ಎಚ್1ಬಿ ವೀಸಾಕ್ಕೆ 5 ಲಕ್ಷಶುಲ್ಕ

7

ಎಚ್1ಬಿ ವೀಸಾಕ್ಕೆ 5 ಲಕ್ಷಶುಲ್ಕ

Published:
Updated:

ವಾಷಿಂಗ್ಟನ್ (ಪಿಟಿಐ): ವೃತ್ತಿಪರರಿಗೆ ನೀಡುವ ಹೊಸ ಎಚ್-1ಬಿ ವೀಸಾಕ್ಕೆ 10,000 ಡಾಲರ್ (ಸುಮಾರು 5 ಲಕ್ಷ ರೂಪಾಯಿ) ಮತ್ತು ಶಾಶ್ವತ ಪೌರತ್ವ ಅಥವಾ ಹಸಿರು ಕಾರ್ಡ್‌ಗೆ 15,000 ಡಾಲರ್ (ಸುಮಾರು 7.5 ಲಕ್ಷ ರೂಪಾಯಿ) ಶುಲ್ಕ ವಿಧಿಸುವಂತೆ ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆ ಮೈಕ್ರೊಸಾಫ್ಟ್ ಕಾರ್ಪೊರೇಷನ್ ಅಮೆರಿಕ ಸರ್ಕಾರಕ್ಕೆ ಸಲಹೆ ನೀಡಿದೆ. ಈ ಪ್ರಸ್ತಾವ ಜಾರಿಗೆ ಬಂದರೆ ಭಾರತದ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಮೇಲೆ ವ್ಯತಿರಿಕ್ತ ಪರಿಣಾಮ  ಬೀರಲಿದೆ. ಒಂದು ವೇಳೆ, ಹೊಸ ಶುಲ್ಕ ಜಾರಿಗೆ ಬಂದರೆ ದಶಕದ ಅವಧಿಯಲ್ಲಿ ಒಟ್ಟು 500ಕೋಟಿ ಡಾಲರ್ ಮೊತ್ತವನ್ನು ಸಂಗ್ರಹಿಸಬಹುದು ಎಂದು ಮೈಕ್ರೊಸಾಫ್ಟ್ ಹೇಳಿದೆ. ವಾರ್ಷಿಕವಾಗಿ ಅಮೆರಿಕ ಒಟ್ಟು 20,000 ಎಚ್1-ಬಿ ವೀಸಾ ಮತ್ತು ಹಸಿರು ಕಾರ್ಡ್‌ಗಳನ್ನು ನೀಡುತ್ತಿದ್ದು, ಇವುಗಳನ್ನು ಎಸ್‌ಟಿಇಎಂ        (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ) ಕ್ಷೇತ್ರದವರಿಗೆ ಮಾತ್ರ ನೀಡಬೇಕು ಎಂದೂ ಮೈಕ್ರೊಸಾಫ್ಟ್ ಸಲಹೆ ನೀಡಿದೆ.ವೀಸಾ ಮತ್ತು ಹಸಿರು ಕಾರ್ಡ್‌ಗಳ ಹಂಚಿಕೆಯಿಂದ ಸಂಗ್ರಹವಾದ ಮೊತ್ತವನ್ನು ಎಸ್‌ಟಿಇಎಂ ಶಿಕ್ಷಣ ಕಾರ್ಯಕ್ರಮಗಳಿಗೆ ವಿನಿಯೋಗಿಸಬಹುದಾಗಿದೆ ಎಂದು ಹೇಳಿದೆ.ಎಚ್1ಬಿ ವೀಸಾಕ್ಕೆ ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುವ ಹಿನ್ನೆಲೆಯಲ್ಲಿ, ಒಂದು ವೇಳೆ ಈ ಪ್ರಸ್ತಾವಕ್ಕೆ ಅಮೆರಿಕ ಕಾಂಗ್ರೆಸ್ ಅಂಕಿತ ಹಾಕಿದರೆ ಅದು ಭಾರತೀಯ ಕಂಪೆನಿಗಳಿಗೆ ಮಾರಕವಾಗಿ ಪರಿಣಮಿಸಲಿದೆ.ಕಳೆದ ವಾರ ನಡೆದ ಮೈಕ್ರೊಸಾಫ್ಟ್‌ನ  ಚಿಂತಕರ ಸಭೆಯಲ್ಲಿ ವೀಸಾ ಶುಲ್ಕ ಹೆಚ್ಚಳ ಮಾಡುವ ಸಂಬಂಧ ಸಂಸ್ಥೆಯ ಪ್ರಸ್ತಾವವನ್ನು ಬಹಿರಂಗಗೊಳಿಸಲಾಗಿದೆ.ಈ ಮೂಲಕ, ಸಂಗ್ರಹವಾಗುವ ಹಣವನ್ನು ಮುಂಬರುವ ದಿನಗಳಲ್ಲಿ ಕೌಶಲ ಭರಿತ ಉದ್ಯೋಗ ಸೃಷ್ಟಿಯಲ್ಲಿ ಬಳಸಲಾಗುವುದು ಎಂದು ಮೈಕ್ರೊಸಾಫ್ಟ್‌ನ ಜನರಲ್ ಕೌನ್ಸೆಲ್ ಹಾಗೂ ಕಾನೂನು ಮತ್ತು ಕಾರ್ಪೊರೇಟ್ ವ್ಯವಹಾರಗಳ ಕಾರ್ಯಕಾರಿ ಉಪಾಧ್ಯಕ್ಷ, ಬ್ರಾಡ್ ಸ್ಮಿತ್ ಹೇಳಿದ್ದಾರೆ.ಮೈಕ್ರೊಸಾಫ್ಟ್ ಸಂಸ್ಥೆಯು ಅಮೆರಿಕದಲ್ಲಿ 6000 ಉದ್ಯೋಗ ಅವಕಾಶಗಳನ್ನು ಹೊಂದಿದ್ದು, ಇದರಲ್ಲಿ 3,400ಕ್ಕೂ ಅಧಿಕ ಉದ್ಯೋಗಗಳು ಅಧ್ಯಯನಕಾರರು, ಡೆವಲಪರ್‌ಗಳು ಮತ್ತು ಎಂಜಿನಿಯರ್‌ಗಳಿಗೆ ಮೀಸಲಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry