ಎಜಿ ಆಚಾರ್ಯ ಪದತ್ಯಾಗ

7

ಎಜಿ ಆಚಾರ್ಯ ಪದತ್ಯಾಗ

Published:
Updated:

ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿಜಯಲಲಿತಾ ಅವರನ್ನು ಅಕ್ರಮ ಆಸ್ತಿ ಗಳಿಕೆ ಆರೋಪದಿಂದ`ರಕ್ಷಿಸಲು~ ಬಿಜೆಪಿ ಹೈಕಮಾಂಡ್ ಹೇರಿದ ಒತ್ತಡಕ್ಕೆ ಬೇಸತ್ತ ಅಡ್ವೊಕೇಟ್ ಜನರಲ್ (ಎಜಿ) ಬಿ.ವಿ.ಆಚಾರ್ಯ  ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರ ವಿರುದ್ಧ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಆಗಿಯೂ ಆಚಾರ್ಯ 2005ರಿಂದ ವಾದ ಮಂಡಿಸುತ್ತಿದ್ದಾರೆ. ಇವರೇ ಎಸ್‌ಪಿಪಿಯಾಗಿ ಮುಂದುವರಿದರೆ ಜಯಾ ಅವರನ್ನು ಈ ಪ್ರಕರಣದಿಂದ ರಕ್ಷಿಸುವುದು ಕಷ್ಟವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಆ ಸ್ಥಾನದಿಂದ ಹಿಂದಕ್ಕೆ ಸರಿಯುವಂತೆ ಆಚಾರ್ಯ ಅವರಿಗೆ ಮೇಲಿಂದ ಮೇಲೆ ಒತ್ತಡ ಬರುತ್ತಿತ್ತು. ಆದರೆ ಅದಕ್ಕೆ ಜಗ್ಗದೆ ಅವರು ಎಜಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಹೆಚ್ಚಿದ ಒತ್ತಡ: ರಾಜೀನಾಮೆ ಕುರಿತು `ಪ್ರಜಾವಾಣಿ~ ಆಚಾರ್ಯ ಅವರನ್ನು ಸಂಪರ್ಕಿಸಿದಾಗ ಅವರು, `ಎಸ್‌ಪಿಪಿ ಹಾಗೂ ಎಜಿ ಆಗಿ ಏಕಕಾಲಕ್ಕೆ ಎರಡು ಹುದ್ದೆಯಲ್ಲಿ ಮುಂದುವರಿಯುವ ಬಗ್ಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಕಡೆಗಳಿಂದ ಒತ್ತಡ ಬಂದ ಕಾರಣ ನಾನು ರಾಜೀನಾಮೆ ನೀಡಿದೆ~ ಎಂದರು.`ಜಯಲಲಿತಾ ಪ್ರಕರಣದಲ್ಲಿ ಎಸ್‌ಪಿಪಿ ಆಗಿ ನೇಮಕಗೊಂಡ ಕೆಲವೇ ದಿನಗಳಲ್ಲಿ ಈ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಒತ್ತಾಯ ಬರುತ್ತಿತ್ತು.  ನಾನು  2011ರ ಆಗಸ್ಟ್ 6ರಂದು ಎಜಿ ಆದ ಮೇಲೆ ಈ ಒತ್ತಡ ಹೆಚ್ಚಿತು.

ಎರಡು ಹುದ್ದೆಗಳನ್ನು ಒಂದೇ ಬಾರಿ ನಿರ್ವಹಿಸುವುದು ಸರಿಯಲ್ಲ ಎಂಬ ಕಾರಣ ನೀಡಲಾಯಿತು. ರಾಜ್ಯಪಾಲರಿಗೂ ಕೆಲವರು ಈ ಕುರಿತು ಮನವಿ ಸಲ್ಲಿಸಿದ್ದರು. ಆದರೆ ಯಾವುದೇ ಕಾರಣಕ್ಕೂ ಈ ಹುದ್ದೆಯನ್ನು ಬಿಟ್ಟುಕೊಡಲು ನಾನು ತಯಾರು ಇಲ್ಲ. ಏಕೆಂದರೆ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನನಗೆ ಈ ಹುದ್ದೆ ನಿರ್ವಹಿಸುವಂತೆ ನಿರ್ದೇಶಿಸಿದ್ದಾರೆ. ಆದುದರಿಂದ ಇದು ನನಗೆ ಪವಿತ್ರ ಹುದ್ದೆ~ ಎಂದು ತಿಳಿಸಿದರು.`ಎರಡು ಹುದ್ದೆ ನಿರ್ವಹಿಸುತ್ತಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ನನ್ನ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ (ಇದು ಇತ್ಯರ್ಥಕ್ಕೆ ಬಾಕಿ ಇದೆ). ಬಿಎಂಎಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿಯಾಗಿರುವ ಕಾರಣ, ಹಣಕಾಸಿನ ಅವ್ಯವಹಾರದಲ್ಲಿಯೂ ವಿನಾಕಾರಣ ನನ್ನನ್ನು ಸಿಲುಕಿಸಿದ್ದಾರೆ. ಲೋಕಾಯುಕ್ತ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲು ಮಾಡಿದ್ದಾರೆ. ನಾನು ರಾಜೀನಾಮೆ ನೀಡಬೇಕು ಎನ್ನುವ ಉದ್ದೇಶ ಇದರ ಹಿಂದೆಯೂ ಇದೆಯೋ ಏನೋ ತಿಳಿಯದು. ಆದರೆ ಈ ಪ್ರಕರಣಕ್ಕೂ ನನ್ನ ರಾಜೀನಾಮೆಗೂ ಸಂಬಂಧ ಇಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.ಯಡಿಯೂರಪ್ಪ ಭೇಟಿ: ಆಚಾರ್ಯ ಅವರು ರಾಜೀನಾಮೆ ನೀಡಿರುವ ಸುದ್ದಿ ತಿಳಿಯುತ್ತಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಚಾರ್ಯ ಅವರ ಮನೆಗೆ ತೆರಳಿ ಕೆಲವು ಗಂಟೆ ಚರ್ಚಿಸಿದರು. ಆದರೆ ಚರ್ಚೆ ಕುರಿತು ವಿವರ ತಿಳಿದುಬಂದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry