ಎಡ- ಬಲದಂಡೆಗೆ ಸಮಾನ ನೀರು ಹಂಚಿಕೆ: ಸಲಹೆ

7

ಎಡ- ಬಲದಂಡೆಗೆ ಸಮಾನ ನೀರು ಹಂಚಿಕೆ: ಸಲಹೆ

Published:
Updated:

ಹುಕ್ಕೇರಿ: ರೈತರು ನಿರೀಕ್ಷಿಸಿದ ಪ್ರಮಾಣದಲ್ಲಿ ಮಳೆ ಆಗದೇ ಇರುವುದರಿಂದ ಭೀಕರ ಬರಗಾಲ ಎದುರಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದ್ದು, ಕೂಡಲೇ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಮೂಲಕ ನೀರು ಬಿಡುವಂತೆ ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು, ಹುನ್ನೂರ ಪ್ರವಾಸಿ ಮಂದಿರದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.ಈಗಾಗಲೇ ಹಿಡಕಲ್ ಜಲಾಶಯದಲ್ಲಿ 43 ಟಿಎಂಸಿ ನೀರು ಸಂಗ್ರಹವಾಗಿದೆ. ಅಕ್ಟೋಬರ್ ತಿಂಗಳಲ್ಲಿಯೂ ಮಳೆ ಕೈಕೊಟ್ಟರೆ ರೈತರ ಪರಿಸ್ಥಿತಿ ಚಿಂತಾಜನಕವಾಗುತ್ತದೆ. ಸಂಗ್ರಹಿಸಿದ ನೀರನ್ನು ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ರೈತರಿಗೆ ಸಮಾನವಾಗಿ ಬಿಡಬೇಕು. ಬೇರೆ ತಾಲ್ಲೂಕುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವು ದರಿಂದ ಗೋಕಾಕ ತಾಲ್ಲೂಕಿನ ರೈತರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಎಲ್ಲ ಭಾಗಕ್ಕೆ ಸರಿಸಮಾನವಾಗಿ ನೀರು ಬಿಟ್ಟು ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಜಿಆರ್‌ಬಿಸಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಕುಲಗೋಡ, ಕೌಜಲಗಿ, ಮಿರ್ಜಿ-1, ಮಿರ್ಜಿ- 2, ಅವರಾಧಿ, ಬೆಟಗೇರಿ-1 ಮತ್ತು ಬೆಟಗೇರಿ- 2 ವಿತರಣಾ ಕಾಲುವೆಗಳ ಮುಖಾಂತರ ಕಾಲುವೆಗಳ ಕೊನೆಯ ಭಾಗದವರೆಗೆ ಕಾಲುವೆ ವ್ಯಾಪ್ತಿಯಲ್ಲಿ ಬರುವ ಜಮೀನುಗಳಿಗೆ ನೀರು ಪೂರೈಸಬೇಕು. ಕಾಲುವೆಯ ಕೆಲ ಭಾಗಗಳಲ್ಲಿ ಹೂಳು ತುಂಬಿ, ಗಿಡಗಂಟಿ ಬೆಳೆದಿದ್ದು, ಸ್ವಚ್ಛಗೊಳಿಸಲು  ಸೂಚಿಸಿದರು.ಸಿಬಿಸಿಯ ವ್ಯಾಪ್ತಿಯಲ್ಲಿ ಬರುವ ಕಬ್ಬೂರ ವಿತರಣಾ ಕಾಲುವೆಯ ಕೊನೆ ಭಾಗದಲ್ಲಿ ಬರುವ ದಂಡಾಪುರ ಮತ್ತು ಫಾಮಲದಿನ್ನಿ ಗ್ರಾಮಗಳ ಜಮೀನುಗಳಿಗೆ ನೀರು ಪೂರೈಸಲು ಸೂಚಿಸಿದರು.ಜಿಎಲ್‌ಬಿಸಿ ಕಾಲುವೆ ವ್ಯಾಪ್ತಿಯಲ್ಲಿ ಬರುವ ಜೋಕಾನಟ್ಟಿ ಬಾಂದಾರಕ್ಕೆ ನೀರನ್ನು ಬಿಟ್ಟು, ಕಾಲುವೆ ಮುಖಾಂತರ ಕಾಲುವೆಯ ಕೊನೆಯ ಭಾಗದವರೆಗೆ ಜೋಕಾನಟ್ಟಿ, ಗುಜನಟ್ಟಿ, ಧರ್ಮಟ್ಟಿ ಗ್ರಾಮಗಳ ಜಮೀನುಗಳಿಗೆ ನೀರನ್ನು ಪೂರೈಸಬೇಕು. ಕಂಕಣವಾಡಿ ವಿತರಣಾ ಕಾಲುವೆಯಿಂದ ಖಾನಟ್ಟಿ, ಮುನ್ಯಾಳ, ಶಿವಾಪುರ(ಹ), ಹಳ್ಳೂರ ಹಾಗೂ ಇತರ 16 ಹಳ್ಳಿಗಳ ರೈತರ ಜಮೀನುಗಳಿಗೆ ನೀರನ್ನು ಪೂರೈಸುವಂತೆ ಸೂಚಿಸಿದರು.

 

ಹಳ್ಳೂರ ಹೊಸ ಕಾಲುವೆಯನ್ನು 6ನೇ ಔಟಲೆಟ್‌ವರೆಗೆ ಕೂಡಿಸುವ ಸಲುವಾಗಿ 3 ವರ್ಷಗಳಿಂದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಇದುವರೆಗೂ ಅದರ ಕೆಲಸ ಆಗದಿರುವುದಕ್ಕೆ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಕೂಡಲೇ ಹಳ್ಳೂರ ಕಾಲುವೆಗೆ ಭೇಟಿ ನೀಡಿ ವರದಿ ನೀಡುವಂತೆ ಸೂಚನೆ ನೀಡಿದರು.ಚಿಕ್ಕ ನೀರಾವರಿ ಇಲಾಖೆ ವ್ಯಾಪ್ತಿಯ ಹುಣಶ್ಯಾಳ ಪಿವೈ ಗ್ರಾಮದ ಹತ್ತಿರ ಬ್ರಿಡ್ಜ್-ಕಂ-ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ 10 ದಿನಗಳೊಳಗೆ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚಿಸಿದರು. ತಿಗಡಿ, ಸುಣಧೋಳಿ, ತಳಕಟ್ನಾಳ, ಭೈರನಟ್ಟಿ, ಹುಣಶ್ಯಾಳ ಪಿವಾಯ್ ಜಾಕವೆಲ್‌ಗಳ ಮೂಲಕ ಕಾಲುವೆಯ ಕೊನೆಯ ಭಾಗದವರೆಗೆ ರೈತರ ಜಮೀನುಗಳಿಗೆ ನೀರು ಪೂರೈಸಲು ಸೂಚನೆ ನೀಡಿದರು.ಬರುವ ಅಕ್ಟೋಬರ್ ಮೊದಲ ವಾರದಲ್ಲಿ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಏಕಕಾಲಕ್ಕೆ ನೀರನ್ನು ಹರಿಸಬೇಕು. ಗೋಕಾಕ ಸೇರಿದಂತೆ ಎಲ್ಲ ತಾಲ್ಲೂಕುಗಳಿಗೂ ಸಮಾನವಾಗಿ ನೀರು ಬಿಡುಗಡೆ ಮಾಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಮಹಾಮಂಡಳದ ಅಧ್ಯಕ್ಷ ರಾಮಚಂದ್ರ ಬಡಗನ್ನವರ, ಹಿಡಕಲ್ ಡ್ಯಾಂ ಜಿಆರ್‌ಬಿಸಿ ಅಧೀಕ್ಷಕ ಎಂಜಿನಿಯರ್ ಚೊಳಚಗುಡ್ಡ, ಜಮಖಂಡಿ ಜಿಎಲ್‌ಬಿಸಿ ಅಧೀಕ್ಷಕ ಎಂಜಿನಿಯರ್ ಮುರಳಿಧರರಾವ್ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry