ಎತ್ತು ಮತ್ತು ಏಸುಕ್ರಿಸ್ತ

7
ಕವನ ಸ್ಪರ್ಧೆ 2012 : ಮೆಚ್ಚುಗೆ ಪಡೆದ ಕವಿತೆ

ಎತ್ತು ಮತ್ತು ಏಸುಕ್ರಿಸ್ತ

Published:
Updated:
ಎತ್ತು ಮತ್ತು ಏಸುಕ್ರಿಸ್ತ

ಬೆನ್ನ ಮೇಲೆ

ಹೊರೆ ಹೊತ್ತ ಎತ್ತು

ಸಾಗುತಿದೆ

ಶಿಲುಬೆಯನು ಹೊತ್ತ

ಏಸು ಕ್ರಿಸ್ತನಂತೆ!

ಆಗಸದ ಬಿಸಿಲ ಬಾಣಲೆಯಿಂದ

ನಿಷ್ಕರುಣಿ ರವಿ

ಉರಿದು ಕೆಡಹುವನು

ಕೆಂಡದುಂಡೆಗಳನು

ತಲೆಗೆ ತೊಡಿಸಿರುವ

ಮುಳ್ಳ ಕಿರೀಟದಂತೆ.

ಸಂತೆ ಮುಗಿಯಲಿನ್ನೂ

ಸಾಕಷ್ಟು ಸಮಯವಿದೆ

ಇಗರ್ಜಿಯ ಗೋಪುರದ ಗಡಿಯಾರ

ಬಾರಿಸುತ್ತಿದೆ ಗಂಟೆ ಹನ್ನೆರಡನು

ಹಗಲಿನೆದೆಗೇ ಗುರಿಯಿಟ್ಟ ಗುಂಡಿನಂತೆ!

ಕಂತೆ ಎತ್ತುವ ತನಕ

ಸಂತೆ ಪೇಟೆಗೆ ಸರಕು

ಸಾಗಿಸಲೇ ಬೇಕು

ಹೆಗಲುಗಳು ನೋಯುತಿವೆ

ಶಿಲುಬೆಗೇರಿಸಿದ ಗಾಯದಂತೆ!ಸಂಜೆ ಆರರ ಬಿಸಿಲು

ಮಂದಿರ ಮಸೀದಿಗಳ ತುಂಬಾ

ಮಂಡಿಯೂರಿದ ಭಕ್ತರ

ಧ್ಯಾನಸ್ಥ ಮೌನದಲಿ

ಜಗದೆಲ್ಲ ಪಾಪಿಗಳ ಲೆಕ್ಕವನು ಅಳಿಸುತಿಹುದು

ಭಾರವನು ಹೊತ್ತು

ಸಾಗಲಾರದ ಎತ್ತು

ಮಂಡಿ ಊರಿದ ಹೊತ್ತು

ಅದರ ಬೆನ್ನ ಮೇಲೆಲ್ಲಾ

ಮೂಡಿರುವ ಬಾಸುಂಡೆ ಬರೆಗಳು

ಕಾಣುತಿವೆ, ಮನುಕುಲದ ಕ್ರೌರ್ಯಕ್ಕೆ

ಬರೆದಿರುವ ನೆತ್ತರ ಭಾಷ್ಯದಂತೆ!ಬಾಯೊಳಗೆ ನೊರೆಗರೆವ ಬುರುಗು

ಕಣ್ಣೊಳಗೆ ದೈನ್ಯತೆಯ ಕೊರಗು

ತನಗೆ ಹುಲ್ಲು ನೀರಿಟ್ಟು

ಪ್ರಾಣ ಕಾಪಿಟ್ಟ ಧಣಿಯ

ಪಾಪಿಷ್ಟ ಹಸಿವಿನ ಋಣವ

ತೀರಿಸಬಲ್ಲೆನು ನಾನು.

ಅವನ

ಚಾಟಿ ಏಟಿನ ಋಣವ

ನೀನೇ ತೀರಿಸೋ ಪ್ರಭುವೇ ಎಂದು

ಕಣ್ಣ ನೀರನು ಸುರಿಸುತಿದೆ

ಶಿಲುಗೇರಿದ ಕ್ರಿಸ್ತನಂತೆ.ಜಗದ ಪಾಪದ ಶಿಲುಬೆಯನು

ಬೆನ್ನ ಮೇಲೆಯೇ ಹೊತ್ತು

ಸಾಗುತಿದೆ ಎತ್ತು

ಈಗಲೂ ನಮ್ಮೆದೆಯ

ಬೀದಿ ಬೀದಿಗಳಲ್ಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry