ಎಚ್‌ಸಿಎ ಮಡಿಲಿಗೆ ಮತ್ತೆ ಸ್ಯಾವಸೋಲ್ ಕಪ್

7

ಎಚ್‌ಸಿಎ ಮಡಿಲಿಗೆ ಮತ್ತೆ ಸ್ಯಾವಸೋಲ್ ಕಪ್

Published:
Updated:

ಹುಬ್ಬಳ್ಳಿ: ಮುಳುಗಿದ್ದ ಹಡಗನ್ನು ದಡ ಸೇರಿಸಿದ ಮಧ್ಯಮ ಕ್ರಮಾಂಕದ ಆಟಗಾರ ಅಭಿಷೇಕ ಹೊನ್ನಾವರ ಅವರ ಭರ್ಜರಿ ಶತಕದ ನೆರವಿನಿಂದ ಆತಿಥೇಯ ಎಚ್‌ಸಿಎ ತಂಡ ಇಲ್ಲಿ ಭಾನುವಾರ ಮುಕ್ತಾಯಗೊಂಡ ಸ್ಯಾವಸೋಲ್ ಕಪ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.ನೆಹರೂ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಧಾರವಾಡದ ಕ್ರಿಕೆಟ್ ಕ್ಲಬ್ ಕರ್ನಾಟಕ (ಸಿಸಿಕೆ) ತಂಡವನ್ನು 71 ರನ್‌ಗಳಿಂದ ಮಣಿಸಿದ ಸೌನಕ್ ಬಿಸ್ವಾಸ್ ನಾಯಕತ್ವದ ಎಚ್‌ಸಿಎ ತಂಡ ಸತತ ಎರಡನೇ ವರ್ಷ ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡಿತು. ಇದರೊಂದಿಗೆ ತಂಡ ಈ ಪ್ರಶಸ್ತಿಯನ್ನು ನಾಲ್ಕು ಬಾರಿ ಗೆದ್ದುಕೊಂಡಂತಾಯಿತು.ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆತಿಥೇಯರಿಗೆ ಎದುರಾಳಿ ಬೌಲರ್‌ಗಳು ಆರಂಭದಲ್ಲಿ ಭಾರಿ ಪೆಟ್ಟು ನೀಡಿದರು. ಒಂದು ಹಂತದಲ್ಲಿ 33 ರನ್‌ಗಳಿಗೆ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾದ ಬಲಗೈ ಬ್ಯಾಟ್ಸಮನ್ ಅಭಿಷೇಕ ಅದ್ಭುತ ಇನ್ನಿಂಗ್ಸ್ ಕಟ್ಟಿದರು.ಆರನೇ ವಿಕೆಟ್‌ಗೆ ನಾಕಯನ ಜೊತೆಗೂಡಿ 97 ರನ್‌ಗಳನ್ನು ಪೇರಿಸಿದ ಅಭಿಷೇಕ 48ನೇ ಓವರ್‌ನಲ್ಲಿ ಔಟಾಗುವ ಮುನ್ನ ಸ್ಫೋಟಕ ಶತಕ (105, 111 ಎಸೆತ, 1 ಸಿಕ್ಸರ್, 10 ಬೌಂಡರಿ ) ಬಾರಿಸಿದರು. ಸೊಗಸಾದ ಡ್ರೈವ್‌ಗಳ ಮೂಲಕ ಗಮನ ಸೆಳೆದ ಈ ಆಟಗಾರ ಎದುರಾಳಿ ನಾಯಕ ಹನುಮಂತ ಮಂಗ್ಲಿ ಅವರ ಎಸೆತವನ್ನು ಫೈನ್‌ಲೆಗ್ ಮೂಲಕ ಸಿಕ್ಸರ್‌ಗೆ ಎತ್ತಿದ ದೃಶ್ಯ ಮೋಹಕವಾಗಿತ್ತು.ಹರ್ಷ ಅವರ ಎಸೆತವನ್ನು ಥರ್ಡ್ ಮ್ಯಾನ್ ಕಡೆಗೆ ತಳ್ಳಿ ಒಂದು ರನ್ ಗಳಿಸಿದ ಅವರು ಹೆಲ್ಮೆಟ್ ತೆಗೆದು ಬ್ಯಾಟ್ ಎತ್ತಿ ಪೆವಿಲಿಯನ್ ಕಡೆಗೆ ನಗೆ ಚೆಲ್ಲಿದಾಗ ಸಹ ಆಟಗಾರರ ಖಷಿ ಮುಗಿಲು ಮುಟ್ಟಿತ್ತು. ಹರ್ಷ ಅವರ ಮುಂದಿನ ಓವರ್‌ನಲ್ಲಿ ರಿಟರ್ನ್ ಕ್ಯಾಚ್ ನೀಡಿ ಮರಳುವಾಗ ತಂಡದ ಸ್ಥಿತಿ ಸುಭದ್ರವಾಗಿತ್ತು.

ಹೊನ್ನಾವರಗೆ ಸಮರ್ಥ ಸಹಕಾರ ನೀಡಿದ ಹರ್ಷಿಲ್ ಪಟೇಲ್ 46 (50 ಎಸೆತ, 2 ಬೌಂಡರಿ) ರನ್ ಗಳಿಸಿ ಮಿಂಚಿ ತಂಡ 251 ರನ್ ಗಳಿಸಲು ನೆರವಾದರು.ಸ್ಪರ್ಧಾತ್ಮಕ ಜಯದ ಗುರಿ ಬೆಂಬತ್ತಿದ ಸಿಸಿಕೆ ತಂಡ 46.3 ಓವರ್‌ಗಳಲ್ಲಿ  180 ರನ್ ಗಳಿಸಿ ಶರಣಾಯಿತು. ಹನುಮಂತ ಮಂಗ್ಲಿ (51, 69 ಎಸೆತ, 9 ಬೌಂಡರಿ) ಹಾಗೂ ವಿಕೆಟ್ ಕೀಪರ್ ಕಿಶೋರ ಶೆಟ್ಟಿ (46, 63 ಎಸೆತ, 6 ಬೌಂಡರಿ) ಪ್ರತಿರೋಧ ಒಡ್ಡಿದರೂ ಫಲ ನೀಡಲಿಲ್ಲ. ಅಭಿಷೇಕ ಹೊನ್ನಾವರ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರೆ ಹನುಮಂತ ಮಂಗ್ಲಿ ಸರಣಿಯ ಶೇಷ್ಠ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.ಸಂಜೆ ನಡೆದ ಸಮಾರಂಭದಲ್ಲಿ ಮೇಯರ್ ಡಾ.ಪಾಂಡುರಂಗ ಪಾಟೀಲ ಪ್ರಶಸ್ತಿ ವಿತರಿಸಿದರು.

ಮಾಜಿ ಮೇಯರ್ ವೀರಣ್ಣ ಸವಡಿ, ಎಚ್‌ಸಿಎ ಕಾರ್ಯದರ್ಶಿ ವಿಜಯ ಕಾಮತ್, ಸಹ ಕಾರ್ಯದರ್ಶಿ ಅನ್ವರ್ ಮ್ಯಾನೇಜರ್, ಖಜಾಂಚಿ ಡಿ.ಆರ್. ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.       ಸಂಕ್ಷಿಪ್ತ ಸ್ಕೋರ್

ಎಚ್‌ಸಿಎ: 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 251 (ಅಭಿಷೇಕ ಹೊನ್ನಾವರ 105, ಹರ್ಷಿಲ್ ಪಟೇಲ್ 46, ಸೌನಕ್ ಬಿಸ್ವಾಸ್ 63; ಹರ್ಷಲ್ ವಿ.ಸಿ 42ಕ್ಕೆ 2, ಹನುಮಂತ ಮಂಗ್ಲಿ 43ಕ್ಕೆ 2); ಸಿಸಿಕೆ: 46.3 ಓವರ್‌ಗಳಲ್ಲಿ 180 (ಹನುಮಂತ ಮಂಗ್ಲಿ 51, ಕಿಶೋರ ಶೆಟ್ಟಿ 46; ಪವನ್ ಪಡಸಾಲಿ 28ಕ್ಕೆ 2, ವಿಶಾಲ ಎನ್ 27ಕ್ಕೆ 2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry