ಭಾನುವಾರ, ಏಪ್ರಿಲ್ 11, 2021
22 °C

ಎಚ್‌ಕೆಎಡಿಬಿ ಸರ್ವ ಸದಸ್ಯರ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಎಡಿಬಿ)ಯ ಸಭಾಂಗಣದಲ್ಲಿ ಶನಿವಾರ ಮಂಡಳಿಯ ಸರ್ವ ಸದಸ್ಯರ ಸಭೆ ನಡೆಯಿತು.ಮಂಡಳಿ ವ್ಯಾಪ್ತಿಯ ಜಿಲ್ಲೆಗಳ ಹಿಂದುಳಿಯುವಿಕೆಯನ್ನು ಗಮನಿಸಿ ಸರ್ಕಾರವು ಪ್ರತಿ ವರ್ಷದಿಂದ ವರ್ಷಕ್ಕೆ ಅನುದಾನದಲ್ಲಿ ಹೆಚ್ಚಳ ಮಾಡುತ್ತಾ ಬಂದಿರುವುದಕ್ಕೆ ಮಂಡಳಿಯ ಸರ್ವ ಸದಸ್ಯರು ಒಕ್ಕೊರಲಿನಿಂದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.2012-13ನೇ ಸಾಲಿನಲ್ಲಿ ರೂ.63 ಕೋಟಿ ಅನುದಾನ ನಿಗದಿಪಡಿಸಿದ್ದು, ಈಗಾಗಲೇ ಎರಡು ಕರಡು ಕ್ರಿಯಾ ಯೋಜನೆ ತಯಾರಿಸಿ ಮೇ ತಿಂಗಳಲ್ಲೆ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಅಪೂರ್ಣಗೊಂಡ ಕಾಮಗಾರಿಗಳಿಗಾಗಿ ರೂ.10 ಕೋಟಿ, ಆಡಳಿತ ವೆಚ್ಚಕ್ಕಾಗಿ ರೂ.1.30 ಕೋಟಿ, ಅಧ್ಯಕ್ಷರ ಮತ್ತು ಸರ್ಕಾರದ ವಿವೇಚನಾ ನಿಧಿಗಾಗಿ ರೂ.5.17 ಕೋಟಿ, ಹೊಸ ಕಾಮಗಾರಿಗಳಿಗಾಗಿ ರೂ.30.02 ಕೋಟಿ ಹಣವನ್ನು ಡಾ. ಡಿ.ಎಂ. ನಂಜುಂಡಪ್ಪನವರ ವರದಿಯ ಅನುಗುಣವಾಗಿ ಹಂಚಿಕೆ ಮಾಡಿರುವ ಪ್ರಕಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ, ವಿಶೇಷ ಘಟಕ ಯೋಜನೆಯ ರೂ.13 ಕೋಟಿ ಹಾಗೂ ಗಿರಿಜನ ಉಪಯೋಜನೆಯ ರೂ.3.50 ಕೋಟಿ ಅನುದಾನವನ್ನು ಜೂನ್ 12ರಂದು ಅನುಮೋದನೆ ಸರ್ಕಾರ ಕೊಟ್ಟಿರುವ ಬಗ್ಗೆ ಸಭೆಗೆ ವರದಿ ನೀಡಲಾಯಿತು.ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಮಹಿಳೆಯರ ವಸತಿ ಗೃಹ ಕಟ್ಟಡ ನಿರ್ಮಾಣಕ್ಕಾಗಿ ರೂ. 50 ಲಕ್ಷ ಬಡುಗಡೆಗೆ ಅನುಮೋದನೆ ನೀಡಲಾಯಿತು.ಆಡಳಿತಾತ್ಮಕ ಅನುಮೊದನೆ ನೀಡಿದ ದಿನದಿಂದ ಒಂದು ವರ್ಷದೊಳಗೆ ಮಂಡಳಿಯ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಲು ಮತ್ತು ಒಂದು ವೇಳೆ ಪ್ರಾರಂಭಿಸದಿರುವುದಕ್ಕೆ ಸಮರ್ಥನೀಯ ಕಾರಣ ನೀಡದಿದ್ದಲ್ಲಿ ಅಂತಹ ಕಾಮಗಾರಿಗಳು ಕ್ರಿಯಾ ಯೋಜನೆಯಿಂದ ಕೈಬಿಡುವ ಕುರಿತು ಇರುವ ಸೂಚನೆಗಳನ್ನು ಸರ್ವ ಸದಸ್ಯರ ಗಮನಕ್ಕೆ ತರಲಾಯಿತು. ಆಡಳಿತಾತ್ಮಕ ಅನುಮೊದನೆ ದಿನಾಂಕದ ಬದಲಾಗಿ ಕಾಮಗಾರಿಗಳ ಒಡಂಬಡಿಕೆಯ ದಿನಾಂಕದಿಂದ ಒಂದು ವರ್ಷದೊಳಗೆ ಪ್ರಾರಂಭಿಸಿ ಪೂರ್ಣಗೊಳಿಸದಿದ್ದಲ್ಲಿ ಅಂತಹ ಕಾಮಗಾರಿಗಳನ್ನು ಕ್ರೀಯಾ ಯೋಜನೆಯಿಂದ ಕೈಬಿಡಲು ಸರ್ವ ಸದಸ್ಯರ ಒಪ್ಪಿಗೆ ಸೂಚಿಸಿದರು.ಈಚೆಗೆ ಕಾಮಗಾರಿ ದರಗಳ ಹೆಚ್ಚನವನ್ನು ಗಮನದಲ್ಲಿಟ್ಟುಕೊಂಡು ಕನಿಷ್ಠ ರೂ.250 ಕೋಟಿ ಹೆಚ್ಚುವರಿ ಅನುದಾನವನ್ನು ಮಂಡಳಿಗೆ ಒದಗಿಸುವಂತೆ  ಹಾಗೂ ಸಮುದಾಯ ಭವನಕ್ಕೆ ಒದಗಿಸುವ ಅನುದಾನ ರೂ.5 ಲಕ್ಷಕ್ಕೆ ಮಿತಿಗೊಳಿಸಲು,  ಮಂಡಳಿಯ ಕಾಮಗಾರಿಗಳ ತುಂಡು ಗುತ್ತಿಗೆಗೆ ಅನುಮೋದನೆ ನೀಡುವ ಅಧಿಕಾರವನ್ನು ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಕೊಡುವಂತೆ ಸರ್ಕಾರವನ್ನು ಒತ್ತಾಯಿಸಲು ಸರ್ವ ಸದಸ್ಯರ ನಿಯೋಗವು ಮುಖ್ಯಮಂತ್ರಿಯನ್ನು ಶೀಘ್ರದಲ್ಲೆ ಭೇಟಿ ಮಾಡಲು ತೀರ್ಮಾನಿಸಲಾಯಿತು.ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್, ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ, ಸಚಿವ ರೇವುನಾಯಕ ಬೆಳಮಗಿ, ಶಾಸಕರು, ವಿಧಾನ ಸಭಾ ಸದಸ್ಯರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ನಾಮ ನಿರ್ದೇಶಿತ ಸದಸ್ಯರು ಭಾಗವಹಿಸಿದ್ದರು. ಮಂಡಳಿಯ ಕಾರ್ಯದರ್ಶಿ ಕೆ. ರತ್ನಪ್ರಭಾ ಸ್ವಾಗತಿಸಿದರು. ಎಚ್‌ಕೆಎಡಿಬಿ ಅಧ್ಯಕ್ಷ ಅಮರನಾಥ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.