ಎಟುಕದ ಸ್ವರ್ಗ! (ಚಿತ್ರ: ಜನ್ನತ್ 2)

7

ಎಟುಕದ ಸ್ವರ್ಗ! (ಚಿತ್ರ: ಜನ್ನತ್ 2)

Published:
Updated:

ನಾಯಕನದು `ವಿಶ್ವಶಾಂತಿ~ ಬಯಸುವ ಮನಸ್ಸು. `ಮನುಷ್ಯ ಬಂದೂಕು ಹಿಡಿಯುವುದಕ್ಕೆ ಕಾರಣವಿರುತ್ತದೆ. ಅದು ತಪ್ಪೇನೂ ಅಲ್ಲ. ಪ್ರಪಂಚದ ಪ್ರತಿಯೊಬ್ಬನ ಕೈಯಲ್ಲೂ ಬಂದೂಕು ಇದ್ದರೆ ಯುದ್ಧವೇ ನಡೆಯುವುದಿಲ್ಲ. ಕೇವಲ ಶಾಂತಿ ನೆಲೆಸಿರುತ್ತದೆ!~. ಇದು ಆತ ಪದೇಪದೇ ಪ್ರತಿಪಾದಿಸುವ ಸಿದ್ಧಾಂತ. ಶಾಂತಿ ಮೂಡಿಸುವ ಕಾರ್ಯದಲ್ಲಿ ಆತನೂ ಭಾಗಿ.

 

ಏಕೆಂದರೆ ಆತನ ವೃತ್ತಿ ಬಂದೂಕು ಪೂರೈಸುವುದು! ತನ್ನ ಕೆಲಸದಲ್ಲೇ `ಜನ್ನತ್~ (ಸ್ವರ್ಗ) ಕಾಣುವುದು ನಾಯಕನ ಆಸೆ. ಹೀಗಾಗಿ ಕೆಟ್ಟ ಬದುಕಿನ ಹಾದಿಯ ನಡುವೆಯೂ ಒಳ್ಳೆಯತನ ಇಣುಕುತ್ತದೆ. ಆದರೆ ನಾಯಕಿಯ ಬೆನ್ನತ್ತುವ ಇಮ್ರಾನ್ ಹಶ್ಮಿ `ಹಳೆ ಚಾಳಿ~ ಇಲ್ಲೂ ಮುಂದುವರೆದಿದೆ.ಪಾತ್ರಗಳನ್ನು ಹೊಸ ಚೌಕಟ್ಟಿನಲ್ಲಿ ಹೆಣೆಯುವುದರ ವಿಫಲತೆಯ ಹೊರತಾಗಿ, 2008ರಲ್ಲಿ ಬಿಡುಗಡೆಯಾದ `ಜನ್ನತ್~ ಚಿತ್ರಕ್ಕಿಂತ ಇದು ವಿಭಿನ್ನ. ನಿರ್ದೇಶಕ ಕುನಾಲ್ ದೇಶ್‌ಮುಖ್ ಹಿಂದಿನ ಚಿತ್ರದ ಅನುಕರಣೆಗೆ ಒಳಗಾಗದಿರಲು ಹೆಣಗಾಡಿದ್ದಾರೆ.

 

ಕ್ರಿಕೆಟ್ ಮ್ಯಾಚ್‌ಫಿಕ್ಸಿಂಗ್‌ನಂತಹ ಸಂಕೀರ್ಣ ಸಮಸ್ಯೆಯನ್ನು ಇಟ್ಟುಕೊಂಡಿದ್ದ ಮೊದಲ ಭಾಗ ಕೌತುಕದ ವಿಷಯಗಳನ್ನು ಒಳಗೊಂಡಿತ್ತು. ಅದರ ಮುಂದುವರಿದ ಭಾಗವಾಗದಂತೆ ಎಚ್ಚರಿಕೆ ವಹಿಸಿರುವ ನಿರ್ದೇಶಕರಿಗೆ ಅಷ್ಟೇ ಘನವಾದ ಹಿನ್ನೆಲೆಯನ್ನು ಕಥೆಗೆ ಒದಗಿಸಲು ಸಾಧ್ಯವಾಗಿಲ್ಲ. ಇಲ್ಲೇ ಸ್ವರ್ಗ ಇಲ್ಲೇ ನರಕ ಎಂಬುದನ್ನು ನಿರೂಪಿಸಲು ಅವರನ್ನು ಗೊಂದಲಗಳು ಕಾಡಿವೆ.ನಿರೂಪಣೆಯಲ್ಲಿ ಕಂಡುಬರುವ ಕೌಶಲ್ಯ ಚಿತ್ರಕಥೆಯಲ್ಲಿ ಒಡಮೂಡುವುದಿಲ್ಲ. ಈ ಕೊರತೆಯನ್ನು ಮಾತಿನ ಮೂಲಕ ತುಂಬಿಕೊಡುವ ಪ್ರಯತ್ನ ಅಲ್ಲಲ್ಲಿ ಯಶಸ್ವಿಯಾಗುತ್ತದೆ.

 

ಬಂದೂಕು ಪೂರೈಕೆ ವ್ಯವಹಾರ ಮಾಡುವ ನಾಯಕನನ್ನು ಪೊಲೀಸ್ ಅಧಿಕಾರಿ ತನ್ನ ಮಾಹಿತಿದಾರನಾಗಿ ಬಳಸಿಕೊಳ್ಳುತ್ತಾನೆ. ಆತನ ಮೂಲಕ ಶಸ್ತ್ರಾಸ್ತ್ರ ಪೂರೈಸುವ ಮಾಫಿಯಾ ಜಾಲವನ್ನು ಬೇಧಿಸುವುದು ಆತನ ಉದ್ದೇಶ. ಈ ಗುದ್ದಾಟದ ಅಡಕತ್ತರಿಯಲ್ಲಿ ಸಿಕ್ಕಿಕೊಳ್ಳುವ ನಾಯಕನಿಗೆ ವೈದ್ಯೆಯೊಬ್ಬಳ ಮೇಲೆ ಪ್ರೀತಿ ಮೂಡುತ್ತದೆ.

 

ನಾಯಕಿಯ ತಂದೆಯೇ ಈ ಅವ್ಯವಹಾರದ ಮೂಲ ರೂವಾರಿ ಎಂಬುದು ಅವನಿಗೆ ಮದುವೆಯಾದ ನಂತರ ತಿಳಿಯುತ್ತದೆ. ತನ್ನ ವೃತ್ತಿ ತೊರೆದು ಒಳ್ಳೆಯವನಾಗುವ ಆತನ ಬಯಕೆಗೆ ಪೊಲೀಸ್ ಅಧಿಕಾರಿ ಅಡ್ಡಗಾಲು ಹಾಕುತ್ತಾನೆ.

 

ಮಾಫಿಯಾದೊಳಗೆ ಸೇರಿಕೊಂಡು ಪೊಲೀಸರಿಗೆ ಮಾಹಿತಿ ನೀಡುವ ನಾಯಕ ತನ್ನ ಗುರಿ ಮುಟ್ಟಿದರೆ `ಸ್ವರ್ಗ~ಕ್ಕೆ ಮೂರೇ ಗೇಣೆಂದು ಕನವರಿಸುತ್ತಾನೆ. ಇದ್ದಕ್ಕಿದ್ದಂತೆ ಅಂತ್ಯ ಎದುರಾಗುತ್ತದೆ.ನೀರಸ ಸನ್ನಿವೇಶಗಳ ನಡುವೆ ಅಂತ್ಯದಲ್ಲಾದರೂ ರೋಚಕ ಹೊಡೆದಾಟ ಕಾಣಬಹುದೇನೋ ಎಂದು ನಿರೀಕ್ಷಿಸಿದವರಿಗೆ ಅಲ್ಲೂ ಎದುರಾಗುವುದು ನಿರಾಸೆ.

ಇಮ್ರಾನ್ ಹಶ್ಮಿ ಚಿತ್ರವೆಂದರೆ ಅಧರ ಚುಂಬನವಿರಲೇಬೇಕು ಎಂಬ ಅಲಿಖಿತ ನಿಯಮ ಬಾಲಿವುಡ್‌ನಲ್ಲಿದೆ.

 

ಆದರೆ ಮುಜುಗರ ಹುಟ್ಟಿಸುವ ದೃಶ್ಯಗಳಿಗೆ ಇಲ್ಲಿ ತಕ್ಕಮಟ್ಟಿನ ಕಡಿವಾಣವಿದೆ. ಹಶ್ಮಿ ಆರಂಭದಲ್ಲಿ ಪಾಲಿಸಿಕೊಂಡು ಬರುವ ಸಂಭಾಷಣೆಯ ಉಚ್ಚರಣಾ ಶೈಲಿ ಕೊನೆಕೊನೆಗೆ ಅವರಿಗೆ ಮರೆತೇ ಹೋಗಿರುತ್ತದೆ. ಗೋಜಲು ಗೋಜಲಾಗಿರುವ ಪಾತ್ರಕ್ಕೂ ರಣದೀಪ್ ಹೂಡಾ ಜೀವ ತುಂಬಿದ್ದಾರೆ.ಮೊದಲ ಚಿತ್ರದಲ್ಲಿ ಇಶಾ ಗುಪ್ತಾಗೆ ಹೆಚ್ಚಿನ ಕೆಲಸವಿಲ್ಲದಿದ್ದರೂ ಗಮನ ಸೆಳೆಯುತ್ತಾರೆ. ನೋಡಿದಾಗ ಭಯ ಹುಟ್ಟಿಸುವ ಖಳನಾಯಕ ಮನೀಶ್ ಚೌಧುರಿ ನಟನೆಯಲ್ಲಿ ಅಬ್ಬರವಿಲ್ಲ. ನಿತಿನ್ ಗುಪ್ತಾ, ಇಮ್ರಾನ್ ಜಾಹಿದ್ ಅಭಿನಯ ಗಮನಾರ್ಹ.ಪ್ರೀತಮ್ ಸಂಗೀತ ಗುನುಗುವಂತಹ ಹಾಡುಗಳನ್ನು ನೀಡಿದೆ. ಬಾಬ್ಬಿ ಸಿಂಗ್ ಕ್ಯಾಮೆರಾ ಕಣ್ಣು ಶುಷ್ಕ ಸನ್ನಿವೇಶಗಳನ್ನೂ ವರ್ಣಮಯವಾಗಿ ಹಿಡಿದಿಡುತ್ತದೆ. ಸಂಜಯ್ ಮಸೂಮ್ ಸಂಭಾಷಣೆಯಲ್ಲಿ ಲವಲವಿಕೆಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry