ಗುರುವಾರ , ಆಗಸ್ಟ್ 5, 2021
21 °C

ಎತ್ತರದ ಹುಡುಗನ ದೊಡ್ಡ ಸಾಧನೆ!

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಎತ್ತರದ ಹುಡುಗನ ದೊಡ್ಡ ಸಾಧನೆ!

ಆ ಅಜಾನುಬಾಹು ಹುಡುಗ ವಾಲಿಬಾಲ್‌ ಅಂಕಣಕ್ಕೆ ಇಳಿದರೆ ಇದ್ದರೆ ಸಾಕು ನೋಡುಗರ ದೃಷ್ಟಿ ಆತನ ಮೇಲೆಯೇ.6.7 ಅಡಿ ಎತ್ತರದ ಸೋಮನಾಥ ಗಿರಿಗೌಡ ತಂಡದಲ್ಲಿ ಇದ್ದರೆ ಸಾಕು ಸಹ ಆಟಗಾರರ ಶಕ್ತಿ ಇಮ್ಮಡಿಸುತ್ತದೆ. ವಾಲಿಬಾಲ್‌ ಅಂಗಳಕ್ಕಿಳಿದ ಒಂಬತ್ತು ವರ್ಷಗಳಲ್ಲಿಯೇ ಅಂತರರಾಷ್ಟ್ರೀಯಮಟ್ಟದ ವಾಲಿಬಾಲ್‌ ಆಟಗಾರನಾಗಿ ಬೆಳೆದಿರುವ ಸೋಮನಾಥ ಈಗ ರೈಲ್ವೆ ತಂಡಕ್ಕೆ ಆಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿಯೇ ಇರುವ ಇವರು ಮೂಲತಃ `ಕುಂದಾನಗರಿ~ ಬೆಳಗಾವಿಯವರು. ತಂದೆ ಸಂಗಮನಾಥ ಗಿರಿಗೌಡರ ಕಾಳುಕಡಿ ವ್ಯಾಪಾರಸ್ಥರು. ಕುಟುಂಬದಲ್ಲಿ ಯಾರೂ  ಕ್ರೀಡಾಪಟುಗಳಿಲ್ಲದಿದ್ದರೂ ಸೋಮನಾಥಗೆ ಮಾತ್ರ ಚಿಕ್ಕಂದಿನಿಂದಲೂ ಕ್ರೀಡೆಗಳಲ್ಲಿ ಆಸಕ್ತಿಯಿತ್ತು. ಆದರೆ ವಾಲಿಬಾಲ್‌ ಆಡಿರಲಿಲ್ಲ.ಒಳ್ಳೆಯ ಎತ್ತರ ಇದ್ದ ಸೋಮನಾಥನನ್ನು ವಾಲಿಬಾಲ್‌ ಅಂಗಳ ಆಕರ್ಷಿಸಿದ್ದು 2002ರಲ್ಲಿ. ಬೆಳಗಾವಿಯ ವಿವಿಎಂಎಸ್‌ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟಕ್ಕೆ ಹೋಗಿದ್ದರು. ಈ ಹುಡುಗನ ಎತ್ತರವನ್ನು ನೋಡಿದ ತರಬೇತುದಾರ ಬಸವರಾಜ ಹೊಸಮಠ ವಾಲಿಬಾಲ್‌ ಆಡಲು ಸಲಹೆ ನೀಡಿದರು.ಅಷ್ಟಕ್ಕೆ ಬಿಡದೇ ಬೆಂಗಳೂರಿನ ಕ್ರೀಡಾ ವಸತಿ ನಿಲಯಕ್ಕೆ ಕರೆದುಕೊಂಡು ಹೋಗಿ ಸೇರಿಸಿದರು. ಹೊಸಮಠ ಮತ್ತು ನಾರಾಯಣ ಆಳ್ವಾ ಅವರ ಗರಡಿಯಲ್ಲಿ ಪಳಗಿದ ಸೋಮನಾಥ ಹಿಂದಿರುಗಿ ನೋಡಲೇ ಇಲ್ಲ. 6.7 ಅಡಿ ಎತ್ತರದ ಹುಡುಗ ನಾಲ್ಕು ವರ್ಷಗಳಲ್ಲಿಯೇ ರಾಜ್ಯ ತಂಡದ ಪ್ರಮುಖ ಆಟಗಾರನಾದರು. `ಬ್ಲಾಕರ್‌~ ಆಗಿ ರೂಪುಗೊಂಡರು.ನೈಋತ್ಯ ರೈಲ್ವೆಯ ಉದ್ಯೋಗಿಯಾಗಿರುವ ಸೋಮನಾಥ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 2003ರಲ್ಲಿ ಆಂಧ್ರದಲ್ಲಿ ನಡೆದ ಸಬ್‌ ಜೂನಿಯರ್‌ ರಾಷ್ಟ್ರೀಯ ವಾಲಿಬಾಲ್‌ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಆದ ಕರ್ನಾಟಕ ತಂಡದಲ್ಲಿ ಆಡಿದ್ದರು.ಅದೇ ವರ್ಷ ರನ್ನರ್ಸ್‌ ಅಪ್‌ ಆದ ರಾಜ್ಯ ಜೂನಿಯರ್‌   ತಂಡದಲ್ಲಿ, 2005ರಲ್ಲಿ ಜೂನಿಯರ್‌ ಚಾಂಪಿಯನ್‌ಷಿಪ್‌ ಗೆದ್ದ ಕರ್ನಾಟಕ ತಂಡದಲ್ಲಿ, ದಕ್ಷಿಣ ವಲಯ ಸೀನಿಯರ್‌ ವಾಲಿಬಾಲ್‌ನಲ್ಲಿ ರನ್ನರ್ಸ್‌ ಆಪ್‌ ಕರ್ನಾಟಕ ತಂಡದಲ್ಲಿ ಅವರು ತಮ್ಮ ಪ್ರತಿಭೆ ಮೆರೆದರು. ಇದರಿಂದಾಗಿ 2006ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಅವರಿಗೆ ಸಿಕ್ಕಿತು. 2006ರಲ್ಲಿ ಮಲೇಷ್ಯಾದಲ್ಲಿ ನಡೆದ ಯೂತ್‌ ಏಷಿಯನ್‌ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ಸ್‌ ಅಪ್‌ ಆದ ಭಾರತ ತಂಡದಲ್ಲಿ ಇವರೂ ಇದ್ದರು.ಅದೇ ವರ್ಷ ಇಟಲಿಯಲ್ಲಿ ನಡೆದ ಯುರೋಪಿಯನ್‌ ಎಕ್ಸ್‌ಪೋಸರ್‌ ಟೂರ್ನಿಯಲ್ಲಿ, 2007ರಲ್ಲಿ ಮೆಕ್ಸಿಕೋದ ವಿಶ್ವ ಯೂಥ್‌ ಚಾಂಪಿಯನ್‌ಷಿಪ್‌ನಲ್ಲಿ, 2008ರಲ್ಲಿ ಇರಾನ್‌ ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 2009ರ ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆಡಿದ ಭಾರತ ತಂಡದ ಪ್ರಮುಖ ಆಟಗಾರರಾಗಿ ಸೋಮನಾಥ ಬೆಳೆದರು.2006ರಲ್ಲಿ ನೈಋತ್ಯ ರೈಲ್ವೆಯು ಕ್ರೀಡಾ ಕೋಟಾದಲ್ಲಿ ಕಮರ್ಷಿಯಲ್‌ ವಿಭಾಗದಲ್ಲಿ ನೌಕರಿ ಕೊಟ್ಟಿತು. ಅದರ ನಂತರವೂ ಅವರು ತಮ್ಮ ಉತ್ತಮ ಆಟ ಮುಂದುವರೆಸಿದ್ದಾರೆ. ್ರತಿವರ್ಷ ರಾಷ್ಟ್ರೀಯ ಸೀನಿಯರ್‌ ಟೂರ್ನಿ ಮತ್ತು ಅಖಿಲ ಭಾರತ ರೈಲ್ವೆ ಟೂರ್ನಿಗಳಲ್ಲಿ ಸತತವಾಗಿ ಭಾಗವಹಿಸಿ ತಮ್ಮದೇ ಆದ ಕಾಣಿಕೆ ನೀಡುತ್ತಿದ್ದಾರೆ. ಬರೊಬ್ಬರಿ ನೂರು ಕೆಜಿ ತೂಕದ ಸೋಮು ತಂಡದ ಇತರೆ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.