ಎಡಿವಾಳ ಗ್ರಾಮಸ್ಥರಿಗೆ `ಆಸರೆ' ದೂರ!

7

ಎಡಿವಾಳ ಗ್ರಾಮಸ್ಥರಿಗೆ `ಆಸರೆ' ದೂರ!

Published:
Updated:

ಮಾನ್ವಿ: ತಾಲ್ಲೂಕಿನ ತುಂಗಭದ್ರಾ ನದಿಪಾತ್ರದಲ್ಲಿರುವ ಪುಟ್ಟ ಗ್ರಾಮ ಎಡಿವಾಳ. ನದಿ ದಡದಲ್ಲಿರುವುದುರಿಂದ ಇದು ಶಾಶ್ವತ ನೆರೆ ಪೀಡಿತ ಗ್ರಾಮ. ತಾಲ್ಲೂಕಿನ ಚಿಕ್ಕಕೊಟ್ನೇಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮದಲ್ಲಿ 700ಜನ ಮತದಾರರು ಇದ್ದಾರೆ. ಇಬ್ಬರು ಸದಸ್ಯರು ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿದ್ದಾರೆ.ತಾಲ್ಲೂಕು ಕೇಂದ್ರದಿಂದ ಸುಮಾರು 20ಕಿಮೀ ಅಂತರದಲ್ಲಿದೆ.  ಆಸರೆ ಮನೆ ನಿರ್ಮಾಣವಾಗಿದ್ದರೂ, ಅಲ್ಲಿ ವಾಸ ಮಾಡುವ ಭಾಗ್ಯ ಈ ಗ್ರಾಮದ ಜನರಿಗೆ ಇಲ್ಲದಾಗಿದೆ. ಇನ್ನು ನಿರ್ಮಾಣವಾದ ಮನೆಗಳು ಹಾಳಾಗುವ ಸ್ಥಿತಿಗೆ ಬಂದರು ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.ನೆರೆ ಹಾವಳಿ: 1992ರಲ್ಲಿ ಸಂಭವಿಸಿದ್ದ ನೆರೆಹಾವಳಿಯಿಂದ ಈ ಗ್ರಾಮವನ್ನು ಸ್ಥಳಾಂತರಗೊಳಿಸಲಾಗಿತ್ತು. 2009ರಲ್ಲಿ ಪುನಃ ಸಂಭವಿಸಿದ ಭೀಕರ ನೆರೆಯಿಂದ ಮುಳುಗಡೆಯಾದ ಎಡಿವಾಳ ಗ್ರಾಮಸ್ಥರಿಗೆ ಈಗ ಮತ್ತೊಮ್ಮೆ ಸ್ಥಳಾಂತರಗೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. `ಆಸರೆ' ಮನೆ ನಿರ್ಮಾಣದಿಂದ ಮತ್ತೊಮ್ಮೆ ಬದುಕು ಕಟ್ಟಿಕೊಳ್ಳಬೇಕಾದ ಸ್ಥಿತಿಗೆ ಇಲ್ಲಿನ ಜನ ಬಂದಿದ್ದಾರೆ.ಆದರೆ ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾದ 204 `ಆಸರೆ' ಮನೆಗಳ ಕಾಮಗಾರಿ ಪೂರ್ಣಗೊಂಡು 2 ವರ್ಷಗಳು ಕಳೆದರೂ, ಜನರಿಗೆ ಹಂಚುವ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿವೆ. ನಿರಾಶ್ರಿತರು ಹಳೆ ಮನೆಗಳಲ್ಲಿಯೇ ಜೀವನ ನಡೆಸುತ್ತಿದ್ದಾರೆ.`ಆಸರೆ' ದುಃಸ್ಥಿತಿ: 2 ವರ್ಷಗಳ ಹಿಂದೆ ಪೂರ್ಣಗೊಂಡಿರುವ `ಆಸರೆ' ಮನೆಗಳು ಫಲಾನುಭವಿಗಳಿಗೆ ಹಂಚಿಕೆಯಾಗದೆ ದುಃಸ್ಥಿತಿಯಲ್ಲಿವೆ. ಹಲವು ಮನೆ ಗೋಡೆ ಬಿರುಕು ಬಿಟ್ಟಿವೆ.  ಮೇಲ್ಛಾವಣಿ ಕುಸಿದು ಬಿದ್ದಿವೆ. ಕಳಪೆ ಕಾಮಗಾರಿ ತಾಂಡವ ನೃತ್ಯಕ್ಕೆ ಸಾಕ್ಷಿ ಎಂಬಂತೆ ಆಸರೆ ನಿರ್ಮಾಣವಾಗಿವೆ.  `ಆಸರೆ' ಕಾಲೋನಿಯಲ್ಲಿ ಸಮರ್ಪಕವಾದ ರಸ್ತೆ ಹಾಗೂ ಒಳಚರಂಡಿ ವ್ಯವಸ್ಥೆ ಇಲ್ಲ. ಕುಡಿಯುವ ನೀರಿಗಾಗಿ ಟ್ಯಾಂಕ್ ನಿರ್ಮಾಣಕ್ಕೆ ಕ್ರಮ ಕೈಗೊಂಡಿಲ್ಲ. ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿಲ್ಲ.  ಕಾಲೋನಿಯಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈಗಿರುವ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ನಿರ್ಮಿಸಲಾದ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಪೈಪ್‌ಲೈನ್ ಸಂಪರ್ಕವಿಲ್ಲದೆ ಹಲವು ವರ್ಷಗಳಿಂದ ನಿರುಪಯುಕ್ತವಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.ರಸ್ತೆ ದುಃಸ್ಥಿತಿ: ಗ್ರಾಮದ 3ಕಿಮೀ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದೆ.  ಸಾರಿಗೆ ಬಸ್ ಈ ಗ್ರಾಮಕ್ಕೆ ಬರುವುದಿಲ್ಲ. ರಸ್ತೆ ದುಃಸ್ಥಿತಿಯಲ್ಲಿರುವ ಕಾರಣ ಖಾಸಗಿ ವಾಹನಗಳು ಕೂಡ ಈ ಗ್ರಾಮಕ್ಕೆ ಬರಲ್ಲ. ಕಾರಣ ಗ್ರಾಮಸ್ಥರು, ಕಾಲೇಜು ವಿದ್ಯಾರ್ಥಿಗಳು ಚೀಕಲಪರ್ವಿ-ಜಾಗೀರಪನ್ನೂರು ಮುಖ್ಯ ರಸ್ತೆಯವರೆಗೆ ನಡೆದುಕೊಂಡು ಬರುತ್ತಾರೆ. ವಿದ್ಯಾರ್ಥಿಗಳು ಬೆಳಿಗ್ಗೆ 6ಗಂಟೆಗೆ ಸಂಪರ್ಕ ರಸ್ತೆವರೆಗೆ ನಡೆದುಕೊಂಡು ಬಂದು, ಬರುವ ಸಾರಿಗೆ ಬಸ್‌ಗಾಗಿ ಕಾಯುತ್ತಾರೆ. ಆ ಬಸ್ ತಪ್ಪಿಸಿಕೊಂಡರೆ ಆ ದಿನ ಕಾಲೇಜಿಗೆ ಗೈರು ಖಚಿತ. ರಸ್ತೆ ದುರಸ್ತಿಗೆ ಒತ್ತಾಯಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಈಚೆಗೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ನಡೆಸಿದ್ದರು. ಆದರೂ ಕೂಡ ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

        

ಶೀಘ್ರವೇ ಹಂಚಿಕೆ ಮಾಡಿ

`ಆಸರೆ' ಕಾಲೋನಿಯಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ ಆದಷ್ಟು ಬೇಗನೆ ಮನೆಗಳನ್ನು ಗ್ರಾಮಸ್ಥರಿಗೆ ಹಂಚಿಕೆ ಮಾಡಬೇಕು.ಅಯ್ಯಪ್ಪ ನಾಯಕ,  ಗಾಪಂ ಸದಸ್ಯಪಕ್ಕಾ ರಸ್ತೆ ನಿರ್ಮಿಸಿ

ಗ್ರಾಮದ ಮುಖ್ಯ ರಸ್ತೆಯ ಡಾಂಬರೀಕರಣ ಮಾಡಿ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸುವ ಮೂಲಕ ಗ್ರಾಮಸ್ಥರಿಗೆ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗಾಗಿ ಅನುಕೂಲ ಕಲ್ಪಿಸಬೇಕು.

ಹನುಮಂತ ಎಡಿವಾಳ,ವಿದ್ಯಾರ್ಥಿ `ಸೌಲಭ್ಯ ನೀಡಿ'

ಗ್ರಾಮದ ರೈತರು ಹಾಗೂ ಬಡ ಕೃಷಿ ಕೂಲಿ ಕಾರ್ಮಿಕರಿಗೆ ಸರ್ಕಾರ ವಿವಿಧ ಸವಲತ್ತುಗಳನ್ನು ಸಮರ್ಪಕವಾಗಿ ಒದಗಿಸಬೇಕು.

ಯಲ್ಲಪ್ಪ, ಗ್ರಾಮಸ್ಥ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry