ಎಡಪಂಥೀಯ ಉಗ್ರವಾದ ಅಪಾಯ

7

ಎಡಪಂಥೀಯ ಉಗ್ರವಾದ ಅಪಾಯ

Published:
Updated:
ಎಡಪಂಥೀಯ ಉಗ್ರವಾದ ಅಪಾಯ

ಕೋಲ್ಕತ್ತ, (ಪಿಟಿಐ): ಭಯೋತ್ಪಾದಕ ಕೃತ್ಯದಿಂದ ಉಂಟಾಗಿರುವ ಸಾವು ನೋವುಗಳಿಗಿಂತ ಎಡಪಂಥೀಯ ಭಯೋತ್ಪಾದನೆ ದೇಶಕ್ಕೆ ಹೆಚ್ಚು ಗಂಡಾಂತರಕಾರಿ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಭಯೋತ್ಪಾದನೆ ದೊಡ್ಡ ಸವಾಲು ನಿಜ. ಆದರೆ ಎಡಪಂಥೀಯ ಭಯೋತ್ಪಾದನೆ ಇನ್ನೂ ದೊಡ್ಡ ಸವಾಲು. ಈ ಭಯೋತ್ಪಾದನೆಯನ್ನು ಎದುರಿಸಲು ನಾವು ಸಜ್ಜಾಗುತ್ತಿದ್ದೇವೆ ಎಂದು ಅವರು ಭಾರತ ವಾಣಿಜ್ಯ ಒಕ್ಕೂಟದ ವಿಶೇಷ ಅಧಿವೇಶನದಲ್ಲಿ ತಿಳಿಸಿದ್ದಾರೆ.ಎಡಪಂಥೀಯ ಭಯೋತ್ಪಾದನೆ ಬಲವಾಗಿರುವ ಕಾರಣಕ್ಕೆ ಛತ್ತೀಸ್‌ಗಡದ ಬಸ್ತಾರ್‌ನಲ್ಲಿ ಅಭಿವೃದ್ಧಿ ಕಾರ್ಯ ನಡೆಯದಿರುವುದನ್ನು ಉದಾಹರಿಸಿದ ಅವರು, ಎಡಪಂಥೀಯ ಉಗ್ರರ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸುವುದು ಮತ್ತು ಆ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸುವ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.ಹಿಂಸೆ ತೊರೆದು ಮಾತುಕತೆಗೆ ಬರುವಂತೆ ಪಶ್ಚಿಮ ಬಂಗಾಳ ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ನಕ್ಸಲೀಯರನ್ನು ಆಹ್ವಾನಿಸಿವೆ. ಸಿದ್ಧಾಂತಗಳನ್ನು ಬದಿಗೊತ್ತಿ ಶಸ್ತ್ರಾಸ್ತ್ರ ತ್ಯಜಿಸಿ ಎಂದು ನಾವು ಹೇಳುತ್ತಿಲ್ಲ. ಬದಲಿಗೆ ಹಿಂಸಾಚಾರವನ್ನು ನಿಲ್ಲಿಸಿ ಮಾತುಕತೆಗೆ ಬನ್ನಿ ಎಂದು ಕರೆಯುತ್ತಿದ್ದೇವೆ ಎಂದು ಚಿದಂಬರಂ ಸ್ಪಷ್ಟಪಡಿಸಿದರು.ಭದ್ರತಾ ಪಡೆಗಳನ್ನು ಬಲಪಡಿಸುವುದರತ್ತ ಹೆಚ್ಚಿನ ಗಮನ ಹರಿಸಲಾಗಿದ್ದು, ಈ ವರ್ಷ 220 ಐಪಿಎಸ್ ಅಧಿಕಾರಿಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಭಯೋತ್ಪಾದನೆ ಹಾವಳಿ ಹೆಚ್ಚಾಗಿರುವ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ನೆರೆಯ ರಾಷ್ಟ್ರಗಳಾಗಿರುವುದರಿಂದ ನಾವು ಭಯೋತ್ಪಾದಕರ ಸಮಸ್ಯೆಯನ್ನು ಹೆಚ್ಚಾಗಿ ಎದುರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ, ಈ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕಾದ ಅಗತ್ಯ ಇದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry