ಮಂಗಳವಾರ, ಜೂನ್ 15, 2021
26 °C

ಎಟಿಎಂ ಭದ್ರತಾ ಸಿಬ್ಬಂದಿಗೆ ಚಾಕು ಇರಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಣಸವಾಡಿ ಬಳಿಯ ಕಮ್ಮನಹಳ್ಳಿ ಮುಖ್ಯರಸ್ತೆ­ಯಲ್ಲಿರುವ ಕಾರ್ಪೊರೇಷನ್‌ ಬ್ಯಾಂಕ್‌ ಎಟಿಎಂ ಘಟಕಕ್ಕೆ ನುಗ್ಗಿದ ದುಷ್ಕರ್ಮಿಗಳು ಘಟಕದ ಭದ್ರತಾ ಸಿಬ್ಬಂದಿಗೆ ಚಾಕುವಿನಿಂದ ಇರಿದು ಪರಾರಿ­ಯಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡಿರುವ ಭದ್ರತಾ ಸಿಬ್ಬಂದಿ ಮುರುಗನ್‌ (38) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಕಮ್ಮನಹಳ್ಳಿಯಲ್ಲಿ ಕಾರ್ಪೊರೇಷನ್‌ ಬ್ಯಾಂಕ್‌ ಶಾಖೆಯ ಕಟ್ಟಡಕ್ಕೆ ಹೊಂದಿಕೊಂಡಂತೆ ಮುಂಭಾಗ­ದಲ್ಲೇ ಎಟಿಎಂ ಘಟಕವಿದೆ. ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಮುರುಗನ್‌, ಘಟಕದೊಳಗೆ ನಿದ್ರೆ ಮಾಡುತ್ತಿದ್ದರು. ಆಗ ರಾತ್ರಿ 1.15ರ ಸುಮಾರಿಗೆ ಘಟಕದೊಳಗೆ ನುಗ್ಗಿರುವ ದುಷ್ಕರ್ಮಿಗಳು ಮುರುಗನ್‌ ಮೇಲೆ ಹಲ್ಲೆ ನಡೆಸಿ, ಹೊಟ್ಟೆ ಮತ್ತು ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ವೇಳೆ ಮುರುಗನ್‌ ರಕ್ಷಣೆಗಾಗಿ ಕೂಗಿಕೊಂಡಿ­ದ್ದಾರೆ. ಘಟಕದ  ಸಮೀಪವೇ ಇರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂ ಘಟಕದಲ್ಲಿ ಭದ್ರತಾ ಸಿಬ್ಬಂದಿ­ಯಾಗಿರುವ ರಘು ಎಂಬುವರು ಮುರುಗನ್‌ ಅವರ ಚೀರಾಟ ಕೇಳಿ ಘಟಕದ ಬಳಿ ಬರುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಇಡೀ ಘಟನಾವಳಿಯ ದೃಶ್ಯ ಎಟಿಎಂ ಘಟಕ­ದೊಳಗಿನ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆ ದೃಶ್ಯಾವಳಿಯನ್ನು ಪರಿಶೀಲಿಸಲಾಗಿದ್ದು, ಆರೋಪಿ­ಗಳು ಎಟಿಎಂ ಯಂತ್ರದಿಂದ ಹಣ ದೋಚುವ ಪ್ರಯತ್ನ ಮಾಡಿಲ್ಲ ಎಂದು ಗೊತ್ತಾಗಿದೆ. ಮುರುಗನ್‌ ಬಳಿ ಬಂದೂಕು ಸೇರಿದಂತೆ ಯಾವುದೇ ಶಸ್ತ್ರಾಸ್ತ್ರಗಳು ಇರಲಿಲ್ಲ. ವೈಯಕ್ತಿಕ ದ್ವೇಷದ ಕಾರಣಕ್ಕೆ ದುಷ್ಕರ್ಮಿ­ಗಳು ಅವರ ಮೇಲೆ ಹಲ್ಲೆ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ತಮಿಳುನಾಡು ಮೂಲದ ಮುರುಗನ್‌, ಕುಟುಂಬ ಸದಸ್ಯರೊಂದಿಗೆ ನಗರದ ರಾಮಸ್ವಾಮಿಪಾಳ್ಯದಲ್ಲಿ ವಾಸವಾಗಿದ್ದಾರೆ. ಅವರು ಆ ಘಟಕದಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿದ್ದಾರೆ. ಘಟನೆ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ದೂರು  ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.