ಮಂಗಳವಾರ, ಜನವರಿ 28, 2020
17 °C
ಜಿಲ್ಲೆಯಲ್ಲೂ ಕೆಲವು ಬ್ಯಾಂಕ್‌ಗಳಿಗೆ ನೋಟಿಸ್, ಶೀಘ್ರ ಸಿಬ್ಬಂದಿ ನೇಮಿಸುವ ವಿಶ್ವಾಸ

ಎಟಿಎಂ ರಕ್ಷಣೆಗೆ ಭದ್ರತಾ ಸಿಬ್ಬಂದಿ ಕೊರತೆ

ಪ್ರಜಾವಾಣಿ ವಾರ್ತೆ/ ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ನಗರದಲ್ಲಿರುವ ಭದ್ರತಾ ಸಿಬ್ಬಂದಿ ರಹಿತ ವಿವಿಧ ಬ್ಯಾಂಕ್‌ ಗಳ ಎಟಿಎಂ ಘಟಕಗಳನ್ನು ನಿತ್ಯ ರಾತ್ರಿ ವೇಳೆ ಬಾಗಿಲು ಮುಚ್ಚಿಸಲಾಗುತ್ತಿದೆ!ಹೌದು, ಬೆಂಗಳೂರಿನ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದ ಘಟನೆಯ ತರುವಾಯ, ಎಲ್ಲ ಬ್ಯಾಂಕ್ ನವರಿಗೂ ಎಟಿಎಂ ಗಳಿಗೆ ಭದ್ರತಾ ಸಿಬ್ಬಂದಿ ನೇಮಿಸುವಂತೆ ಪೊಲೀಸ್ ಇಲಾಖೆ ಸೂಚಿಸಿತ್ತು. ಈ ಆದೇಶದ ಪ್ರಕಾರ ಜಿಲ್ಲಾ ಪೊಲೀಸ್ ಇಲಾಖೆ ಚಿತ್ರದುರ್ಗ ನಗರದ ಎಂಟು ಎಟಿಎಂ ಗಳನ್ನು ನಿತ್ಯ ರಾತ್ರಿ ಮುಚ್ಚಿಸಲು ಸೂಚಿಸಿದೆ. ಆದೇಶ ಹೊರಡಿಸಿದ ಆರಂಭದಲ್ಲಿ ನಿತ್ಯ ರಾತ್ರಿ ಪೊಲೀಸರೇ ಎಟಿಎಂ ಘಟಕಗಳ ಶಟರ್ ಎಳೆಯುತ್ತಿದ್ದರು. ನಂತರ ಬೆಳಿಗ್ಗೆ ಬ್ಯಾಂಕ್‌ ಸಿಬ್ಬಂದಿ ಹಣ ತುಂಬಲು ಬಂದಾಗ ಶಟರ್ ತೆರೆಯುತ್ತಿದ್ದರು. ಈಗ ಪೊಲೀಸ್ ಇಲಾಖೆ ಬ್ಯಾಂಕ್‌ಗಳಿಗೆ ನೋಟಿಸ್ ನೀಡಿ, ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳುವಂತೆ ಸೂಚಿಸಿದೆ. ಎಟಿಎಂ ಕೇಂದ್ರಗಳ ರಕ್ಷಣೆಯನ್ನು ಬ್ಯಾಂಕ್‌ನವರಿಗೆ ವಹಿಸಿದೆ.ಜಿಲ್ಲೆಯಲ್ಲಿ ಎಟಿಎಂ ಸಂಖ್ಯೆ: ಜಿಲ್ಲೆಯಲ್ಲಿ ಒಟ್ಟು 21 ಬ್ಯಾಂಕ್ ಗಳಿವೆ. 171 ಶಾಖೆಗಳಿವೆ. ಅದರಲ್ಲಿ ಖಾಸಗಿ ಬ್ಯಾಂಕ್ , ಗ್ರಾಮೀಣ ಬ್ಯಾಂಕ್, ಸರ್ಕಾರಿ ಸ್ವಾಮ್ಯದ ಬ್ಯಾಂಕ್. ಎಲ್ಲವೂ ಸೇರಿವೆ. ಪ್ರಗತಿ ಗ್ರಾಮೀಣ ಬ್ಯಾಂಕ್ 78 ಶಾಖೆಗಳನ್ನು ಹೊಂದಿ ಮೊದಲ ಸ್ಥಾನದಲ್ಲಿದೆ. ಕೆನರಾ ಬ್ಯಾಂಕ್ ಶಾಖೆ 16, ಎಸ್‌ಬಿಎಂ 14 ಹಾಗೂ ವಿಜಯ ಬ್ಯಾಂಕ್ 11 ಶಾಖೆಗಳನ್ನು ಹೊಂದಿವೆ.ಜಿಲ್ಲೆಯಲ್ಲಿ  84 ಎಟಿಎಂ ಕೇಂದ್ರಗಳಿವೆ. ಅದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನವರದ್ದೇ ಸಿಂಹಪಾಲು (14). ನಂತರದ ಸ್ಥಾನ ಕೆನರಾಬ್ಯಾಂಕ್ (9), ಆಕ್ಸಿಸ್ ಬ್ಯಾಂಕ್ (8). ಶೇ 40 ರಷ್ಟು ಖಾಸಗಿ ಬ್ಯಾಂಕ್ ಎಟಿಎಂಗಳಿವೆ. ಅವುಗಳಲ್ಲಿ ಬಹುತೇಕ ಎಲ್ಲ ಬ್ಯಾಂಕ್ ಗಳಿಗೂ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.ಭದ್ರತೆ ವ್ಯವಸ್ಥೆ: ಸರ್ಕಾರಿ ಸ್ವಾಮ್ಯದ ಎಟಿಎಂಗಳಲ್ಲಿ ಬ್ಯಾಂಕ್‌ನಿಂದಲೇ ಭದ್ರತಾ ಸಿಬ್ಬಂದಿಯನ್ನು ನೇಮಿಸಿದೆ. ಹೈದರಾಬಾದ್, ಹುಬ್ಬಳ್ಳಿ, ಬೆಂಗಳೂರು ಮೂಲದ ಸೆಕ್ಯುರಿಟಿ ಏಜೆನ್ಸಿಗಳು ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಂಡು ಸಿಬ್ಬಂದಿಯನ್ನು ನೇಮಿಸಿವೆ. ಸೆಕ್ಯುರಿಟಿ ಗಾರ್ಡ್‌ಗಳಲ್ಲಿ ಕೆಲವರಿಗೆ 8 ಗಂಟೆ ಕೆಲಸ, ₨ 8 ಸಾವಿರ  ಸಂಬಳ, ಉಳಿಯಲು ವಸತಿ. ಇನ್ನು ಕೆಲವರಿಗೆ 12 ಗಂಟೆ ಕೆಲಸ, ₨ 8 ಸಾವಿರ ಸಂಬಳ, ವಸತಿ ವ್ಯವಸ್ಥೆ ಇಲ್ಲ. ಹೀಗೆ ನಗರದ ವಿವಿಧೆಡೆ ಇರುವ ಎಟಿಎಂಗಳಿಗೆ ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ.ಜಿಲ್ಲೆಯಲ್ಲಿ ಎಸ್‌ಬಿಐ ಬ್ಯಾಂಕ್‌ನ 7 ಎಟಿಎಂ ಘಟಕಗಳಿವೆ. ನಗರದಲ್ಲಿ 3 ಘಟಕಗಳನ್ನು ಹೊರಗುತ್ತಿಗೆ ನೀಡಲಾಗಿದೆ. ಆ ಮೂರರಲ್ಲೂ ಭದ್ರತಾ ಸಿಬ್ಬಂದಿಯನ್ನು ನೇಮಿಸಿದ್ದಾರೆ. ನಗರದಲ್ಲಿರುವ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿ ಕಾಣಿಸುತ್ತಿಲ್ಲ. ‘ಕೆನರಾ ಬ್ಯಾಂಕ್‌ನ ಯಾವ ಎಟಿಎಂ ಕೇಂದ್ರಗಳಲ್ಲೂ ಭದ್ರತಾ ಸಿಬ್ಬಂದಿ ನೇಮಿಸಿಲ್ಲ. ಸರ್ಕಾರದ ಆದೇಶದ ನಂತರ, ಬ್ಯಾಂಕ್‌ನ ಉನ್ನತಮಟ್ಟದಲ್ಲಿ, ಪಾಲಿಸಿ ಹಂತದಲ್ಲಿ ಈ ಕುರಿತು ಚರ್ಚೆಯಾಗುತ್ತಿದೆ’ ಎನ್ನುತ್ತಾರೆ ಕೆನರಾ ಬ್ಯಾಂಕ್ ನಗರ ಶಾಖೆಯ ಅಧಿಕಾರಿ ವಿಶ್ವನಾಥ್.ಗ್ರಾಹಕರ ಸಹಕಾರ ಅಗತ್ಯ: ಪ್ರತಿಯೊಂದು ಎಟಿಎಂ ಗಳಿಗೆ ಭದ್ರತೆ ಒದಗಿಸಬೇಕಾದರೆ, ಮತ್ತೆ ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಬೀಳುತ್ತದೆ. ಇದರ ಬದಲು ಗ್ರಾಹಕರೇ ಬ್ಯಾಂಕ್‌ನೊಂದಿಗೆ ಸಹಕರಿಸಿ, ರಾತ್ರಿ ಅಥವಾ ಮುಂಜಾನೆ ಎಟಿಎಂ ಕೇಂದ್ರಕ್ಕೆ ಹೋಗುವುದನ್ನು ನಿಲ್ಲಿಸಿದರೆ, ಅನಾಹುತಗಳನ್ನು ತಪ್ಪಿಸಬಹುದು’ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸಿದ ಬ್ಯಾಂಕ್ ಸಿಬ್ಬಂದಿ.ಇತ್ತೀಚೆಗೆ ಬಹುತೇಕ ಎಲ್ಲ ಬ್ಯಾಂಕ್‌ಗಳು ಸುಸಜ್ಜಿತ ಎಟಿಎಂ ಕೇಂದ್ರಗಳನ್ನು ಸ್ಥಾಪಿಸುತ್ತಿವೆ. ಭದ್ರತೆ ದೃಷ್ಟಿಯಿಂದ ಕೆಲವರು ಭದ್ರತಾ ಸಿಬ್ಬಂದಿ ನೇಮಿಸಿದರೆ, ಇನ್ನೂ ಕೆಲವರು ಸಿಸಿಟಿವಿ, ತುರ್ತು ಕರೆಗಂಟೆಯಂತಹ ವಿವಿಧ ಸೌಲಭ್ಯಗಳನ್ನು ಜೋಡಿಸಿ­ರುತ್ತಾರೆ. ಎಲ್ಲ ಎಟಿಎಂಗಳಲ್ಲೂ ಕಾರ್ಡ್ ಉಜ್ಜಿ ಒಳಗೆ ಹೋಗಿ, ಬೋಲ್ಟ್ ಹಾಕಿಕೊಳ್ಳುವ ವ್ಯವಸ್ಥೆ ಇದೆ. ಆದರೆ, ಕೆಲವು ಗ್ರಾಹಕರು ಈ ಸೌಲಭ್ಯಗಳನ್ನು ಹಾಳುಗೆಡವುತ್ತಾರೆ. ಎಟಿಎಂ ಸೌಲಭ್ಯ ಕೊಡುವುದು, ನಿರ್ವಹಣೆ  ಮಾಡುವುದು ಬ್ಯಾಂಕ್ ಜವಾಬ್ದಾರಿ ಯಾದರೂ, ಅದರ ರಕ್ಷಣೆ ಗ್ರಾಹಕರ ಮೇಲೂ ಇರುತ್ತದೆ’ ಎನ್ನುವುದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸ್ ಅಭಿಪ್ರಾಯ.ನೋಟಿಸ್ ಕೊಟ್ಟಿದ್ದೇವೆ

ನಗರದಲ್ಲಿ ಎಂಟು ಎಟಿಎಂಗಳಿಗೆ ಭದ್ರತೆ ಒದಗಿಸಿಲ್ಲ. ಈ ಬಗ್ಗೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಿದ್ದೇವೆ. ಅಲ್ಲಿಯವರೆವಿಗೆ ಗ್ರಾಹಕರಿಗೆ ನಿತ್ಯದ ವಹಿವಾಟಿಗೆ ತೊಂದರೆಯಾಗದಂತೆ ರಾತ್ರಿವೇಳೆ ಮಾತ್ರ ಎಟಿಎಂ ಬಂದ್ ಮಾಡಿಸುತ್ತಿದ್ದೇವೆ. ಎಟಿಎಂ ಸುರಕ್ಷತೆ ಜವಾಬ್ದಾರಿ ಬ್ಯಾಂಕ್ ಸಿಬ್ಬಂದಿ ವಹಿಸಿಕೊಳ್ಳಬೇಕು. 

–ಶ್ರೀಧರ ಶಾಸ್ತ್ರಿ, ಇನ್‌ಸ್ಪೆಕ್ಟರ್, ನಗರಠಾಣೆಶೀಘ್ರದಲ್ಲಿಯೇ ಕ್ರಮ


ಹಳ್ಳಿಯಾಗಲಿ, ಪಟ್ಟಣವಾಗಲಿ, ಎಲ್ಲೇ ಎಟಿಎಂ ಆರಂಭಿಸಬೇಕಾದರೂ ಮೊದಲು ಭದ್ರತಾ ಸಿಬ್ಬಂದಿ ನೇಮಿಸುತ್ತೇವೆ. ಒಂದು ಪಕ್ಷ ಹೊರಗುತ್ತಿಗೆ ನೀಡಿದರೂ ಅವರಿಗೇ ಜವಾಬ್ದಾರಿವಹಿಸುತ್ತೇವೆ.

----ಪಿ.ಎಸ್. ಗಣೇಶ್ ರಾವ್, ಎಟಿಎಂ ಚಾನೆಲ್ ಮ್ಯಾನೇಜರ್, ಎಸ್‌ಬಿಐ ದಾವಣಗೆರೆ

ಪ್ರತಿಕ್ರಿಯಿಸಿ (+)