ಗುರುವಾರ , ಆಗಸ್ಟ್ 22, 2019
27 °C

ಎತ್ತಿನ ಗಾಡಿಯಲ್ಲಿ ಮರಳು ಸಾಗಣೆ ನಿರ್ಬಂಧ: ಪ್ರತಿಭಟನೆ

Published:
Updated:

ಯಳಂದೂರು: ತಾಲ್ಲೂಕಿನಲ್ಲಿ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಎತ್ತಿನ ಗಾಡಿಗಳಲ್ಲಿ ಮರಳು ಸಾಗಣೆ ಮಾಡುವ ಬಡ ಕೂಲಿ ಕಾರ್ಮಿಕರಿಗೆ ವಿನಾಕಾರಣ  ಕಿರುಕುಳ ನೀಡುತ್ತಿದ್ದಾರೆ. ಇವರಿಗೆ ಕಾನೂನು ಬದ್ಧವಾಗಿ ಮರಳು ಸಾಗಣೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಮರಳುಗಾಡಿ ಕಾರ್ಮಿಕ ಸಂಘವೂ ಸೇರಿದಂತೆ ವಿವಿಧ    ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಎತ್ತಿನಗಾಡಿಗಳೊಂದಿಗೆ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.ಪಟ್ಟಣದ ನಾಡಮೇಗಲ ಮಾರಮ್ಮನ ದೇಗುಲದಿಂದ ಹೊರಟ ಪ್ರತಿಭಟನಾಕಾರರು ಸರ್ಕಾರ, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.ತಾಲ್ಲೂಕಿನ ಸುವರ್ಣಾವತಿ ನದಿ ದಡದ ಕಂದಹಳ್ಳಿ, ಅಂಬಳೆ, ವೈ.ಕೆ. ಮೋಳೆ, ಉಪ್ಪಿನಮೋಳೆ, ಆಲ್ಕೆರೆ ಅಗ್ರಹಾರ, ಗೌಡಹಳ್ಳಿ, ಅಗರ-ಮಾಂಬಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಖಾಸಗಿ ವ್ಯಕ್ತಿಗಳ ಮನೆ ನಿರ್ಮಾಣ ಸೇರಿದಂತೆ ತಮ್ಮ ಸ್ವಂತ ಕಟ್ಟಡಗಳಿಗೂ ಎತ್ತಿನಗಾಡಿಗಳಲ್ಲಿ ಮರಳು ಸಾಗಿಸುತ್ತಿದ್ದಾರೆ. ಕೂಲಿಗಾಗಿ ಮಾತ್ರ ನಾವು ಮರಳನ್ನು ಸಾಗಿಸುತ್ತಿದ್ದೇವೆ. ಆದರೂ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮರಳು ಸಾಗಿಸಲು ಅಡ್ಡಿಪಡಿಸುತ್ತಿದ್ದಾರೆ. ಹಾಗಾಗಿ ಈ ನೀತಿ ಕೈಬಿಟ್ಟು ಮರಳು ಸಾಗಿಸಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.ನೂರಾರು ಎತ್ತುಗಳ ಜೊತೆ ಮಿನಿ ವಿಧಾನಸೌಧದ ಆವರಣಕ್ಕೆ ನುಗ್ಗಿದ ಪ್ರತಿಭಟನಾಕಾರರು ಅಧಿಕಾರಿಗಳ ಧೋರಣೆ ಖಂಡಿಸಿ ಧಿಕ್ಕಾರ ಕೂಗಿದರು.ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಅವರನ್ನು ಸ್ಥಳಕ್ಕೆ ಕರೆಯಿಸಿ ಇದಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ತಹಶೀಲ್ದಾರ್ ಶಿವರಾಮು ಅವರಿಗೆ ಜನರು ಮನವಿ ಮಾಡಿದರು.ಜಿಲ್ಲಾಧಿಕಾರಿಗಳು ಪರಿಷತ್ ಚುನಾವಣೆಯ ಸಭೆಯಲ್ಲಿ ಇರುವ ಬಗ್ಗೆ ತಹಶೀಲ್ದಾರ್ ಮಾಹಿತಿ ನೀಡಿದರು.ಒಪ್ಪಿಗೆ: ಪ್ರತಿಭಟನೆ ವಾಪಸ್: ನಂತರ ತಹಶೀಲ್ದಾರ್              ಶಿವರಾಮು ಮನವಿ ಸ್ವೀಕರಿಸಿ `ಮರಳು ತುಂಬಿದ ಎತ್ತಿನಗಾಡಿಗಳಿಗೆ ಇನ್ನು ಮುಂದೆ ತೊಂದರೆಯಾಗಲಾರದು ಎಂಬ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.ತಾಲ್ಲೂಕು ಪಂಚಾಯಿತಿ ಸದಸ್ಯ ಡಿ. ವೆಂಕಟಾಚಲ, ಅಂಬೇಡ್ಕರ್ ಸೇವಾ ಸಮಿತಿಯ ಉಪಾಧ್ಯಕ್ಷ ಎಂ. ಚಕ್ರವರ್ತಿ, ಬಿವಿಎಸ್ ನ ಆರ್. ಮಾದೇಶ್, ದಸಂಸ ಸಂಚಾಲಕ,              ಎಂ. ಬಂಗಾರಪ್ಪ, ಜಿಲ್ಲಾ ಸಂಚಾಲಕ ಸಿ. ರಾಜಣ್ಣ, ಕಂದಹಳ್ಳಿ ನಾರಾಯಣ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಪ್ರಕಾಶ್, ಅಣಗಳ್ಳಿ ಬಸವರಾಜು, ರೈತಸಂಘದ ತಾಲ್ಲೂಕು ಅಧ್ಯಕ್ಷ ಸಿದ್ಧಲಿಂಗಸ್ವಾಮಿ, ಹಸಿರು ಸೇನೆಯ ಬೂದಂಬಳ್ಳಿ ಗಿರೀಶ್, ಪ್ರಜಾ ವಿಮೋಚನಾದ ಗಂಗವಾಡಿ ಸೋಮಣ್ಣ, ಛಲವಾದಿ ಮಹಾಸಭಾದ ಅಧ್ಯಕ್ಷ ಬಿ. ರಾಜಣ್ಣ, ಕರವೇ ಅಧ್ಯಕ್ಷ ವೈ.ಪಿ. ಚಂದ್ರಮೌಳಿ ಇದ್ದರು.

Post Comments (+)