ಎತ್ತಿನಹೊಳೆ ಮೇಲೆ ಕಣ್ಣು-ಕರಾವಳಿ ಕೆಂಗಣ್ಣು

ಮಂಗಳವಾರ, ಜೂಲೈ 23, 2019
24 °C
ರಾಜ್ಯ ಬಜೆಟ್: ಮೀನುಗಾರರಿಗೆ ಬಂಪರ್ ಕೊಡುಗೆ

ಎತ್ತಿನಹೊಳೆ ಮೇಲೆ ಕಣ್ಣು-ಕರಾವಳಿ ಕೆಂಗಣ್ಣು

Published:
Updated:

ಮಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಶುಕ್ರವಾರ ಮಂಡಿಸಿದ 2013-14ನೇ ಸಾಲಿನ ಆಯವ್ಯಯದಲ್ಲಿ ನೇತ್ರಾವತಿ ನದಿ ತಿರುವು ಯೋಜನೆಗೆ (ಎತ್ತಿನಹೊಳೆ ಯೋಜನೆ) ರೂ 1 ಸಾವಿರ ಕೋಟಿ ಮೀಸಲಿಡುವ ಮೂಲಕ ಕರಾವಳಿ ಪ್ರದೇಶದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುವ ನಾಲ್ವರು ಸಚಿವರು ಸಂಪುಟದಲ್ಲಿದ್ದರೂ ಈ ಯೋಜನೆ ತಡೆಗೆ ಪ್ರಯತ್ನಿಸದಿರುವುದು ಹಾಗೂ ತಮ್ಮ ಖಾತೆಯ ಯೋಜನೆಗಳಲ್ಲೂ ಕರಾವಳಿಗೆ ಹೆಚ್ಚಿನ ಪಾಲು ನೀಡದಿರುವುದು ಕರಾವಳಿಗರ ಕೋಪವನ್ನು ಹೆಚ್ಚಿಸಿದೆ. ಆದರೆ, ಮೀನುಗಾರರಿಗೆ ಈ ಬಾರಿಯ ಬಜೆಟ್‌ನಲ್ಲಿ ಬಂಪರ್ ಕೊಡುಗೆ ನೀಡಲಾಗಿದೆ. ಕೋಟಿ ಚೆನ್ನಯರ ಜನ್ಮಸ್ಥಳ (ಪಡುಮಲೆ) ಅಭಿವೃದ್ಧಿಗೆ ರೂ 5 ಕೋಟಿ  ಮೀಸಲಿಡುವ ಮೂಲಕ ಬಿಲ್ಲವ ಸಮುದಾಯದವರನ್ನೂ ತುಷ್ಟೀಕರಿಸುವ ಪ್ರಯತ್ನವೂ ನಡೆದಿದೆ.ಎತ್ತಿನಹೊಳೆ ಯೋಜನೆಗೆ ಬಜೆಟ್‌ನಲ್ಲಿ 1 ಸಾವಿರ ಕೋಟಿ ನೀಡಿದ್ದಲ್ಲದೇ, ಡಾ.ಪರಮಶಿವಯ್ಯ ಸಮಿತಿ ವರದಿ ವಿವರವಾದ ಯೋಜನಾ ವರದಿಗೆ ರೂ 50 ಕೋಟಿಯನ್ನೂ ಬಜೆಟ್‌ನಲ್ಲಿ ಮೀಡಲಿಡಲಾಗಿದೆ. ನೇತ್ರಾವತಿ ನದಿ ತಿರುವು ಯೋಜನೆಗೆ ಅನುದಾನ ನೀಡಿದ್ದು, ಬಿಜೆಪಿಗೆ ಕರಾವಳಿ ಪ್ರದೇಶದಲ್ಲಿ ಹೊಡೆತ ನೀಡಿತ್ತು. ಆಗ ಈ ಯೋಜನೆಯನ್ನು ವಿರೋಧಿಸಿದ್ದ ಕಾಂಗ್ರೆಸ್ ಕೂಡಾ ಬಿಜೆಪಿಯ ಹಾದಿಯಲ್ಲಿ ಸಾಗಿದ್ದು ಕರಾವಳಿಯ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ.ಎರಡು ಹೊಸ ಬಂದರು: ದ.ಕ.ಜಿಲ್ಲೆಯ ಕೂಳೂರು ಹಾಗೂ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿ ಹೊಸ ಮೀನುಗಾರಿಕಾ ಬಂದರು ಮಂಜೂರಾಗಿರುವುದು ಕರಾವಳಿಗೆ ಮಹತ್ವದ ಕೊಡುಗೆ. ಜತೆಗೆ, ಮೀನುಗಾರಿಕಾ ಬಂದರು ಮತ್ತು ದಕ್ಕೆಗಳ ಸಿವಿಲ್ ಕಾಮಗಾರಿ ಅನುಷ್ಠಾನ ಘಟಕ ಸ್ಥಾಪನೆ, ಮತ್ಸ್ಯಾಶ್ರಯ ಅಡಿ ಮನೆ ನಿರ್ಮಾಣದ ಮೊತ್ತ ರೂ 60 ಸಾವಿರದಿಂದ 1.2 ಲಕ್ಷ ರೂಪಾಯಿಗೆ ಹೆಚ್ಚಳ, ಮೀನುಗಾರರ ಉಚಿತ ಕಿಟ್‌ಗೆ ನೀಡುತ್ತಿದ್ದ ರೂ 5 ಸಾವಿರ ಮೊತ್ತ ರೂ 10 ಸಾವಿರಕ್ಕೆ ಹೆಚ್ಚಳ, ಮತ್ಸ್ಯ ಮಹಿಳಾ ಸ್ವಸಹಾಯ ಗುಂಪಿಗೆ ನೀಡುತ್ತಿದ್ದ ಸಾಲದ ಮೊತ್ತ ರೂ 50 ಸಾವಿರದಿಂದ ರೂ1 ಲಕ್ಷಕ್ಕೆ ಹೆಚ್ಚಳ, ಬಲೆ ದುರಸ್ತಿ ಶೆಡ್‌ಗಳಿಗೆ ರೂ 2 ಕೋಟಿ ಅನುದಾನ, ನಾಡದೋಣಿಗಳಿಗೆ ನೀಡುತ್ತಿದ್ದ ಸೀಮೆಎಣ್ಣೆ ಪ್ರಮಾಣ 150 ಲೀಟರ್‌ನಿಂದ 400 ಲೀ.ಗೆ ಹೆಚ್ಚಳ, ಮೀನುಗಾರಿಕಾ ಸಂಪರ್ಕ ರಸ್ತೆಗೆ 30 ಕೋಟಿ, ಮೀನುಗಾರರಿಗೆ ನೀಡುವ ತೆರಿಗೆ ರಹಿತ ಡೀಸೆಲ್ ಪ್ರಮಾಣ 1.5 ಲಕ್ಷ ಲೀ.ಗೆ ಹೆಚ್ಚಳ, ಮೀನುಗಾರರಿಗೆ ಶೇ 2 ಬಡ್ಡಿದರದಲ್ಲಿ ರೂ 50 ಸಾವಿರದವರೆಗೆ ಸಾಲ ನೀಡುವ ಸರ್ಕಾರದ ಕ್ರಮ ಮೀನುಗಾರರಿಗೆ ಖುಷಿ ಕೊಟ್ಟಿದೆ.ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆಗೆ ರೂ 5 ಕೋಟಿ, ಮೊಗವೀರ ಸಮುದಾಯ ಭವನಕ್ಕೆ ರೂ 2 ಕೋಟಿ, ಕ್ರೈಸ್ತರ ಅಭಿವೃದ್ಧಿಗೆ ರೂ 100 ಕೋಟಿ, ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನಕ್ಕೆ ರೂ 3.5 ಕೋಟಿ ನೀಡಿ, ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಸಮುದಾಯದ ಜನರನ್ನು ಸಮಾಧಾನಪಡಿಸಲಾಗಿದೆ.ಕಾರ್ಕಳದ ಎಎನ್‌ಎಫ್ ಕೇಂದ್ರ ಅಭಿವೃದ್ಧಿಗೆ ರೂ 9 ಕೋಟಿ ಮೀಸಲಿಡಲಾಗಿದೆ. ಮಂಗಳೂರಿನಲ್ಲಿ 30 ಕೋಟಿ ವೆಚ್ಚದಲ್ಲಿ ಭಾರಿ ವಾಹನ ಚಾಲನಾ ತರಬೇತಿ ಸಂಸ್ಥೆ ಹಾಗೂ ಟ್ರಕ್ ಟರ್ಮಿನಲ್ ಮಂಜೂರಾಗಿದೆ. ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ಕೇಂದ್ರಗಳ ಪೈಕಿ ಒಂದನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಕೌಶಲ ಅಭಿವೃದ್ಧಿಗೆ ಟೂಲ್ ರೂಂ ಸ್ಥಾಪನೆಗೆ ರೂ 22 ಕೋಟಿ ಮಂಜೂರು ಮಾಡಿರುವ ಸರ್ಕಾರ ಒಂದು ಟೂಲ್‌ರೂಮನ್ನು ಮಂಗಳೂರಿನಲ್ಲೂ ಸ್ಥಾಪಿಸಲಿದೆ. ಸುರಕ್ಷಿತ ನಗರಗಳನ್ನಾಗಿ ಅಭಿವೃದ್ಧಿ ಪಡಿಸುವ ನಗರಗಳ ಪಟ್ಟಿಯಲ್ಲಿ ಮಂಗಳೂರನ್ನೂ ಸೇರಿಸಲಾಗಿದೆ.  ಸುರತ್ಕಲ್‌ಗೆ ಪ್ರಾದೇಶಿಕ ಸಾರಿಗೆ ಕಚೇರಿ ಮಂಜೂರಾಗಿದೆ. ಮಂಗಳೂರಿನಲ್ಲಿ 15 ಕೋಟಿ ವೆಚ್ಚದ ಸ್ವಯಂಚಾಲಿತ ವಾಹನ ಪರೀಕ್ಷಾ ಟ್ರ್ಯಾಕ್ ಮಂಜೂರಾಗಿದೆ.ವೃದ್ಧಾಶ್ರಮಕ್ಕೆ ನೀಡುತ್ತಿದ್ದ ವಾರ್ಷಿಕ ಅನುದಾನವನ್ನು ರೂ 8 ಲಕ್ಷಕ್ಕೆ ಹೆಚ್ಚಿಸಿರುವ ಸರ್ಕಾರ ಈ ಬಾರಿ ಈ ಸೌಲಭ್ಯವನ್ನು ಉಡುಪಿ ಜ್ಲ್ಲಿಲೆಗೂ ವಿಸ್ತರಿಸಿದೆ.ಮಂಗಳೂರು ವಿ.ವಿ.ಯಲ್ಲಿ ರತ್ನಾಕರ ವರ್ಣಿ ಪೀಠ ಸ್ಥಾಪನೆ ಹಾಗೂ ಮೂಡುಬಿದಿರೆಯ್ಲ್ಲಲಿ ರತ್ನಾಕರ ವರ್ಣಿ ಜಯಂತಿ ಆಚರಿಸಲು ಸರ್ಕಾರ ತೀರ್ಮಾನಿಸಿದೆ. ಕಡಲ್ಕೊರೆತ ತಡೆಯಲು ಎಡಿಬಿ ನೆರವಿನ 223 ಕೋಟಿ ಯೋಜನೆಯೂ ಬಜೆಟ್‌ನಲ್ಲಿ ಸೇರಿಕೊಂಡಿದೆ.ನದಿ ತಿರುವಿನಿಂದ ಪಶ್ಚಿಮ ಘಟ್ಟಕ್ಕೆ ಆಪತ್ತು- ತಜ್ಞರ ಆತಂಕ

ನೇತ್ರಾವತಿ ತಿರುವು ಯೋಜನೆಯ ಗುಮ್ಮ ಹೋಗಿ ಈಗ ಎತ್ತಿನ ಹೊಳೆ ಯೋಜನೆ ಎಂಬ ಹೊಸ ಗುಮ್ಮ ಬಂದಿದೆ. ನೇತ್ರಾವತಿಯಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ ಎನ್ನುವುದು ಸರಿಯಾದ ಮಾತಲ್ಲ. ಹರಿದು ಹೋಗುವ ಭಾರಿ ನೀರು ಇಲ್ಲಿನ ಜೀವ ವೈವಿಧ್ಯಕ್ಕೆ ಪೂರಕವಾಗಿದೆ. ಹರಿಯುವ ನೀರು ಎಂದರೆ ನಮ್ಮ ಕಣ್ಣಿಗೆ ತೋಚಿದಷ್ಟೇ ಅಂದಾಜು ಮಾಡುವುದು ಸರಿಯಲ್ಲ. ಎತ್ತಿನಹೊಳೆ ಯೋಜನೆ ಎಂಬ ನೆಪದಲ್ಲಿ ಪಶ್ಚಿಮ ಘಟ್ಟದ ಕಾಡುಗಳನ್ನು ಕಡಿಯುವುದು ಕೂಡ ಅಲ್ಲಿನ ಜೀವ ಸಂಕುಲಕ್ಕೆ ಒಂದು ಆಘಾತವೇ. ಹೊಸ ಸರ್ಕಾರವೂ ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎನ್ನುವುದು ಬೇಸರದ ಸಂಗತಿ.

- ದಿನೇಶ್ ಹೊಳ್ಳ, ಪರಿಸರವಾದಿಜನಸಾಮಾನ್ಯರ ಬಜೆಟ್ ಅಲ್ಲ

ಇದು ಜನಸಾಮಾನ್ಯರ ಬಜೆಟ್ ಅಲ್ಲ. ಎಲ್ಲ ವಸ್ತುಗಳಿಗೆ ಸುಂಕ ವಿಧಿಸುವ ಮೂಲಕ ಜನರಿಗೆ ಬೆಲೆ ಏರಿಕೆಯ ಬಜೆಟನ್ನು ಸರ್ಕಾರ ಕೊಟ್ಟಿದೆ. ಶ್ರೀಸಾಮಾನ್ಯರು ತೀವ್ರವಾಗಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಿದ್ದರಾಮಯ್ಯ ಬಳಿ ಉತ್ತರವೇ ಇಲ್ಲ. ಪಡಿತರ ವ್ಯವಸ್ಥೆಯನ್ನು ಬಲಪಡಿಸುವ ಕ್ರಮಗಳಿಲ್ಲ. ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಲೆಕ್ಕಾಚಾರ ಇದಷ್ಟೆ.

-ಬಿ. ಮಾಧವ, ಸಿಪಿಐ(ಎಂ) ಮುಖಂಡಎಂಡೊ ಸಂತ್ರಸ್ತರಿಗೆ ನಿರಾಸೆ

ಇದೊಂದು ದುರಂತ. ವಾಸ್ತವವಾಗಿ ಸಂತ್ರಸ್ತರಿಗೆ ನೆರವಾಗುವ ಯಾವ ಕೆಲಸವನ್ನೂ ಈ ಸರ್ಕಾರ ಮಾಡಿಲ್ಲ ಎನ್ನುವುದು ಬೇಸರ. ಎಂಡೋಸಲ್ಫಾನ್ ಸಂತ್ರಸ್ತರ ಹತ್ತಾರು ಸಮೀಕ್ಷೆಗಳು ನಡೆದಿವೆ. ಎಷ್ಟೋ ವರದಿಗಳು ಸರ್ಕಾರದ ಬಳಿಯೇ ಇವೆ. ಆದರೆ ಬಜೆಟ್ ಗಮನಿಸಿದರೆ ಸರ್ಕಾರ ಇನ್ನೂ ಬರೀ ಘೋಷಣೆ ಪ್ರಕಟಣೆಯ ಹಂತದಲ್ಲಿಯೇ ಇದೆ ಎಂದ ಹಾಗಾಯಿತು. ಸಂತ್ರಸ್ತರು ಹೀನಾಯ ಸ್ಥಿತಿಯಲ್ಲಿದ್ದಾರೆ ಎನ್ನುವುದು ಸರ್ಕಾರಕ್ಕೆ ಅರ್ಥವಾಗಿಲ್ಲ.

- ಶ್ರೀಧರ ಗೌಡ , ಸಾಮಾಜಿಕ ಕಾರ್ಯಕರ್ತಅಪಾಯದ ಕರೆಗಂಟೆ

ಉತ್ತರಾಖಂಡದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಪರಿಸರವನ್ನು ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದೇ ಪ್ರಕೃತಿ ದುರಂತಕ್ಕೆ ಕಾರಣ ಎನ್ನುವುದನ್ನು ನಾವು ಇನ್ನೂ ಅರ್ಥ ಮಾಡಿಕೊಂಡಿಲ್ಲ. ಹರಿಯುವ ನೀರು ಎಂದರೆ ಅದಕ್ಕೆ ಅದರದ್ದೇ ಆದ ಸಂಸ್ಕೃತಿ ಇದೆ. ಅದನ್ನು ವಿರೋಧಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದರಿಂದ ಪಶ್ಚಿಮ ಘಟ್ಟದಲ್ಲಿರುವ ಜೀವ ಸಂಕುಲಕ್ಕೂ ಒಳ್ಳೆಯದಲ್ಲ. ಮನುಷ್ಯರಿಗೂ ಒಳ್ಳೆಯದಲ್ಲ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.

ಎನ್. ಎ. ಮಧ್ಯಸ್ಥ, ಪರಿಸರ ತಜ್ಞಕೋಟಿ-ಚೆನ್ನಯರ ಸ್ಮರಣೆ ಸ್ವಾಗತಾರ್ಹ

ಕೋಟಿ- ಚೆನ್ನಯರ ಹುಟ್ಟೂರು ಅಭಿವೃದ್ಧಿಗೆ ಬಜೆಟ್‌ನಲ್ಲಿ ಹಣ ಇಟ್ಟಿರುವುದು ಸಂತೋಷದ ವಿಷಯ. ಯೋಜನೆ ಕಾರ್ಯರೂಪಕ್ಕೆ ಬರುವಾಗ ಯಾವ ರೂಪ ಪಡೆದೀತು ಎಂಬುದನ್ನು ಕಾದು ನೋಡಬೇಕಷ್ಟೆ.

-ತುಕಾರಾಮ್ ಪೂಜಾರಿ, ರಾಣಿ ಅಬ್ಬಕ್ಕ ಸಂಶೋಧನಾ ಕೇಂದ್ರಪಶ್ಚಿಮ ಘಟ್ಟ ನಾಶ ಮಾಡುವ ಉದ್ದೇಶ

ಇತ್ತ ಎತ್ತಿನ ಹೊಳೆ ಯೋಜನೆಗೆ ಹಣ ಮೀಸಲು ಇಡುತ್ತಾರೆ. ಅತ್ತ ಅರ್ಕಾವತಿ ದಂಡೆಯಲ್ಲಿ ಐಟಿ ಪಾರ್ಕ್ ಮಾಡುತ್ತೇವೆ ಎನ್ನುತ್ತಾರೆ. ಏನೇ ಆದರೂ ಜೈವಿಕ ಸೂಕ್ಷ್ಮ ಪರಿಸರವನ್ನು ಹಾಳುಗೆಡುವುವ ಯೋಜನೆಗಳಿಗೆ  ಸರ್ಕಾರ ಹಣ ಎತ್ತಿಟ್ಟಿದೆ. ಪಶ್ಚಿಮ ಘಟ್ಟವನ್ನು ನಾಶ ಮಾಡುವುದಲ್ಲದೆ, ಇದರಿಂದ ಬೇರೆ ಯಾವುದೇ ಸಾಧನೆ ಸಾಧ್ಯ ಇಲ್ಲ.

-ಸುಂದರ ರಾವ್, ಮಾಹಿತಿ ಹಕ್ಕು ಕಾರ್ಯಕರ್ತಅಡಿಕೆ: ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ

ಕರಾವಳಿಯ ಆರ್ಥಿಕತೆಯೇ ಅಡಿಕೆ ಬೆಳೆಯ ಮೇಲೆ ನಿಂತಿದೆ. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವ್ಯಾಟ್ ರೂಪದಲ್ಲಿ ಶೇ 4ರಷ್ಟು ಹಣ ಹೋಗುತ್ತದೆ. ಆದರೆ ಸರ್ಕಾರ ಬರಿ 2 ಕೋಟಿ ರೂ.ಗಳನ್ನು ಅಡಿಕೆ ಪರ್ಯಾಯ ಬೆಳೆಗೆ ಇಟ್ಟಿರುವುದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ. ಹಳದಿ ರೋಗ ಸಮಸ್ಯೆ, ಬೆಲೆಯ ಸಮಸ್ಯೆ, ಕೊಳೆರೋಗ, ಪರ್ಯಾಯ ಬೆಳೆ ಎಲ್ಲವನ್ನೂ ಎರಡು ಕೋಟಿಯಲ್ಲೇ ನಿರ್ವಹಿಸುವುದು ಸಾಧ್ಯವೇ ? ಅಡಿಕೆ ಬೆಳೆಗಾರರು ರಾಜ್ಯದ ಬೊಕ್ಕಸಕ್ಕೆ ಕೊಡುವ ತೆರಿಗೆಯನ್ನು ಸರ್ಕಾರ ಪರಿಗಣಿಸಿಯೇ ಇಲ್ಲ ಎನಿಸುತ್ತದೆ.

-ವಿಘ್ನೇಶ್ವರ ವರ್ಮುಡಿ, ಅರ್ಥಶಾಸ್ತ್ರ ಉಪನ್ಯಾಸಕಮೀನುಗಾರರಿಗೆ ತಂದಿದೆ ತೃಪ್ತಿ

ಮೀನುಗಾರರಿಗೆ ಇದು ಸಕಾರಾತ್ಮಕ ಬಜೆಟ್. ಬಜೆಟ್‌ಗೆ ಮುನ್ನ ಹಲವು ಬೇಡಿಕೆಗಳನ್ನು ಸಿಎಂಗೆ ಸಲ್ಲಿಸಿದ್ದೆವು. ಅವುಗಳಲ್ಲಿ ಹಲವು ಈಡೇರಿವೆ. ತೆರಿಗೆ ರಹಿತ ಡೀಸೆಲ್ ಮಿತಿ ಏರಿಕೆ, ಮಹಿಳಾ ಸಾಲ 1ಲಕ್ಷಕ್ಕ ಏರಿಕೆ, ಮತ್ಸ್ಯ ಆಶ್ರಯ ಯೋಜನೆ ನೆರವನ್ನು 1.2ಲಕ್ಷ ರೂ.ಗಳಿಗೆ ಏರಿಕೆ, ನಾಡದೋಣಿಗೆ 400 ಲೀಟರ್ ಸೀಮೆಎಣ್ಣೆ, ಕೆಲವು ಆಯ್ದ ಬಂದರುಗಳಲ್ಲಿ ಬ್ರೇಕ್ ವಾಟರ್ ವ್ಯವಸ್ಥೆ ಅಳವಡಿಕೆ ಮುಂತಾದ ವಿಚಾರಗಳನ್ನು ಬಜೆಟ್‌ನಲ್ಲಿ ಪರಿಗಣಿಸಲಾಗಿದೆ. ಇದು ಸ್ವಲ್ಪ ತೃಪ್ತಿ ಕೊಟ್ಟ ಬಜೆಟ್.

-ವಾಸುದೇವ ಬೋಳೂರ್, ಮೀನುಗಾರ ಮುಖಂಡಜೈನ ಸಮುದಾಯಕ್ಕೆ ಖುಷಿ

ಈ ವರ್ಷ ರತ್ನಾಕರವರ್ಣಿಯ 500ನೇ ಜನ್ಮ ಶತಮಾನೋತ್ಸವ ವರ್ಷ.  ಸರ್ಕಾರ ಹಣ ಮೀಸಲಿಟ್ಟಿರುವುದು ಸಂತೋಷದ ವಿಷಯ. ಅಲ್ಪಸಂಖ್ಯಾತರಾಗಿ ಜೈನ ಸಮುದಾಯ ಸರ್ಕಾರದಿಂದ ಪಡೆದದ್ದು ಬಹಳ ಕಡಿಮೆ. ಆದರೆ ಈ ವರ್ಷ ಅನುದಾನ ಇಟ್ಟಿರುವುದು ಖುಷಿ ಕೊಟ್ಟಿದೆ.

-ಪ್ರೊ. ಎಸ್. ಪ್ರಭಾಕರ್, ಉಪಾಧ್ಯಕ್ಷ, ಎಸ್‌ಡಿಎಂ ಶಿಕ್ಷಣ ಸಂಸ್ಥೆಜನರಿಗೆ ಅನುಕೂಲ-ಶೈಕ್ಷಣಿಕ ಕ್ಷೇತ್ರ ಅವಗಣನೆ

ಗ್ರಾಮೀಣ ಅಭಿವೃದ್ಧಿ ಮತ್ತು ನೀರಾವರಿ, ಕೃಷಿ ಮುಂತಾದ ವಿಚಾರಗಳನ್ನು ಗಮನಿಸಿದರೆ ಈ ಬಜೆಟ್‌ನಿಂದ ಜನರಿಗೆ ಅನುಕೂಲವೇ ಆಗಿದೆ. ಆದರೆ ಶೈಕ್ಷಣಿಕ ಕ್ಷೇತ್ರದ ಕೆಲವು ವಿಷಯಗಳನ್ನು ಸಿದ್ದರಾಮಯ್ಯ ಅವರು ಮರೆತುಬಿಟ್ಟಿದ್ದಾರೆ.

- ಜಿ. ವಿ. ಜೋಶಿ, ಆರ್ಥಿಕ ತಜ್ಞ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry