ಎತ್ತರದಲ್ಲಿದ್ದಾಗಲೇ ವಿದಾಯ ಸೂಕ್ತ: ರಿಕಿ ಪಾಂಟಿಂಗ್

7

ಎತ್ತರದಲ್ಲಿದ್ದಾಗಲೇ ವಿದಾಯ ಸೂಕ್ತ: ರಿಕಿ ಪಾಂಟಿಂಗ್

Published:
Updated:

ಸಿಡ್ನಿ (ಪಿಟಿಐ): `ಬೇಸರದಿಂದ ಬಂದು ನಿಮ್ಮ ಮುಂದೆ ಕುಳಿತಿದ್ದೇನೆ~ ಎನ್ನುವ ಮುನ್ನುಡಿಯೊಂದಿಗೆ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ನಿರ್ಧಾರ ವನ್ನು ಸುದ್ದಿಗಾರರ ಮುಂದೆ ಪ್ರಕಟಿಸಿದ ರಿಕಿ ಪಾಂಟಿಂಗ್ `ಎತ್ತರದಲ್ಲಿದ್ದಾಗಲೇ ವಿದಾಯ ಹೇಳುವುದು ಸೂಕ್ತ~ ಎಂದು ಸ್ವಲ್ಪ ಹೊತ್ತು ಮೌನವಾದರು.ಅವರ ಮನದಲ್ಲಿನ ನೋವು ಎಂಥದೆಂದು ಆ ಕೆಲವು ಕ್ಷಣಗಳ ಮೌನವೇ ಸ್ಪಷ್ಟವಾಗಿಸಿತು. ಆಸ್ಟ್ರೇಲಿಯಾಕ್ಕೆ ಎರಡು ಬಾರಿ ವಿಶ್ವಕಪ್ ಗೆದ್ದುಕೊಟ್ಟ ಮಾಜಿ ನಾಯಕ ತನ್ನ ಅಸಮಾಧಾನವನ್ನು ಕೂಡ ಸೌಮ್ಯ ಮಾತುಗಳಲ್ಲಿಯೇ ವ್ಯಕ್ತಪಡಿಸಿದರು. `ಏಕದಿನ ಕ್ರಿಕೆಟ್‌ಗೆ ವಿದಾಯ~ ಎಂದು ಒಂದೊಂದೇ ಪದವನ್ನು ಬಿಡಿಸಿ ಹೇಳುವಾಗ ಅವರ ಎದೆಯಾಳದಲ್ಲಿನ ಕಸಿವಿಸಿಯೂ ಉಸಿರಾಗಿ ಪುಟ್ಟ ಮೈಕ್‌ನಲ್ಲಿ ಗುಸುಗುಸು ಸದ್ದು ಮಾಡಿತು.ತ್ರಿಕೋನ ಸರಣಿಯ ತಂಡದಿಂದ ಕೈಬಿಟ್ಟ ಕ್ಷಣದಲ್ಲಿಯೇ `ಪಂಟರ್~ ನಿಗದಿತ ಓವರುಗಳ ಕ್ರಿಕೆಟ್‌ನಿಂದ ದೂರವಾಗುವ ನಿರ್ಣಯ ಕೈಗೊಳ್ಳುವ ಅನುಮಾನ ಮೂಡಿತ್ತು. ಆ ನಿರೀಕ್ಷೆ ಹುಸಿಯಾಗಲಿಲ್ಲ. ಮಂಗಳವಾರ ಬೆಳಿಗ್ಗೆ ಅವರು ಇನ್ನು ಏಕದಿನ ಕ್ರಿಕೆಟ್ ಸಾಕೆನ್ನುವ ತೀರ್ಮಾನವನ್ನು ಬಹಿರಂಗ ಮಾಡಿದರು. ಈ ನಿರ್ಧಾರ ಅಚ್ಚರಿಗೊಳಿಲಿಲ್ಲ. ದೇಶದ ಕ್ರಿಕೆಟ್‌ಗೆ ಹೆಮ್ಮೆಯ ಕಿರೀಟ ತೊಡೆಸಿದ ಮಾಜಿ ನಾಯಕನು ಭವಿಷ್ಯದಲ್ಲಿ ತನ್ನ ಅಗತ್ಯ ತಂಡಕ್ಕಿಲ್ಲವೆಂದು ಸ್ಪಷ್ಟವಾಗಿ ಅರಿತಿದ್ದು ಸಹಜ.ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ)ದ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಜಾನ್ ಇನ್ವರರಿಟಿ ಅವರು ತಂಡದಿಂದ ಕೈಬಿಡಲಾಗುತ್ತದೆ ಎನ್ನುವ ಸಂಕೇತವನ್ನು ಮೊದಲೇ ನೀಡಿದ್ದರು. ಆಗಲೇ ಪಾಂಟಿಂಗ್ ತಮ್ಮ ಮುಂದಿನ ಹೆಜ್ಜೆ ಏನೆಂದು ಯೋಚಿಸಿದ್ದರು. ಭವಿಷ್ಯದ ತಂಡವನ್ನು ಕಟ್ಟಲು ಬಯಸುತ್ತಿರುವ ಆಯ್ಕೆಗಾರರು ಹಿರಿಯರನ್ನು ಹೊರಗೆ ಕಳುಹಿಸಲು ಮುಂದಾಗಿದ್ದೂ ಅವರಿಗೆ ಅಚ್ಚರಿಯುಂಟು ಮಾಡಲಿಲ್ಲ. `ಮುಂದಿನ ವಿಶ್ವಕಪ್ ಕಡೆಗೆ ಆಯ್ಕೆಗಾರರ ಗಮನ ಇದೆ. ಅದಕ್ಕೃಗಿ ಹೊಸಬರನ್ನು ಸಜ್ಜುಗೊಳಿಸುವುದು ಉದ್ದೇಶವಾಗಿದೆ. ನಾನು ಅವರಿಗೆ ಇನ್ನು ಅಗತ್ಯವಿಲ್ಲ~ ಎಂದರು 37 ವರ್ಷದ ಕ್ರಿಕೆಟಿಗ ರಿಕಿ.`ನಾನು ತಂಡಕ್ಕೆ ಅಗತ್ಯವಾದ ಆಟಗಾರ ಎನ್ನುವ ಕಾಲ ಕಳೆದು ಹೋಗಿದೆ. ಮತ್ತೆ ಏಕದಿನ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಖಂಡಿತ ಇರಲಿಲ್ಲ. ನಿವೃತ್ತಿಗೆ ಇದೇ ಸರಿಯಾದ ಸಮಯ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry