ಸಂಯುಕ್ತಾಶ್ರಯದಲ್ಲಿ ಬೆಳಗಾವಿಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗಾಗಿ ಎಚ್‌ಐವಿ/ಏಡ್ಸ್ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.‘ಬಾಲಾಪರಾಧಿಗಳಿಗೆ, ಕುಟುಂಬ ದೌರ್ಜನ್ಯಕ್ಕೆ ಒಳಗಾದವರಿಗೆ ಪರಿಹಾರ ಒದಗಿಸಲು ಕಾನೂನಿದೆ. ಆದರೆ ಎಚ್‌ಐವಿ ಪೀಡಿತರಿಗಾಗಿ ಪ್ರತ್ಯೇಕವಾಗಿ ಕಾನೂನಿಲ್ಲ. ಎಚ್‌ಐವಿ ಪೀಡಿತರ ಕೂಗನ್ನು ಜನಪ್ರತಿನಿಧಿಗಳು ಕೇಳಿಸಿಕೊಳ್ಳಬೇಕು’ ಎಂದು ಅವರು ಹೇಳಿದರು.‘ಕಾನೂನು ರಚನೆಯಾದರೆ ಉದ್ಯೋಗ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಮೀಸಲಾತಿ ಪಡೆಯಬಹುದು. ಅಸ್ಪೃಶ್ಯತೆ ಮಾಡುವುದು ಅಪರಾಧ ಎಂದು ಸಂವಿಧಾನ ಹೇಳುತ್ತದೆ. ಆದರೆ ಎಚ್‌ಐವಿ ರೋಗಿಗಳನ್ನು ಅವರಿಗಿಂತ ಕಡೆಯಾಗಿ ಕಾಣಲಾಗುತ್ತಿದೆ’ ಎಂದು ಅವರು ವಿಷಾದಿಸಿದರು.‘ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು. ಹಕ್ಕುಗಳಿಗಾಗಿ ಹೋರಾಟ ಮಾಡಬೇಕು. ಕಾನೂನಿನ ನೆರವಿನ ಅವಶ್ಯಕತೆ ಇದ್ದರೆ ಕಾನೂನು ಸೇವಾ ಪ್ರಾಧಿಕಾರದ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಸಲಹೆ ಮಾಡಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗೋವಿಂದರಾಜು ಮಾತನಾಡಿ, ಅರಿವಿದ್ದೋ, ಅರಿವಿಲ್ಲದೆಯೋ ರೋಗಕ್ಕೆ ತುತ್ತಾಗುತ್ತಾರೆ. ಏಡ್ಸ್ ರೋಗಿಗಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದರು.‘ಎಚ್‌ಐವಿಗೆ ತುತ್ತಾದವರು ಹಾಗೂ ಸಾರ್ವಜನಿಕರಲ್ಲಿ ಅದರಲ್ಲೂ ಗ್ರಾಮೀಣ ಹಾಗೂ ಅನಕ್ಷರಸ್ಥರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಿದೆ. ರೋಗಕ್ಕೆ ತುತ್ತಾದವರೂ ಭಯ ಪಡುವ ಅಗತ್ಯವಿಲ್ಲ. ಸಾಮಾನ್ಯರಂತೆ ಬದುಕುವ ಮೂಲಕ ರೋಗವನ್ನು ಧೈರ್ಯದಿಂದ ಎದುರಿಸಬೇಕು’ ಎಂದು ಅವರು ಹೇಳಿದರು.ಸ್ಪಂದನ ಸಂಸ್ಥೆಯ ಕಸ್ತೂರಿ ಮಾತನಾಡಿ, ತಪ್ಪು ಮಾಡದೇ ನಾವು ರೋಗಕ್ಕೆ ತುತ್ತಾಗಿದ್ದೇವೆ. ಇನ್ನೊಬ್ಬರಿಗೆ ನೆರವಾಗಬೇಕು ಎಂದು ಕೆಲಸ ಮಾಡುತ್ತಿದ್ದೇವೆ. ಸಮಾಜವೂ ನಮ್ಮ ಜತೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.‘ಇಂದಿಗೂ ಸಮಾಜದಲ್ಲಿ ಎಚ್‌ಐವಿ ಪೀಡಿತರೊಂದಿಗೆ ಎಲ್ಲರೂ ಮುಕ್ತವಾಗಿ ಬೆರೆಯುವುದಿಲ್ಲ. ಕೆಲವರು ಹಲವಾರು ರೀತಿಯ ಕಿರುಕುಳಗಳನ್ನು ನೀಡುತ್ತಾರೆ. ಇವುಗಳನ್ನು ಎದುರಿಸಿ ಬದುಕುವುದನ್ನು ಕಲಿಯಬೇಕಿದೆ’ ಎಂದು ಅವರು ಹೇಳಿದರು. ಹಿರಿಯ ಪತ್ರಕರ್ತ ಸುಭಾಷ ಕುಲಕರ್ಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಶೋಕ ಮುರಗೋಡ, ಎಆರ್‌ಟಿ ವೈದ್ಯಕೀಯ ಅಧಿಕಾರಿ ಡಾ.ಶಂಕರ, ಸ್ವೀಕಾರ ಸಂಸ್ಥೆಯ ಶ್ಯಾಮ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry