ಎತ್ತಿನಕೇರಿ ರಸ್ತೆಯಲ್ಲಿ ಚಕ್ಕಡಿ ಸಂಚಾರವೂ ಕಷ್ಟ!

ಮಂಗಳವಾರ, ಜೂಲೈ 23, 2019
20 °C

ಎತ್ತಿನಕೇರಿ ರಸ್ತೆಯಲ್ಲಿ ಚಕ್ಕಡಿ ಸಂಚಾರವೂ ಕಷ್ಟ!

Published:
Updated:

ಚನ್ನಮ್ಮನ ಕಿತ್ತೂರು: ಮಳೆಗಾಲ ಬಂತೆಂದರೆ ಸಾಕು ಗ್ರಾಮೀಣ ರಸ್ತೆಗಳ ಸ್ಥಿತಿ ಆ ದೇವರಿಗೇ ಪ್ರೀತಿ ಎನ್ನುವಂತಾಗುತ್ತದೆ. ಬೇಸಿಗೆಯಲ್ಲಿ ಧೂಳು ಸ್ನಾನ ಮಾಡಿ ಸಂಚರಿಸುವ ಗ್ರಾಮಸ್ಥರು, ಮಳೆಗಾಲದಲ್ಲಿ ಕೆಂಪು ನೀರಿನ `ತೀರ್ಥಸ್ನಾನ~ ಮಾಡಿ ಪುನೀತರಾಗುತ್ತಾರೆ..!ಇಂತಹ ಪರಿಸ್ಥಿತಿ ಈಗ ಕಿತ್ತೂರು ಗ್ರಾಮ ಪಂಚಾಯಿತಿಗೆ ಸೇರಿರುವ ಎತ್ತಿನಕೇರಿ ಗ್ರಾಮದ ನಾಗರಿಕರಿಗೆ ಬಂದೊದಗಿದೆ. ಕಿತ್ತೂರು ಪಟ್ಟಣದಿಂದ ಅವರಾದಿ ಮಾರ್ಗವಾಗಿ ಬೈಲಹೊಂಗಲಕ್ಕೆ ತೆರಳುವ ಸಾರಿಗೆ ಬಸ್ ಹಾಗೂ ಇನ್ನಿತರ ವಾಹನಗಳು ಎತ್ತಿನಕೇರಿ ಗ್ರಾಮದೊಳಗೆ ಹಾಯ್ದು ಸಾಗಬೇಕು. ಕಿತ್ತೂರಿಂದ ಹೊರಟರೆ ಅವರಾದಿ, ಜಮಳೂರು, ಪಟ್ಯಾಳ ಗ್ರಾಮಗಳ ಜನರಿಗೇ ಮೊದಲ ದರ್ಶನವಾಗುವುದೇ ಎತ್ತಿನಕೇರಿ ಗ್ರಾಮದ ರಸ್ತೆ ನಡುವೆ ಬಿದ್ದಿರುವ ಹೊಂಡಗಳು.ಗ್ರಾಮ ಪ್ರವೇಶ ದ್ವಾರದಲ್ಲೇ ಸ್ವಾಗತ ನೀಡುವ ಈ ನೀರಿನ ಹೊಂಡಗಳಿಂದಾಗಿ ಚಾಲಕರು ಹಾಗೂ ದ್ವಿಚಕ್ರ ವಾಹನ ಸವಾರರು ಸಾವಕಾಶವಾಗಿ ಸಾಗಬೇಕು. ರಭಸದಿಂದ ವಾಹನ ಓಡಿಸಿದರೆ ಇಕ್ಕೆಲಗಳಲ್ಲಿ ನಿಂತ ಜನರಿಗೆ ಸ್ನಾನವಾಗುವುದಂತೂ ಸತ್ಯ. ಸಾಲದ್ದಕ್ಕೆ, ನೀರು ಸರಾಗವಾಗಿ ಹರಿಯಲು ಹಾಕಿರುವ ಅಡ್ಡ ಚರಂಡಿ (ಸಿ.ಡಿ.) ಕಳಪೆ ಕಾಮಗಾರಿಯಿಂದಾಗಿ ಕುಸಿದು ಬಿದ್ದಿದೆ. `ಇದರ ದುರವಸ್ಥೆ ನೋಡಲು ಜನಪ್ರತಿನಿಧಿಗಳಿಗೂ ಪುರುಸೊತ್ತು ಇಲ್ಲದಂತಾಗಿದೆ~ ಎಂದು ನಾಗರಿಕರು ದೂರುತ್ತಾರೆ.ಕುಸಿದಿರುವ ಸಿ.ಡಿ. ಸುತ್ತಲೂ ಕಲ್ಲುಗಳನ್ನಿಟ್ಟು ಸಂಚಾರ ಸುರಕ್ಷತೆಗೆ ಕ್ರಮವನ್ನಾದರೂ ಸಂಬಂಧಿಸಿದವರು ಕೈಗೊಳ್ಳಬಹುದಿತ್ತು. `ಯಾರ್ ಬಿದ್ದ ಯಾರ್ ಸತ್ತ್ರ ನಮಗೇನು? ಎನ್ನುವ ಧೋರಣೆ ಆಡಳಿತ ನಡೆಸುವರದ್ದಾಗಿದೆ~ ಎಂಬ ಆಕ್ರೋಶವನ್ನು ಜನಸಾಮಾನ್ಯರು ವ್ಯಕ್ತಪಡಿಸುತ್ತಾರೆ.ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈ ಊರಿನಲ್ಲಿ ರಸ್ತೆ ಸುಧಾರಣೆ, ಇಕ್ಕೆಲಗಳಲ್ಲಿ ಚರಂಡಿ ಹಾಗೂ ಅಗತ್ಯವಿದ್ದೆಡೆ ಸಿ.ಡಿ. ನಿರ್ಮಿಸಿ ಬಹಳ ದಿನಗಳು ಕಳೆದಿಲ್ಲ. ಈಗ ನೋಡಿದರೆ ಸುಧಾರಣೆ ಕಂಡ ಹಾದಿಯೇ ತನ್ನ `ಕಪ್ಪು ಇತಿಹಾಸ~ವನ್ನು ಸಾರ್ವಜನಿಕರ ಎದುರು ಸಾರುತ್ತ ನಿಂತಿದೆ.ಕುಸಿದು ಹಗೇವು ರೂಪ ಪಡೆದುಕೊಂಡಿರುವ ಸಿ.ಡಿ. ದುರಸ್ತಿಗೊಳಿಸಬೇಕು. ಗುಂಡಿ ಬಿದ್ದು ಮಳೆಗಾಲದಲ್ಲಿ ಹೊಂಡವಾಗಿರುವ ರಸ್ತೆಯನ್ನು ಸದ್ಯದ ಮಟ್ಟಿಗಾದರೂ ಸುಧಾರಣೆ ಮಾಡಬೇಕು ಎಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry