ಎಡಿಇಗೆ ಅಚ್ಚರಿಯ ಜಯ

7

ಎಡಿಇಗೆ ಅಚ್ಚರಿಯ ಜಯ

Published:
Updated:
ಎಡಿಇಗೆ ಅಚ್ಚರಿಯ ಜಯ

ಬೆಂಗಳೂರು: ರಾಜ್‌ಕಿರಣ್ ತಂದಿತ್ತ ಗೋಲಿನ ನೆರವಿನಿಂದ ಎಡಿಇ ತಂಡದವರು ಇಲ್ಲಿ ನಡೆಯುತ್ತಿರುವ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಅಚ್ಚರಿ ಗೆಲುವು ಸಾಧಿಸಿದ್ದಾರೆ.ಅಶೋಕನಗರದಲ್ಲಿರುವ ಬಿಡಿಎಫ್‌ಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಎಡಿಇ 1-0 ಗೋಲಿನಿಂದ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡಕ್ಕೆ ಆಘಾತ ನೀಡಿತು. ಪಂದ್ಯ ಆರಂಭವಾಗಿ ಎರಡೇ ನಿಮಿಷದಲ್ಲಿ ಕಿರಣ್ ಗೋಲು ಗಳಿಸಿದರು. ಸ್ಟೀಫನ್ ರಾಜ್ ನೀಡಿದ ಪಾಸ್‌ಅನ್ನು ಪಡೆದ ಅವರು ಎದುರಾಳಿ ಗೋಲಿ ನಾಗೇಂದ್ರ ಅವರನ್ನು ತಪ್ಪಿಸಿ ಚೆಂಡನ್ನು ಗುರಿ ಸೇರಿಸಿದರು. ಬಳಿಕ ಈ ಆಘಾತದಿಂದ ಕೆಎಸ್‌ಪಿ ಚೇತರಿಸಿಕೊಳ್ಳಲಿಲ್ಲ.ನಾಲ್ಕು ಪಂದ್ಯಗಳಲ್ಲಿ ಎಡಿಇಗೆ ಲಭಿಸಿದ ಮೊದಲ ಗೆಲುವು ಇದು. ಜೊತೆಗೆ ಮೂರು ಪಾಯಿಂಟ್ ಲಭಿಸಿತು. ಈ ತಂಡದ ಬಳಿ ಈಗ ಒಟ್ಟು ನಾಲ್ಕು ಪಾಯಿಂಟ್‌ಗಳಿವೆ. ಕೆಎಸ್‌ಪಿ ಕೂಡ ಇಷ್ಟೇ ಪಂದ್ಯಗಳಿಂದ ನಾಲ್ಕು ಪಾಯಿಂಟ್ ಹೊಂದಿದೆ.ಈ ಪಂದ್ಯದಲ್ಲಿ ಆರಂಭದ ಹಿನ್ನಡೆಯನ್ನು ಸರಿಪಡಿಸಿಕೊಳ್ಳಲು ಕೆಎಸ್‌ಪಿ ತುಂಬಾ ಪ್ರಯತ್ನಿಸಿತು. ಆದರೆ ಎಡಿಇನ ಬಲಿಷ್ಠ ರಕ್ಷಣೆಯನ್ನು ದಾಟಿ ಚೆಂಡನ್ನು ಗುರಿ ಮುಟ್ಟಿಸಲು ಆ ತಂಡದ ಆಟಗಾರರಿಗೆ ಸಾಧ್ಯವಾಗಲಿಲ್ಲ.

ಎಸ್‌ಎಐಗೆ ಗೆಲುವು: ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ತಂಡದವರು `ಎ~ ಡಿವಿಷನ್ ಲೀಗ್‌ನ ಪಂದ್ಯದಲ್ಲಿ ಜಯ ಗಳಿಸಿದರು. ಈ ತಂಡದವರು 1-0 ಗೋಲಿನಿಂದ ಬಿಯುಎಫ್‌ಸಿ ತಂಡವನ್ನು ಪರಾಭವಗೊಳಿಸಿದರು. ವಿಜಯಿ ತಂಡದ ಅನ್ವರ್ ಹುಸೇನ್ 32ನೇ ನಿಮಿಷದಲ್ಲಿ ಗೋಲು ಗಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry