ಮಂಗಳವಾರ, ಜನವರಿ 21, 2020
29 °C

ಎಣ್ಣೆ ಸೀಗೆಕಾಯಿ ಸಂಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ವಕೀಲರು ದೇಶದ ಯಾವುದೇ ಭಾಗದಲ್ಲಿ ನಡೆಸಿದ್ದ ಮುಷ್ಕರಗಳ ಉದಾಹರಣೆ ತೆಗೆದುಕೊಳ್ಳಿ. ಅದು ಶೇ 80ಕ್ಕಿಂತ ಹೆಚ್ಚು ಪೊಲೀಸರ ವಿರುದ್ಧವೇ ಇರುತ್ತದೆ. ಆದರೆ ವಕೀಲರು ಮಾತ್ರ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುತ್ತಿದ್ದಾರೆ ಎನ್ನುವುದು ಶೋಚನೀಯ.ಪೊಲೀಸ್ ಹಾಗೂ ವಕೀಲರ ನಡುವೆ ಯಾವಾಗಲೂ ಎಣ್ಣೆ-ಸಿಗೇಕಾಯಿ ಸಂಬಂಧ ಇದ್ದದ್ದೇ. ಪೊಲೀಸರು ಕಷ್ಟಪಟ್ಟು ಒಬ್ಬ ಆರೋಪಿಯನ್ನು ಬಂಧಿಸಿರುತ್ತಾರೆ. ಕೋರ್ಟ್‌ನಿಂದ ಜಾಮೀನು ಪಡೆದು ಅವರನ್ನು ಬಿಡಿಸಿಕೊಳ್ಳಲು ವಕೀಲರು ಹೋಗುತ್ತಾರೆ. ಆಗ ಪೊಲೀಸರಿಗೆ ಸಿಟ್ಟು ಬರುವುದು ಸಹಜ ಅಲ್ಲವೆ, ಪೊಲೀಸರು ಅವರ ಕರ್ತವ್ಯ ಮಾಡಿದ್ದರೆ, ವಕೀಲರೂ ಅವರದ್ದೇ ಕೆಲಸ ನಿಭಾಯಿಸುತ್ತಾರೆ.ಆದರೆ ತಾವು ಎಷ್ಟೋ ದಿನಗಳು, ತಿಂಗಳುಗಳ ಕಾಲ ಪಟ್ಟ ಶ್ರಮ ಹೀಗೆ ಕೆಲವೇ ನಿಮಿಷಗಳಲ್ಲಿ ವ್ಯರ್ಥವಾಗಿ ಹೋಗುತ್ತಿದೆ ಎಂದಾಗ ಸಹಜವಾಗಿಯೆ ಪೊಲೀಸರಿಗೆ ಸಿಟ್ಟು ಬರುತ್ತದೆ. ಇದೇ ಕಾರಣಕ್ಕೆ ಇಬ್ಬರ ನಡುವಣ ದ್ವೇಷ ಹೆಚ್ಚುತ್ತಲೇ ಇದೆ.ಈ ದ್ವೇಷಕ್ಕೆ ಸ್ವಲ್ಪ ರಾಜಕೀಯ ಲೇಪ ಸೇರಿದರೆ ಮುಗಿದೇ ಹೋಯ್ತು. ಕಳೆದ ವಾರ ಬೆಂಗಳೂರಿನಲ್ಲಿ ನಡೆದ ವಕೀಲರ ಮುಷ್ಕರದಲ್ಲಿಯೂ ಆದದ್ದು ಇದೇ. ಬೆಂಗಳೂರು ವಕೀಲರ ಸಂಘದಲ್ಲಿ ಇರುವ ಪ್ರಮುಖರು ರಾಜಕೀಯ ಪಕ್ಷವನ್ನು ಪ್ರತಿನಿಧಿಸುವಂಥವರು. ಅವರ ತೇಜೋವಧೆ ಮಾಡಲು ಇದೊಂದು ನೆಪ ಆಯಿತು ಅಷ್ಟೇ.ಅಂದ ಮಾತ್ರಕ್ಕೆ ವಕೀಲರು ಬೀದಿಗಿಳಿದು ಮುಷ್ಕರ ಮಾಡಿದ್ದು ಸರಿ ಎನ್ನುವುದು ಅಭಿಪ್ರಾಯವಲ್ಲ. ಅವರು ಮಾಡಿದ್ದು ತಪ್ಪೇ. ಅದು ನಮ್ಮ (ವಕೀಲರ) ಸಂಸ್ಕೃತಿ ಅಲ್ಲ. ವಕೀಲರು ಪ್ರಬುದ್ಧತೆ ಮೆರೆದು ಜನರಿಗೆ ಮಾದರಿಯಾಗಬೇಕು.ದೆಹಲಿಯಲ್ಲಿ ಕಿರಣ್ ಬೇಡಿ ಹಾಗೂ ವಕೀಲರ ನಡುವೆ ನಡೆದ ಜಟಾಪಟಿಯೂ ಇದೇ ರೀತಿಯದ್ದು ಅಲ್ಲವೇ? ಇನ್ನು ಬೆಂಗಳೂರಿನಲ್ಲಿ ವಕೀಲರ ಮುಷ್ಕರ ಇಂದು-ನಿನ್ನೆಯದ್ದಲ್ಲ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಡಿಸಿಪಿಯಾಗಿದ್ದ ನಾರಾಯಣ ಹಾಗೂ ವಕೀಲರ ನಡುವಿನ ಸಂಘರ್ಷ ಮುಷ್ಕರದ ದಾರಿ ಹಿಡಿದಿತ್ತು.ಡಿಸಿಪಿಯಾಗಿದ್ದ ಸೋಮಶೇಖರ್ ಹಾಗೂ ವಕೀಲರ ನಡುವೆ ಇದೇ ರೀತಿ ಕಿತ್ತಾಟ ಉಂಟಾಗಿತ್ತು. (1990ರಲ್ಲಿ ಸೋಮಶೇಖರ ಅವರು ತಮ್ಮ ವಿಚ್ಛೇದನ ಪ್ರಕರಣಕ್ಕೆ ಸಿವಿಲ್ ಕೋರ್ಟ್ ಆವರಣಕ್ಕೆ ಬಂದಿದ್ದಾಗ, ಅವರ ಪತ್ನಿಯ ಪರ ವಕೀಲರಿಗೆ ನಿಂದಿಸಿದರು ಎಂಬ ಕಾರಣಕ್ಕೆ ಅವರನ್ನು ಕೋರ್ಟ್ ಆವರಣದಲ್ಲಿಯೇ ಥಳಿಸಲಾಗಿತ್ತು.ಅವರು ಸುಮಾರು 15 ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದರು) ಸಿಐಡಿ ವಿಭಾಗದ ಡಿವೈಎಸ್ಪಿಯಾಗಿದ್ದ ವಸಂತ ಅವರು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಸಾಕ್ಷಿ ನುಡಿಯಲು ಬಂದ ಸಂದರ್ಭದಲ್ಲಿಯೂ ಇಂತಹದ್ದೆ ಘಟನೆ ನಡೆದಿತ್ತು.ಹಿಂದೆ ನ್ಯಾಯಮೂರ್ತಿಗಳು ವಕೀಲರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ತೋರುತ್ತಿದ್ದರು. ಆದರೆ ಕೆಲ ವಕೀಲರು ಇಂದು ಆ ಗೌರವ ಉಳಿಸಿಕೊಂಡಿಲ್ಲ. ಇನ್ನೊಂದೆಡೆ ನ್ಯಾಯಮೂರ್ತಿಗಳು ಕೂಡ ವಕೀಲರ ಸಮಸ್ಯೆಗಳಿಗೆ ಸ್ಪಂದಿಸುವ ಗೋಜಿಗೂ ಹೋಗುತ್ತಿಲ್ಲ.

ಪ್ರತಿಕ್ರಿಯಿಸಿ (+)