ಮಂಗಳವಾರ, ಆಗಸ್ಟ್ 20, 2019
25 °C

ಎಟಿಎಂ: `ಆರ್‌ಬಿಐ' ಸೂಚನೆ

Published:
Updated:

ಮುಂಬೈ(ಪಿಟಿಐ): ತುರ್ತಾಗಿ ಹಣ ಬೇಕಿರುತ್ತದೆ. ಸಮೀಪದ `ಎಟಿಎಂ'ಗೆ ತೆರಳುತ್ತೀರಿ. ಕಾರ್ಡ್ ತೂರಿಸಿ ಮೊತ್ತ ನಮೂದಿಸಿ ನಿಮಿಷ ಕಾಯ್ದರೂ ನಗದು ಹೊರಬರದು. ರಶೀತಿ ಪರಿಶೀಲಿಸಿದಾಗ `ನಗದು ಇಲ್ಲ' ಎಂಬ ಒಕ್ಕಣೆ. ಸರಿ ಯಾದ ಸಮಯಕ್ಕೆ ಕೈಕೊಟ್ಟಿದ್ದಕ್ಕೆ ಶಪಿಸುತ್ತಾ ಮುಂದಿನ `ಎಟಿಎಂ'ನತ್ತ ಹೆಜ್ಜೆ ಹಾಕುತ್ತೀರಿ...ಮುಂದಿನ ಬಾರಿ `ಎಟಿಎಂ'ನಿಂದ ಹಣ ಪಡೆಯಲು ಹೋದಾಗ ಈ ಕೆಟ್ಟ ಅನುಭವವಾಗದು. ಅಮೂಲ್ಯ ಸಮಯವೂ ಹಾಳಾಗದು. `ಎಟಿಎಂ'ನಲ್ಲಿ ವಹಿವಾಟು ಆರಂಭಿಸುವ ಮೊದಲೇ `ನಗದು ಇಲ್ಲ' ಎಂಬ ಮಾಹಿತಿ ಪರದೆ ಮೇಲೆ ಮೂಡುತ್ತದೆ.ಯಂತ್ರದಲ್ಲಿ `ಹಣ ಇಲ್ಲ' ಎಂಬುದನ್ನು ತಿಳಿಯಲು ವಹಿವಾಟು ಮುಗಿವವರೆಗೂ ಕಾಯುವ ಅಗತ್ಯವಿಲ್ಲ.

ಈ ಸೌಲಭ್ಯವನ್ನು ಎಲ್ಲ `ಎಟಿಎಂ'ಗಳಲ್ಲಿ ಕಡ್ಡಾಯವಾಗಿ ಜಾರಿಗೆ ತರುವಂತೆ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ.

ಪ್ರತಿ `ಎಟಿಎಂ' ಗುರುತು ಸಂಖ್ಯೆಯನ್ನೂ ಅದೇ ಘಟಕದಲ್ಲಿ ಪ್ರದರ್ಶಿಸುವಂತೆ `ಆರ್‌ಬಿಐ' ಸೂಚಿಸಿದೆ. ಗ್ರಾಹಕರು ವಹಿವಾಟು ನಡೆಸುವಾಗ ತಾಂತ್ರಿಕ ಅಡಚಣೆಯಾದರೆ ದೂರು ನೀಡಲು ಈ ಸಂಖ್ಯೆ ನೆರವಾಗುತ್ತದೆ. ಯಾವ `ಎಟಿಎಂ'ನಲ್ಲಿ ವಹಿವಾಟು ನಡೆದಿದೆ ಎನ್ನುವುದನ್ನು ನಿಖರವಾಗಿ ತಿಳಿಯಬಹುದು.

  ಜತೆಗೆ ದೂರು ಸಲ್ಲಿಸಬೇಕಿರುವ ಉಚಿತ ದೂರವಾಣಿ ಸಂಖ್ಯೆ, ದೂರು ಸ್ವೀಕರಿಸುವ ಅಧಿಕಾರಿ ವಿವರವನ್ನೂ `ಎಟಿಎಂ' ಘಟಕದಲ್ಲಿ ಪ್ರದರ್ಶಿಸಬೇಕು. ಬ್ಯಾಂಕ್ ವೆಬ್‌ಸೈಟ್‌ನಲ್ಲೂ ಈ ಕುರಿತು ಮಾಹಿತಿ ಇರಬೇಕು ಎಂದು ಸೂಚನೆ ನೀಡಿದೆ. ಆನ್‌ಲೈನ್ ಮತ್ತು `ಎಟಿಎಂ' ವಂಚನೆ ಪ್ರಕರಣಗಳನ್ನು ತಡೆಗಟ್ಟಲು ಇನ್ನಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಬ್ಯಾಂಕುಗಳಿಗೆ `ಆರ್‌ಬಿಐ' ಸೂಚಿಸಿದೆ.

Post Comments (+)