ಎಚ್‌ಐ ಜೊತೆ ಐದು ವರ್ಷಗಳ ಒಪ್ಪಂದ:ಹಾಕಿ ತಂಡದ ನೆರವಿಗೆ ಸಹಾರಾ

7

ಎಚ್‌ಐ ಜೊತೆ ಐದು ವರ್ಷಗಳ ಒಪ್ಪಂದ:ಹಾಕಿ ತಂಡದ ನೆರವಿಗೆ ಸಹಾರಾ

Published:
Updated:

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಜೊತೆಗಿನ ತನ್ನ ಸಂಬಂಧವನ್ನು ಕೊನೆಗೊಳಿಸಿರುವ ಸಹಾರಾ ಇಂಡಿಯಾ, ಹಾಕಿ ತಂಡದೊಂದಿಗಿನ ಒಪ್ಪಂದ ನವೀಕರಿಸಲು ನಿರ್ಧರಿಸಿದೆ. ಮುಂದಿನ ಐದು ವರ್ಷಗಳ ಅವಧಿಗೆ ಹಾಕಿ ತಂಡದ ಪ್ರಾಯೋಜಕತ್ವ ವಹಿಸಲು ತೀರ್ಮಾನಿಸಿದ್ದು, ಇದಕ್ಕಾಗಿ ಹಾಕಿ ಇಂಡಿಯಾ (ಎಚ್‌ಐ) ಜೊತೆ ಒಪ್ಪಂದ ಮಾಡಿಕೊಳ್ಳಲಿದೆ.ಒಪ್ಪಂದದ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಹೊಸ ಒಪ್ಪಂದದಂತೆ ರಾಷ್ಟ್ರೀಯ ಪುರುಷರ ಮತ್ತು ಮಹಿಳೆಯರ ತಂಡಗಳು (ಸೀನಿಯರ್ ಹಾಗೂ ಜೂನಿಯರ್) 2017ರ ವರೆಗೆ ಸಹಾರಾ ಇಂಡಿಯಾದಿಂದ ಹಣಕಾಸಿನ ನೆರವು ಪಡೆಯಲಿದೆ.`ಹೆಚ್ಚುಕಡಿಮೆ ಎಲ್ಲವೂ ಅಂತಿಮ ಹಂತದಲ್ಲಿದೆ. ಒಂದೆರಡು ದಿನಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ನಾವು 15 ರಿಂದ 17 ಕೋಟಿ ರೂ. ಮೊತ್ತದ ಒಪ್ಪಂದವನ್ನು ನಿರೀಕ್ಷಿಸುತ್ತಿದ್ದೇವೆ. ಏಕೆಂದರೆ ಹಾಕಿ ಕ್ರೀಡೆಗೆ ಉತ್ತೇಜನ ನೀಡಲು ಹೆಚ್ಚಿನ ಹಣದ ಅಗತ್ಯವಿದೆ~ ಎಂದು ಎಚ್‌ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಸಹಾರಾ ಇಂಡಿಯಾದ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ, `ಹಾಕಿ ತಂಡದ ಜೊತೆಗಿನ ಸಂಬಂಧ ಮುಂದುವರಿಸಲು ಉತ್ಸುಕರಾಗಿದ್ದೇವೆ. ಸದ್ಯದಲ್ಲೇ ಅಂತಿಮ ನಿರ್ಧಾರ ಹೊರಬೀಳಲಿದೆ~ ಎಂಬ ಉತ್ತರ ಲಭಿಸಿದೆ.`ಒಪ್ಪಂದ ನವೀಕರಿಸುವ ಕುರಿತು ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಹಾಕಿ ಇಂಡಿಯಾ ಜೊತೆಗಿನ ಮಾತುಕತೆ ಪ್ರಗತಿಯಲ್ಲಿದೆ. 2-3 ದಿನಗಳಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳುವ ವಿಶ್ವಾಸ ನಮ್ಮದು~ ಎಂದು ಸಹಾರಾ ಇಂಡಿಯಾ ಕಾರ್ಪೊರೇಟ್ ಕಮ್ಯುನಿಕೇಷನ್ಸ್ ಮುಖ್ಯಸ್ಥ ಅಭಿಜಿತ್ ಸರ್ಕಾರ್ ತಿಳಿಸಿದ್ದಾರೆ.`ಭಾರತ ಹಾಕಿ ತಂಡದ ಜೊತೆಗಿನ ನಮ್ಮ ಪ್ರಾಯೋಜಕತ್ವದ ಅವಧಿ ಕಳೆದ ತಿಂಗಳು ಕೊನೆಗೊಂಡಿತ್ತು. ಅದನ್ನು ನವೀಕರಿಸುವಂತೆ ಕೋರಿ ಹಾಕಿ ಇಂಡಿಯಾ ನಮ್ಮನ್ನು ಕೇಳಿಕೊಂಡಿದೆ. ಈ ಕುರಿತು ಮಾತುಕತೆ ಆರಂಭವಾಗಿದೆ~ ಎಂದರು. ಫೆಬ್ರುವರಿ 18 ರಿಂದ 26ರ ವರೆಗೆ ನವದೆಹಲಿಯಲ್ಲಿ ನಡೆಯಲಿರುವ ಒಲಿಂಪಿಕ್ ಅರ್ಹತಾ ಟೂರ್ನಿಯ ವೇಳೆ ಭಾರತ ತಂಡದ ಆಟಗಾರರು `ಸಹಾರಾ~ ಲೋಗೊ ಇರುವ ಜರ್ಸಿ ತೊಡಲಿದ್ದಾರೆ.ಸಹಾರಾ ಇಂಡಿಯಾ ಎಂಟು ವರ್ಷಗಳ ಹಿಂದೆ (2003 ರಲ್ಲಿ) ಮೊದಲ ಬಾರಿ ಹಾಕಿ ತಂಡದ ಜೊತೆ ಪ್ರಯೋಜಕತ್ವದ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದ ಅವಧಿಯನ್ನು 2011 ರಲ್ಲಿ ಮತ್ತೆ ಆರು ತಿಂಗಳವರೆಗೆ ವಿಸ್ತರಿಸಿತ್ತು. ಈ ಅವಧಿ ಕಳೆದ ತಿಂಗಳು ಕೊನೆಗೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry