ಎಜಿಕೆ ಗಣಿ ಪ್ರದೇಶದಲ್ಲಿ ಸಿಬಿಐ ತಂಡದ ಪರಿಶೀಲನೆ

7

ಎಜಿಕೆ ಗಣಿ ಪ್ರದೇಶದಲ್ಲಿ ಸಿಬಿಐ ತಂಡದ ಪರಿಶೀಲನೆ

Published:
Updated:
ಎಜಿಕೆ ಗಣಿ ಪ್ರದೇಶದಲ್ಲಿ ಸಿಬಿಐ ತಂಡದ ಪರಿಶೀಲನೆ

ಬಳ್ಳಾರಿ: ಕರ್ನಾಟಕ ಮತ್ತು ಆಂಧ್ರ ಗಡಿಯಲ್ಲಿ ಸಚಿವ ಜಿ.ಜನಾರ್ದನ ರೆಡ್ಡಿ ಒಡೆತನದ ಗಣಿ ಕಂಪೆನಿಗಳು ನಡೆಸಿವೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಗುರುವಾರ ಆಂಧ್ರಪ್ರದೇಶದ ಸಿದ್ದಾಪುರದ ಬಳಿಯ ಅಂತರಗಂಗಮ್ಮ ಕೊಂಡ (ಎಜಿಕೆ) ಗಣಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.ಸಿಬಿಐನ ಡಿಐಜಿ ವಿ.ವಿ. ಲಕ್ಷ್ಮಿನಾರಾಯಣ ನೇತೃತ್ವದ ತಂಡ, ಬೆಳಿಗ್ಗೆ ಎಜಿಕೆ ಪ್ರದೇಶದಲ್ಲಿರುವ ಅನಂತಪುರಂ ಮೈನಿಂಗ್ ಕಂಪೆನಿಗೆ ಸೇರಿರುವ ಒಟ್ಟು 68.52 ಹೆಕ್ಟೇರ್ ವ್ಯಾಪ್ತಿಯ ಗಣಿಪ್ರದೇಶವನ್ನು ಪರಿಶೀಲಿಸಿ, ಗಣಿಗಾರಿಕೆ ನಡೆಸಲಾದ ಪ್ರದೇಶದ ವ್ಯಾಪ್ತಿ, ಲಭ್ಯವಿರುವ ಅದಿರಿನ ಗ್ರೇಡ್ ಹಾಗೂ ಗಣಿ ಗಡಿ ಗುರುತುಗಳ ಕುರಿತು ಮಹತ್ವದ ಮಾಹಿತಿ ಸಂಗ್ರಹಿಸಿತು.ಗಣಿಗಾರಿಕೆಗೆ ಒಳಪಟ್ಟ ಎಲ್ಲ ಪ್ರದೇಶಗಳಿಗೆ ಭೇಟಿ ನೀಡಿದ ಸಿಬಿಐ ತಂಡ, ಗಣಿ ಚಟುವಟಿಕೆ ನಡೆದಿರುವ ಬಗೆಗಿನ ಬಹುತೇಕ ವಿವರಗಳನ್ನೂ ಪಡೆದದ್ದಲ್ಲದೆ, ಮಧ್ಯಾಹ್ನದವರೆಗೂ ಎಜಿಕೆ ಪ್ರದೇಶದ ವಿವಿಧೆಡೆ ತೆರಳಿ ಲಭ್ಯ ಅದಿರನ್ನು ಸಂಗ್ರಹಿಸಿತು. ಅಷ್ಟೇ ಅಲ್ಲದೆ, ಅರಣ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಬಳಿಯಿರುವ ನಕ್ಷೆ, ದಾಖಲೆಗಳೊಂದಿಗೆ ಸ್ಥಳವನ್ನು ತಾಳೆ ಮಾಡಿ ನೋಡಿತು. ಸಿಬಿಐನ ಎಸ್‌ಪಿ ಎಚ್.ವೆಂಕಟೇಶ್, ವಿಶೇಷ ಅಧಿಕಾರಿ ಆರ್.ಎಂ. ಖಾನ್ ಅವರಲ್ಲದೆ, ಇತರ ಏಳು ಜನ ಅಧಿಕಾರಿಗಳು ಪರಿಶೀಲನೆಯಲ್ಲಿ ಭಾಗವಹಿಸಿದ್ದರು. ನಂತರ ಬಳ್ಳಾರಿಗೆ ಆಗಮಿಸಿದ ಸಿಬಿಐ ತಂಡ ಅಲ್ಲೇ ತಂಗಿತು.ಬಳ್ಳಾರಿಯ ಅರಣ್ಯ ಇಲಾಖೆ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಬಿಐ ಡಿಐಜಿ ವಿ.ವಿ. ಲಕ್ಷ್ಮಿನಾರಾಯಣ, ಜನವರಿಯಲ್ಲಿ ಆರಂಭವಾಗಿರುವ ತನಿಖೆ ಇದೀಗ ಒಂದು ಹಂತ ತಲುಪಿದೆ. ಜನಾರ್ದನರೆಡ್ಡಿ ಒಡೆತನದ ಓಎಂಸಿ ಹಾಗೂ ಇತರ ಐದು ಕಂಪೆನಿಗಳ ಸಮಗ್ರ ಮಾಹಿತಿ, ವಿವರ ಸಂಗ್ರಹಿಸಲಾಗಿದೆ. ಓಎಂಸಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಸೇರಿದಂತೆ ಅನೇಕರನ್ನು  ತನಿಖೆಯ ಭಾಗವಾಗಿ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ ಎಂದರು.ಕರ್ನಾಟಕದ ಒಟ್ಟು 65 ಗಣಿ ಕಂಪೆನಿಗಳಿಗೆ ನೋಟಿಸ್ ಜಾರಿ ಮಾಡಿ, ಅವುಗಳ 10 ವರ್ಷದ ವಹಿವಾಟಿನ ಮಾಹಿತಿ ನೀಡುವಂತೆ ಕೋರಲಾಗಿತ್ತು. ಎಲ್ಲ ಕಂಪೆನಿಗಳು ನೋಟಿಸ್‌ಗೆ ಉತ್ತರ ನೀಡಿದ್ದು, ಅದಿರಿನ ಗ್ರೇಡ್, ರಫ್ತು ವಿವರ, ಇತರ ಕಂಪೆನಿಗಳೊಂದಿಗೆ ಮಾಡಿಕೊಳ್ಳಲಾದ ಒಡಂಬಡಿಕೆ ಕುರಿತು ಎಲ್ಲ ಮಾಹಿತಿಗಳೂ ಲಭ್ಯವಾಗಿವೆ ಎಂದು ಅವರು ವಿವರಿಸಿದರು.ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಕಂಪೆನಿಗಳಿಗೆ ಸಂಬಂಧಿಸಿದ ಪ್ರಮುಖರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇನ್ನೂ ಎರಡು ದಿನ ಇಲ್ಲೇ ಇದ್ದು, ಓಬಳಾಪುರಂ ಮೈನಿಂಗ್ ಕಂಪೆನಿ-1 ಮತ್ತು 2 (ಓಎಂಸಿ), ಅಂತರಗಂಗಮ್ಮ ಕೊಂಡ ಪ್ರದೇಶದಲ್ಲಿರುವ ಅನಂತಪುರ ಮೈನಿಂಗ್ ಕಂಪೆನಿ (ಎಎಂಸಿ), ವೈ. ಮಹಾಬಲೇಶ್ವರಪ್ಪ ಅಂಡ್ ಸನ್ಸ್ (ವೈಎಂ), ಬಳ್ಳಾರಿ ಐರನ್ ಓರ್ ಪ್ರೈ. ಲಿ. (ಬಿಐಓಪಿ)ನ ಗಣಿ ಪ್ರದೇಶಗಳಿಗೆ ಮತ್ತೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಅವರು ಹೇಳಿದರು.ಈ ಗಣಿ ಪ್ರದೇಶಗಳ ಗಣಿ ಗುತ್ತಿಗೆ, ಪರವಾನಗಿ, ಸದ್ಯದ ಸ್ಥಿತಿಗತಿ, ಬೆಳವಣಿಗೆ ಕುರಿತು ಅರಿಯಲಾಗುತ್ತಿದೆ. ಮೊದಲು ಇಲ್ಲಿ ಯಾವ ಸ್ಥಿತಿ ಇತ್ತು?. ಈಗ ಆಗಿರುವ ಬದಲಾವಣೆಗಳು ಏನು? ಎಂಬುದರ ಬಗ್ಗೆ ತಿಳಿದುಕೊಳ್ಳಲಾಗುತ್ತಿದೆ ಎಂದೂ ಅವರು ತಿಳಿಸಿದರು. ಮಹತ್ವದ ಎಲ್ಲ ದಾಖಲೆಗಳು, ಹೇಳಿಕೆಗಳ ಕುರಿತು ಕೂಲಂಕಷವಾದ ಪರಿಶೀಲನೆ ನಡೆಸಿ, ತಾಳೆ ಮಾಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ತನಿಖೆ ಪೂರ್ಣಗೊಳ್ಳಲಿದೆ ಎಂದು ಅವರು ವಿವರಿಸಿದರು.ಅಕ್ರಮ ಗಣಿಗಾರಿಕೆ, ಗಡಿ- ಗಣಿ ಒತ್ತುವರಿ, ಕೋಟ್ಯಂತರ ರೂಪಾಯಿ ರಾಜಸ್ವ ವಂಚನೆ ಉದ್ದೇಶದಿಂದ ಅಕ್ರಮ ಅದಿರು ಸಾಗಣೆ ಮಾಡಿರುವ ಕುರಿತು ಆಂಧ್ರಪ್ರದೇಶ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿತ್ತು. ಜನವರಿ 11ರಂದು ಮೊದಲ ಬಾರಿಗೆ ಓಬಳಾಪುರಂ ಗ್ರಾಮದ ಬಳಿ ಇರುವ ಮೂರು ಗಣಿಗಳಿಗೆ ಸಿಬಿಐ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry