ಎಡೆಬಿಡದ ಮಳೆ: ಜನಜೀವನ ಅಸ್ತವ್ಯಸ್ತ

7

ಎಡೆಬಿಡದ ಮಳೆ: ಜನಜೀವನ ಅಸ್ತವ್ಯಸ್ತ

Published:
Updated:

ಕುಶಾಲನಗರ: ಕಳೆದ ಎರಡು ದಿನಗಳಿಂದ ಸುಂಟಿಕೊಪ್ಪ ಮತ್ತು ಕುಶಾಲನಗರ ಹೋಬಳಿಯಾದ್ಯಂತ ಎಡಬಿಡದೇ ಮಳೆ ಸುರಿಯುತ್ತಿದ್ದು ಶುಕ್ರವಾರವೂ ಧಾರಾಕಾರವಾಗಿ ಸುರಿದಿದೆ. ಇದರಿಂದ ಎರಡೂ ಹೋಬಳಿಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.ಬುಧವಾರ ಕುಶಾಲನಗರ, 7ನೇ ಹೊಸಕೋಟೆ, ಸುಂಟಿಕೊಪ್ಪ, ಹಾರಂಗಿ, ಹೆಬ್ಬಾಲೆ, ಶಿರಂಗಾಲ ಸೇರಿದಂತೆ ಎರಡು ಹೋಬಳಿಯಾದ್ಯಂತ ದಿನಪೂರ್ತಿ ಮಳೆ ಸುರಿದಿತ್ತು. ಆದರೆ ಗುರುವಾರ ಇದ್ದಕ್ಕಿದ್ದಂತೆ ಮಳೆ ಕಡಿಮೆ ಯಾಗಿತ್ತಾದರೂ ಆಗೊಮ್ಮೆ ಈಗೊಮ್ಮೆ ತುಂತುರು ತುಂತುರಾಗಿ ಸುರಿಯಿತು. ಶುಕ್ರವಾರ ಬೆಳಿಗ್ಗೆಯಿಂದಲೇ ಆರಂಭವಾದ ಮಳೆ ಸುಮಾರು ಹತ್ತು ಗಂಟೆಯಾದರೂ ಬಿಡುವ ಲಕ್ಷಣಗಳೇ ಕಾಣಲಿಲ್ಲ.ಇದರಿಂದಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾದರೆ, ನಾಗರಿಕರು ಮತ್ತು ನೌಕರರು ತಮ್ಮ ಕಚೇರಿಗಳಿಗೆ ಹೋಗಲು ಪರದಾಡಬೇಕಾಯಿತು. ಬೆಳಿಗ್ಗೆ ಹತ್ತು ಗಂಟೆಯಿಂದ ಹನ್ನೊಂದು ಗಂಟೆಯವರೆಗೆ ಸ್ವಲ್ಪ ಬಿಡುವು ನೀಡಿದ್ದ ಮಳೆ ಪುನಃ ಹನ್ನೊಂದು ಗಂಟೆ ನಂತರ ಧಾರಾಕಾರವಾಗಿ ಸುರಿಯಿತು. ಇದರಿಂದ ಸಂಚಾರ ವ್ಯವಸ್ಥೆ ಕೂಡ ಕಡಿಮೆಯಾಗಿದ್ದ ದೃಶ್ಯ ಕಂಡು ಬಂತು.ಹನ್ನೊಂದು ಗಂಟೆ ನಂತರ ಸುರಿಯಲು ಆರಂಭವಾದ ಮಳೆ ಸಂಜೆ ನಾಲ್ಕು ಗಂಟೆವರೆಗೆ ಎಡೆಬಿಡದೇ ಸುರಿಯಿತು.

ಪುನಃ ಸಂಜೆ ಐದು ಗಂಟೆ ಸಂದರ್ಭಕ್ಕೆ ತುಂತುರು ತುಂತುರಾಗಿ ಸುರಿಯಿತು.ಮಳೆ ಬಿರುಸು: ಬೆಳೆ ನಷ್ಟ ಭೀತಿ

ಸೋಮವಾರಪೇಟೆ: ತಾಲ್ಲೂಕಿ­ನಾದ್ಯಂತ ಮತ್ತೊಮ್ಮೆ ಮಳೆ ಬಿರುಸುಗೊಂಡಿದ್ದು, ಶುಕ್ರವಾರ ಇಡೀ ದಿನ ಮಳೆ ಸುರಿಯಿತು. ಈಗಾಗಲೇ ಭತ್ತ, ಕಾಫಿ ಮೆಣಸು ಸೇರಿದಂತೆ ಕೃಷಿಕರು ಬೆಳೆ ಕಳೆದುಕೊಂಡಿದ್ದಾರೆ. ಆದರೆ, ಮತ್ತೊಮ್ಮೆ ಸುರಿಯುತ್ತಿರುವ ಮಳೆಯಿಂದ ಅಳಿದು ಉಳಿದ ಬೆಳೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.ಪ್ರಸ್ತುತ ಮಳೆಗಾಲದಲ್ಲಿ ವಾಡಿಕೆ ಮಳೆಗಿಂತಲೂ ಹೆಚ್ಚಿನ ಮಳೆಯಾಗಿದೆ. ಕಾಫಿ ತೋಟಕ್ಕೆ ರಾಸಾಯನಿಕ ಗೊಬ್ಬರ, ಕೀಟನಾಶಕ ಸಿಂಪಡಿಸಲು ಆರಂಭ ಮಾಡಿದ ಸಮಯದಲ್ಲಿಯೇ ಮತ್ತೊಮ್ಮೆ ಮಳೆ ಆರಂಭವಾಗಿದೆ. ಇದರಿಂದ ಉಳಿದ ಕಾಫಿ ಬೆಳೆಯನ್ನು ಉಳಿಸಿಕೊಳ್ಳಲು ಕೃಷಿಕರು ಪರದಾಡುತ್ತಿದ್ದಾರೆ.ಭಾರಿ ಮಳೆಗೆ ಈಗಾಗಲೇ ಕಾಳು ಮೆಣಸು ಬೆಳೆ ಇಲ್ಲವಾಗಿದ್ದು, ಉಳಿದಿರುವ ಮೆಣಸಿನ ಬಳ್ಳಿಯನ್ನು ಕಾಪಾಡಲು ಮಳೆ ಅಡ್ಡಿಯಾಗಿದೆ. ಬಿಸಿಲಾದ್ದರಿಂದ ಬಳ್ಳಿಗಳು ಚಿಗುರುತ್ತಿದ್ದು, ಬಳ್ಳಿಗಳಲಿದ್ದ ಅಲ್ಪ ಸ್ವಲ್ಪ ಫಸಲು ಉದುರುತ್ತಿದೆ.ಶುಂಠಿ ಬೆಳೆ ಕೂಡ ರೋಗಬಾಧೆಗೆ ತುತ್ತಾಗಬಹುದು ಎಂಬ ಆತಂಕ ಕಾಡುತ್ತಿದೆ. ಒಟ್ಟಿನಲ್ಲಿ ಮುಂದುವರಿದ ಮಳೆ ರೈತರ ನಿದ್ದೆಗೆಡಿಸಿದೆ.

ಮಳೆ ವಿವರ: ಕಳೆದ 24 ಗಂಟೆಗಳಲ್ಲಿ ಸೋಮವಾರಪೇಟೆ ತಾಲೂಕಿನಲ್ಲಾದ ಮಳೆಯ ವಿವಿರ ಇಂತಿದೆ. ಶಾಂತಳ್ಳಿ ಹೋಬಳಿ  52.7 ಮಿ ಮೀ, ಸೋಮವಾರಪೇಟೆ ಕಸಬಾ ಹೋಬಳಿಗೆ 21.4  ಮಿ.ಮೀ, ಶನಿವಾರಸಂತೆ 16.2, ಕೊಡ್ಲಿಪೇಟೆ 21, ಕುಶಾಲನಗರ 1, ಸುಂಟಿಕೊಪ್ಪ 5.4 ಮಿ.ಮೀ. ಮಳೆಯಾಗಿದೆ.ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಮಳೆ ಒಟ್ಟು 2565.8 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1423.94ಮಿ.ಮೀ  ಮಳೆಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry