ಎತ್ತಿನಹೊಳೆ ಯೋಜನೆ ವಿರುದ್ಧ ಅ.2ಕ್ಕೆ ಜಾಥಾ

7
ಯೋಜನಾ ಪ್ರದೇಶದಲ್ಲಿ ಪರಿಸರ ತಜ್ಞರ ಸುತ್ತಾಟ

ಎತ್ತಿನಹೊಳೆ ಯೋಜನೆ ವಿರುದ್ಧ ಅ.2ಕ್ಕೆ ಜಾಥಾ

Published:
Updated:

ಸಕಲೇಶಪುರ: ಎತ್ತಿನಹೊಳೆ ತಿರುವು ಯೋಜನೆ ವಿರುದ್ಧ ಅಕ್ಟೋಬರ್ 2ರಂದು ಮಂಗಳೂರಿನಲ್ಲಿ ಬೃಹತ್ ಜಾಥಾ ನಡೆಸಲಾಗುವುದು ಎಂದು ಎತ್ತಿನಹೊಳೆ ತಿರುವು ಯೋಜನೆ ವಿರೋಧಿ ಹೋರಾಟದ ಮುಖಂಡ ದಿನೇಶ್ ಹೊಳ್ಳ ಹೇಳಿದರು.ಎತ್ತಿನಹೊಳೆ ನದಿ ಹರಿಯುವ ತಾಲ್ಲೂಕಿನ ಹಾರ್ಲೆ, ಮಾರನಹಳ್ಳಿ, ಆಲುವಳ್ಳಿ, ಕಡಗರವಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ನಂತರ ಅವರು ಸೋಮವಾರ ಇಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.ದಕ್ಷಿಣ ಕನ್ನಡ ಜಿಲ್ಲೆಗೆ ನೇತ್ರಾವತಿಯೇ ಉಸಿರು, ಇದರ ಮೂಲ ಸ್ಥಾನ ಎತ್ತಿನಹೊಳೆ ತಿರುಗಿಸಿದರೆ ಜೀವ ತೆಗೆದಂತಾಗುತ್ತದೆ. ಇನ್ನು ಪಶ್ಚಿಮಘಟ್ಟದ ದಟ್ಟ ಮಳೆಕಾಡುಗಳಲ್ಲಿ ಸ್ವಚ್ಛಂದವಾಗಿ ಹರಿಯುವ ಈ ನದಿಯನ್ನು ನಿಲ್ಲಿಸಿದರೆ, ಅಮೂಲ್ಯವಾದ ಮಳೆಕಾಡು, ಸಸ್ಯ ಸಂಕುಲ, ಪ್ರಾಣಿ ಸಂಕುಲಗಳು, ಜಲಚರಗಳು ನಾಶವಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.ನೈಸರ್ಗಿಕವಾಗಿ ಹರಿಯುವ ನದಿ, ತೊರೆ, ಹಳ್ಳ, ಕೊಳ್ಳಗಳಿಂದಲೇ ಪ್ರಕೃತಿದತ್ತವಾದ ಒಂದು ಪರಿಸರವೇ ಸೃಷ್ಟಿಯಾಗಿರುತ್ತದೆ. ಮನುಷ್ಯನೂ ಸೇರಿದಂತೆ ಅದನ್ನು ಅವಲಂಬಿಸಿದ ಒಂದು ದೊಡ್ಡ ಸರಪಳಿ ಇರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದರು.ಎತ್ತಿನಹೊಳೆ ನದಿ ತಿರುವು ಯೋಜನೆ ಹಿಂದೆ ಓಟ್‌ ಬ್ಯಾಂಕ್‌ ರಾಜಕಾರಣ ಇದೆ. ತುಮಕೂರು, ಕೋಲಾರದ ಜನರಿಗೆ ಕುಡಿಯುವ ನೀರು ಕೊಡಬೇಕು ಎಂಬ ಪ್ರಾಮಾಣಿಕ ಪ್ರಯತ್ನವೇನೂ ಇಲ್ಲ ಎಂದರು.ದಕ್ಷಿಣ ಕನ್ನಡದ ಜನರಿಗೆ ಆಗುತ್ತಿರುವ ಅನ್ಯಾಯ ವಿರೋಧಿಸಿ ಈ ಬಗ್ಗೆ ಸುದೀರ್ಘವಾದ ಚರ್ಚೆ ನಡೆಸಲು, ಅರಣ್ಯ ಸಚಿವ ರಮಾನಾಥ ರೈ ಅವರನ್ನು ಮೂರು ಬಾರಿ ಕರೆದರೂ ಬಂದಿಲ್ಲ. ನದಿ ತಿರುವು ಯೋಜನೆ ವಿಷಯವನ್ನು ಅವರೊಂದಿಗೆ ಮಾತನಾಡುವುದಕ್ಕೆ ಶುರು ಮಾಡಿದರೆ ಅದೇಕೋ ಸಿಟ್ಟು ಮಾಡುತ್ತಾರೆ.ಒಂದು ಮರ ಕಡಿಯದೇ ನದಿ ತಿರುವು ಯೋಜನೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಹೇಳುತ್ತಾರೆ. ರಮಾನಾಥ ರೈ, ಸದಾನಂದ ಗೌಡ ಹಾಗೂ ಪರಮಶಿವಯ್ಯ ಅವರು ನದಿ ತಿರುವು ಯೋಜನೆ ಹೋರಾಟಗಾರರೊಂದಿಗೆ ಮುಕ್ತ ಚರ್ಚೆಗೆ ಬರಬೇಕು. ಚರ್ಚೆಗೆ ವೇದಿಕೆ ಸಿದ್ಧಗೊಳಿಸಿದರೂ ತಪ್ಪಿಸಿಕೊಳ್ಳುವ ಅಗತ್ಯವೇನಿದೆ ಎಂದು ಹೊಳ್ಳ ಪ್ರಶ್ನಿಸಿದರು.ದಕ್ಷಿಣ ಕನ್ನಡ ಜಿಲ್ಲೆಯ ಜನರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿರುವ ನದಿ ತಿರುವು ಯೋಜನೆಯನ್ನು ವಿರೋಧಿಸುವ ಹೋರಾಟ ನಿರಂತರವಾಗಿದೆ. ರೋಟರಿ, ಲಯನ್ಸ್, ವಿದ್ಯಾರ್ಥಿಗಳು, ಕಲಾವಿದರು, ವಿವಿಧ ಸಂಘಟನೆಗಳನ್ನು ಹೋರಾಟದಲ್ಲಿ ತೊಡಗಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದ ರೀತಿಯಲ್ಲಿಯೇ ನೇತ್ರಾವತಿ ಉಗಮದಿಂದ ಸಂಗಮದವರೆಗೂ ರಾಷ್ಟ್ರೀಯ ಸಂಪತ್ತು ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.ಮಲೆನಾಡು ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್, ಸಾಹಿತಿ ರೂಪಾ ಹಾಸನ, ಪರಿಸರವಾದಿ ಅನುಗನಾಳು ಕೃಷ್ಣಮೂರ್ತಿ, ಶೇಷಪ್ಪ, ಭುವನ್ ಕುಕ್ಕೆ, ಬೆಂಗಳೂರಿನ ಹರೀಶ್ ಸೇರಿದಂತೆ, ದಕ್ಷಿಣ ಕನ್ನಡದ ಹಲವು ಪರಿಸರವಾದಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry