ಶುಕ್ರವಾರ, ನವೆಂಬರ್ 22, 2019
24 °C

ಎದುರಾಳಿಗಳ ಬಲಹೀನತೆಯೇ ಕಾಂಗ್ರೆಸ್‌ನ `ಶಕ್ತಿ'

Published:
Updated:
ಎದುರಾಳಿಗಳ ಬಲಹೀನತೆಯೇ ಕಾಂಗ್ರೆಸ್‌ನ `ಶಕ್ತಿ'

ಪ್ರೊಫೆಸರ್ ಜೇಮ್ಸ ಮೇನರ್. ಈ ಅಮೆರಿಕನ್ ಸಂಜಾತ ರಾಜಕೀಯ ಶಾಸ್ತ್ರಜ್ಞ ಇಂಗ್ಲೆಂಡ್‌ನ ಹಲವು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಸುದೀರ್ಘ ಅಧ್ಯಾಪನ ಮತ್ತು ಸಂಶೋಧನಾ ವೃತ್ತಿ ನಡೆಸಿ ಇತ್ತೀಚೆಗಷ್ಟೇ ನಿವೃತ್ತರಾಗಿದ್ದಾರೆ. ಈಗ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಸಲಹೆಗಾರರಾಗಿದ್ದಾರೆ. ಮೇನರ್ ಅವರಿಗೆ ಕರ್ನಾಟಕ ಎಂದರೆ ಅದೇನೋ ವಿಚಿತ್ರವಾದ ಮೋಹ. ಕರ್ನಾಟಕ ರಾಜಕೀಯ ಅವರ ಪರಮ ಆಸಕ್ತಿಯ ಕ್ಷೇತ್ರ. ಮೇನರ್ ಅವರೇ ಹೇಳುವಂತೆ ಕರ್ನಾಟಕ ಎಂದರೆ ಅವರಿಗೆ ಎರಡನೇ ಮನೆ ಇದ್ದ ಹಾಗೆ. 1972ರಿಂದೀಚೆಗೆ ಕರ್ನಾಟಕದಲ್ಲಿ ನಡೆದ ಎಲ್ಲಾ ಚುನಾವಣೆಗಳನ್ನೂ ಅವರು ಇಲ್ಲಿ ಬಂದು ಹತ್ತಿರದಿಂದ ಕಂಡು ಅಧ್ಯಯನ ನಡೆಸಿದ್ದಾರೆ. ನಿಜಲಿಂಗಪ್ಪ ಅವರಿಂದ ತೊಡಗಿ ಹೆಚ್ಚಿನ ಎಲ್ಲಾ ಮುಖ್ಯಮಂತ್ರಿಗಳನ್ನು ಸಂದರ್ಶಿಸಿರುವ ಮೇನರ್ ಚುನಾವಣೆ ಘೋಷಣೆ ಯಾಗುತ್ತಲೇ ಬೆಂಗಳೂರಿಗೆ ಬಂದಿಳಿಯುತ್ತಾರೆ. ಈ ಬಾರಿಯೂ ಚುನಾವಣೆಯ ಅಧ್ಯಯನಕ್ಕೆ ಬಂದ ಮೇನರ್ ಜೊತೆ ನಡೆಸಿದ ಮಾತುಕತೆಯ ಆಯ್ದ ಭಾಗಗಳು ಇಲ್ಲಿವೆ.ನಾಲ್ಕು ದಶಕಗಳಿಂದ ಕರ್ನಾಟಕದಲ್ಲಿ ನಡೆದ ಎಲ್ಲಾ ಚುನಾವಣೆಗಳನ್ನು ಹತ್ತಿರದಿಂದ ಕಂಡಿರುವ ನಿಮಗೆ ಈ ಚುನಾವಣೆ ಯಾವುದಾದರೂ ರೀತಿಯಲ್ಲಿ ಭಿನ್ನ ಅಥವಾ ವಿಶಿಷ್ಟ ಅನ್ನಿಸುತ್ತಿದೆಯೇ?

-ನಾನು ಇತ್ತೀಚೆಗೆ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಫೋಟೊ ನೋಡಿದೆ. ಅದು ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿಯವರ ಜತೆ ಚುನಾವಣೆಗೆ ಸಂಬಂಧಿಸಿದಂತೆ ನಡೆಸಿದ ಸಮಾ ಲೋಚನಾ ಸಭೆಯದು. ಅದರಲ್ಲಿ ಸೋನಿಯಾ ಜತೆ ಇದ್ದ ಅಷ್ಟೂ ರಾಜ್ಯ ನಾಯಕರೂ ಹಿಂದುಳಿದ ಅಥವಾ ದಲಿತ ಸಮುದಾಯಗಳಿಗೆ ಸೇರಿದವರಾಗಿದ್ದರು. ಈ ಚುನಾವಣೆಯಲ್ಲಿ ಏನೋ ಸ್ವಲ್ಪ ವಿಭಿನ್ನವಾದದ್ದು ನಡೆಯುತ್ತಿದೆ ಅಂತ ನನಗನಿಸಲಾರಂಭಿಸಿದ್ದು ಆಗ. ಎಪ್ಪತ್ತರ ದಶಕದಿಂದೀಚೆಗೆ ಕಾಂಗ್ರೆಸ್ ಹೈಕಮಾಂಡ್‌ನ ಎಡಬಲದಲ್ಲಿ ಒಬ್ಬ ಪ್ರಬಲ ಜಾತಿಯ ನಾಯಕನಿಲ್ಲದೇ ಇಂತಹದ್ದೊಂದು ಸಮಾಲೋಚನಾ ಸಭೆ ನಡೆಯು ವುದನ್ನು ಊಹಿಸಲೂ ಸಾಧ್ಯವಿರಲಿಲ್ಲ.  ಕಾಂಗ್ರೆಸ್ ಒಂದು ಭಿನ್ನ ಸಾಮಾಜಿಕ ಲೆಕ್ಕಾಚಾರದಲ್ಲಿ ತೊಡಗಿದಂತಿದೆ. ಅದು ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳನ್ನೇ ಮುಖ್ಯವಾಗಿ ಆಶ್ರಯಿಸಿದಂತೆ ಭಾಸವಾಗುತ್ತಿದೆ. ಲಿಂಗಾಯತರು ಹೇಗೂ ಬಿಜೆಪಿ-ಕೆಜೆಪಿ ಪಕ್ಷಗಳಿಗೆ ಮತ್ತು ಒಕ್ಕಲಿಗರು ಜನತಾದಳದೊಂದಿಗೆ ಗುರುತಿಸಿಕೊಂಡಿರುವುದರಿಂದ ಕಾಂಗ್ರೆಸ್‌ಗೆ ಈ ಸಾಮಾಜಿಕ ಹೊಂದಾಣಿಕೆ ಅನಿವಾರ್ಯವಾಗಿರಬಹುದು. ಇಲ್ಲಿ ನಾವು ಒಂದು ಬದಲಾವಣೆಯನ್ನು ಗುರುತಿಸಬೇಕಾಗುತ್ತದೆ.

ಕರ್ನಾಟಕದಲ್ಲಿ ಇಷ್ಟೂ ಕಾಲವೂ ಎಲ್ಲಾ ಪಕ್ಷಗಳು ಒಂದು ರೀತಿಯಲ್ಲಿ ಎಲ್ಲಾ ಜಾತಿ-ವರ್ಗಗಳಿಂದ ಸಮನಾಗಿ ಬೆಂಬಲ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುತಿದ್ದವು. ಇದನ್ನು ನಾನುrainbow coalition ಅಂತ ಕರೆದಿದ್ದೆ. ಆದರೆ ಈ ಚುನಾವಣೆಯ ಹೊಸ್ತಿಲಲ್ಲಿ ಒಂದೊಂದು ಪಕ್ಷವೂ ಒಂದೊಂದು ಸಾಮಾಜಿಕ ವರ್ಗದವರ ಜತೆ ಇತರ ವರ್ಗಗಳಿಗಿಂತ ಹೆಚ್ಚಾಗಿ ಗುರುತಿಸುವತ್ತ ಹೆಜ್ಜೆ ಇಡುತ್ತಿವೆ. ಕೊನೆಗೀಗ ಕಾಂಗ್ರೆಸ್ ಕೂಡಾ ಈ ಹಾದಿಯಲ್ಲೇ ಸಾಗುತ್ತಿರುವಂತೆ ಕಾಣುತ್ತಿದೆ. ಬಿಹಾರ-ಉತ್ತರ ಪ್ರದೇಶಗಳ ರಾಜಕೀಯ ಈ ಬಗೆಯಲ್ಲಿ ಸಾಮಾಜಿಕ ಧ್ರುವೀಕರಣದ ಆಧಾರದಲ್ಲಿ ನಡೆಯುತ್ತದೆ. ಒಂದು ರಾಜಕೀಯ ತಂತ್ರವಾಗಿ ಇದು ಎಷ್ಟು ಫಲಪ್ರದ ಆಗಬಹುದು ಅಥವಾ ಆಗಲಾರದು ಎನ್ನುವುದು ಮುಖ್ಯಪ್ರಶ್ನೆಯಲ್ಲ. ಈ ಟ್ರೆಂಡ್ ಹೀಗೆಯೇ ಮುಂದುವರಿದರೆ ರಾಜ್ಯದ ಸಾಮಾಜಿಕ ಸಾಮರಸ್ಯದ ಮೇಲೆ ಇದು ಪರಿಣಾಮ ಬೀರಬಹುದು ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.ಕಾಂಗ್ರೆಸ್ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ನೆಚ್ಚಿಕೊಂಡು ದೇವರಾಜ ಅರಸು ಅವರ ಕಾಲದಲ್ಲಿ ಕೂಡಾ ರಾಜಕೀಯ ಮಾಡಿತ್ತಲ್ಲವೇ?

-ಈಗ ಕಾಂಗ್ರೆಸ್ಸಿನಲ್ಲಿ ಮುಂಚೂಣಿಯಲ್ಲಿರುವ ನಾಯಕರ ಸಾಮಾಜಿಕ ಚಹರೆಯನ್ನು ನೋಡಿದರೆ ಮೇಲ್ನೋಟಕ್ಕೆ ಅದೇ ಪರಿಸ್ಥಿತಿಯ ಪುನರಾವರ್ತನೆ ಎಂಬ ಸಂಶಯ ಯಾರಿಗಾದರೂ ಬಂದೀತು. ಆದರೆ ಸೂಕ್ಷ್ಮವಾಗಿ ನೋಡಿದರೆ ಪರಿಸ್ಥಿತಿ ಹಾಗಿಲ್ಲ. ದೇವರಾಜ ಅರಸು ಅವರು ಈ ಬಗೆಯ ಸೋಷಿಯಲ್ ಎಂಜಿನಿಯರಿಂಗ್ ಮಾಡಿದಾಗ ಕಾಂಗ್ರೆಸ್‌ಗೆ ಈ ವರ್ಗಗಳು ಅಗತ್ಯವಿತ್ತು; ಈ ವರ್ಗಗಳಿಗೂ ರಾಜಕೀಯ ಆಶ್ರಯಕ್ಕೆ ಕಾಂಗ್ರೆಸ್ ಬೇಕಿತ್ತು. ಆಗ ಈ ವರ್ಗಗಳಿಗೆ ರಾಜಕೀಯ ಆಶ್ರಯ ನೀಡುವ ಮತ್ತೊಂದು ಪಕ್ಷವೂ ಇರಲಿಲ್ಲ. ಈಗ ಪರಿಸ್ಥಿತಿ ಹಾಗಿದೆಯೇ? ಕಾಂಗ್ರೆಸ್ ದಲಿತ ಮತ್ತು ಹಿಂದುಳಿದ ವರ್ಗಗಳ ಓಟುಗಳಿಗಾಗಿ ಇತರ ಪಕ್ಷಗಳೇಕೆ, ಬಿಜೆಪಿಯ ಜತೆ ಕೂಡಾ ಸ್ಪರ್ಧಿಸಬೇಕಿದೆ. ದೆಹಲಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಸಾಮಾಜಿಕ ಪರಿಸ್ಥಿತಿಯನ್ನು ಯಾವ ರೀತಿ ಅರ್ಥೈಸಲು ಹೊರಟಿದೆ ಎನ್ನುವ ಕುತೂಹಲ ನನ್ನನ್ನು ಕೆಲವೊಮ್ಮೆ ಕಾಡುತ್ತದೆ. ಕಾಂಗ್ರೆಸ್ ಈ ಕಾಲಕ್ಕೆ ಇಂತಹದ್ದೊಂದು ಸೀಮಿತ ಸಾಮಾಜಿಕ ತಳಹದಿಯ ಮೇಲೆ ವ್ಯವಹರಿಸ ಹೊರಟದ್ದು ಅದು ಬಲಹೀನವಾಗುತ್ತಿರುವುದರ ಸಂಕೇತ. ಬಿಜೆಪಿ ಹೈಕಮಾಂಡ್ ಲಿಂಗಾಯತರು ಜತೆಗಿದ್ದರೆ ಸಾಕು ಚುನಾವಣೆ ಗೆದ್ದುಬಿಡುತ್ತೇವೆ ಎಂದು ಭಾವಿಸಿರುವುದು; ಕಾಂಗ್ರೆಸ್ ಹೈಕಮಾಂಡ್ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರನ್ನು ನೆಚ್ಚಿಕೊಂಡರೆ ಅಧಿಕಾರ ನಮ್ಮದೇ ಅಂತ ಭಾವಿಸಿರುವುದು, ಇವೆರಡೂ ಈ ಕಾಲದಲ್ಲಿ ರಾಜಕೀಯ ಬಾಲಿಶತನವಾಗಿ ಕಾಣಿಸುತ್ತದೆ.ಆದರೂ ದಕ್ಷಿಣ ಭಾರತದ ಅಷ್ಟೂ ರಾಜ್ಯಗಳ ಪೈಕಿ ಕಾಂಗ್ರೆಸ್ ಇನ್ನೂ ಬಲಶಾಲಿಯಾಗಿ ಉಳಿದಿರುವುದು ಕರ್ನಾಟಕದಲ್ಲಿ ಮಾತ್ರ ಅಲ್ಲವೇ?

-ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ಮಾತನಾಡುವುದಾದರೆ ಕೇರಳದಲ್ಲಿ ಕಾಂಗ್ರೆಸ್ ಶಕ್ತಿಶಾಲಿಯಾಗಿಯೇ ಇದೆ. ಆಂಧ್ರಪ್ರದೇಶದಲ್ಲಿ ಅದು ಈಗ ಅನುಭವಿಸುತ್ತಿರುವ ಅನಾಥ ಸ್ಥಿತಿಯಿಂದ ಹೊರಬರಲು ಎಷ್ಟು ಕಾಲಬೇಕು ಅಂತ ಹೇಳುವ ಹಾಗಿಲ್ಲ. ಕರ್ನಾಟಕದಲ್ಲಿ ಅದು ಇನ್ನೂ ಪ್ರಬಲವಾಗಿದೆ ಎಂದಾದರೆ ಅದಕ್ಕೆ ಕಾರಣ ಕಾಂಗ್ರೆಸ್ಸಿನ ಬಲ ಎನ್ನುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ಗೆ ಪರ್ಯಾಯವಾಗಬಹುದಾದ ಪಕ್ಷಗಳ ಬಲಹೀನತೆ ಅಂತ ನಾನು ಭಾವಿಸುತ್ತೇನೆ.ಕರ್ನಾಟಕದಲ್ಲಿ ಬಿಜೆಪಿ ಮೊತ್ತ ಮೊದಲ ಬಾರಿಗೆ ಐದು ವರ್ಷಗಳ ಆಳ್ವಿಕೆ ನಡೆಸಿದೆ. ನೀವು ಕಂಡ ಕರ್ನಾಟಕದ ನಲವತ್ತು ವರ್ಷಗಳ ಚರಿತ್ರೆಯಲ್ಲಿ ಈ ಐದು ವರ್ಷಗಳನ್ನು ಹೇಗೆ ಅರ್ಥೈಸುತ್ತೀರಿ?

-ಇಲ್ಲಿ ಹಲವಾರು ವಿಚಾರಗಳನ್ನು ಹೇಳಬಹುದು. ರಾಜಕೀಯ ಅಸ್ಥಿರತೆ, ಭ್ರಷ್ಟಾಚಾರ ಇತ್ಯಾದಿಗಳ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಆ ಬಗ್ಗೆ ಮತ್ತೆ ಹೇಳುವುದಕ್ಕಿಂತ ಇನ್ನೊಂದು ಮುಖ್ಯವಾದ ವಿಚಾರವನ್ನು ಗಮನಿಸೋಣ. ಇಂದು ಇಡೀ ದೇಶದ ಜನಸಂಖ್ಯೆಯ ಶೇಕಡಾ 50ರಷ್ಟು ಮಂದಿ ಒಂದು ರೀತಿಯ ವ್ಯಕ್ತಿ ಕೇಂದ್ರಿತ ಆಡಳಿತಕ್ಕೆ ಒಳಪಟ್ಟಿದ್ದಾರೆ. ತಮಿಳುನಾಡಿನಲ್ಲಿ ಜಯಲಲಿತಾ, ಗುಜರಾತಿನಲ್ಲಿ ನರೇಂದ್ರ ಮೋದಿ, ಒರಿಸ್ಸಾದಲ್ಲಿ ನವೀನ್ ಪಟ್ನಾಯಕ್, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಬಿಹಾರದಲ್ಲಿ ನಿತೀಶ್ ಕುಮಾರ್... ಆಂಧ್ರಪ್ರದೇಶದಲ್ಲಿ ಕೂಡಾ ವೈ.ಎಸ್. ರಾಜಶೇಖರ ರೆಡ್ಡಿ ಆಳ್ವಿಕೆ ಇದ್ದಷ್ಟು ಕಾಲ ಇದೇ ಪರಿಸ್ಥಿತಿ ಇತ್ತು. ಈ ಎಲ್ಲಾ ರಾಜ್ಯಗಳಲ್ಲಿ ಆಳುತ್ತಿರುವುದು ಪಕ್ಷಗಳ ಸರ್ಕಾರಗಳಲ್ಲ. ವ್ಯಕ್ತಿಗಳ ಸರ್ಕಾರ. ಪಕ್ಷಗಳು ಇಲ್ಲಿ ಹೆಸರಿಗೆ ಮಾತ್ರ. ಇಂತಹ ನಾಯಕರು ಬೇರೆಬೇರೆ ಖಾಸಗಿ ಅರ್ಥಿಕ ಶಕ್ತಿಗಳ ಜತೆ ಮಾಡಿಕೊಳ್ಳುವ ಹೊಂದಾಣಿಕೆ ಇತ್ಯಾದಿಗಳ್ಯಾವುವೂ ಯಾರಿಗೂ ಸರಿಯಾಗಿ ಅರ್ಥವಾಗುವುದಿಲ್ಲ; ಅವುಗಳ ಮೇಲೆ ಯಾವ ನಿಯಂತ್ರಣವೂ ಸಾಧ್ಯವಿಲ್ಲ. ಇದೊಂದು ವಿಚಿತ್ರವಾದ ಪರಿಸ್ಥಿತಿ. ಒಂದೆಡೆ 1996ರ ನಂತರ ಸಮ್ಮಿಶ್ರ ಸರ್ಕಾರಗಳ ಯುಗ ಆರಂಭವಾದಾಗಿನಿಂದ ಪ್ರಧಾನಮಂತ್ರಿ ಹುದ್ದೆ ಬಲಗುಂದುತ್ತಲೇ ಸಾಗಿದೆ. ಪ್ರಧಾನಿಯೊಬ್ಬನಿಂದ ಅಧಿಕಾರ ದುರ್ಬಳಕೆ ಈ ಪರಿಸ್ಥಿತಿಯಲ್ಲಿ ಅಸಾಧ್ಯವಾದ ಮಾತು. ಇದೇ ಅವಧಿಯಲ್ಲಿ ಇನ್ನೊಂದೆಡೆ ಪಕ್ಷ ವ್ಯವಸ್ಥೆ (ಚ್ಟಠಿ ಠಿಛಿಞ) ದುರ್ಬಲವಾಗುತ್ತಾ ಹೋದ ಹಾಗೆ ಪಕ್ಷಗಳನ್ನು ಮೀರಿ ನಿಲ್ಲುವ ಮುಖ್ಯಮಂತ್ರಿಗಳ ಸಂಖ್ಯೆ ಹೆಚ್ಚುತ್ತಿದೆ. ಯಡಿಯೂರಪ್ಪ ಅವರ ಅವಧಿಯಲ್ಲಿ ಕರ್ನಾಟಕದಲ್ಲೂ ಸರ್ಕಾರ ವ್ಯಕ್ತಿಕೇಂದ್ರಿತವಾಗುವ ದಾರಿಯಲ್ಲಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದ ಈ ಸ್ಥಿತಿ ಕರ್ನಾಟಕದ ಮಟ್ಟಿಗೆ ಅಲ್ಪಾವಧಿಯಲ್ಲಿ ಕೊನೆಗೊಂಡಿತು. ಇನ್ನು ಅಂತಹದ್ದೊಂದು ಪರಿಸ್ಥಿತಿ ಕರ್ನಾಟಕಕ್ಕೆ ಸದ್ಯಕ್ಕೆ ಎದುರಾಗುವ ಸಾಧ್ಯತೆ ಇಲ್ಲ.  ಕಳೆದ ಐದು ವರ್ಷಗಳ ರಾಜಕೀಯ ಸ್ಥಿತ್ಯಂತರದಲ್ಲಿ ನನಗೆ ಮುಖ್ಯ ಅನ್ನಿಸುವುದು ಈ ಬೆಳವಣಿಗೆ. ಇನ್ನು ಸರ್ಕಾರದ ಒಟ್ಟು ಕಾರ್ಯವೈಖರಿಯ ಬಗ್ಗೆ ಹೇಳುವುದಾದರೆ ನನಗನ್ನಿಸುವ ಮಟ್ಟಿಗೆ ಈ ತನಕ ಕರ್ನಾಟಕ ಕಂಡ ಅತ್ಯಂತ ಕೆಟ್ಟ ಸರ್ಕಾರ ಎಂದರೆ ಗುಂಡೂರಾವ್ ಸರ್ಕಾರ. ನಂತರದ ಸ್ಥಾನವನ್ನಷ್ಟೇ ಬಿಜೆಪಿ ಸರ್ಕಾರಕ್ಕೆ ನೀಡಬಹುದು.ಎಸ್. ನಿಜಲಿಂಗಪ್ಪನವರಿಂದ ಪ್ರಾರಂಭಿಸಿ ಹಲವಾರು ಮುಖ್ಯಮಂತ್ರಿಗಳ ಮತ್ತು ಹಿರಿಯ ರಾಜಕೀಯ ನಾಯಕರ ಏಳು ಬೀಳುಗಳನ್ನು ಕಂಡಿದ್ದೀರಿ. ಈ ಅವಧಿಯಲ್ಲಿ ರಾಜ್ಯದ ರಾಜಕೀಯ ನಾಯಕತ್ವದ ಗುಣಮಟ್ಟದಲ್ಲಿ ಆದ ಬದಲಾಣೆಯನ್ನು ಹೇಗೆ ಚಿತ್ರಿಸುವಿರಿ?

-ನಾಯಕತ್ವ ಎಂದ ಕೂಡಲೇ ನಾವು ಯಾವುದೋ ವ್ಯಕ್ತಿ ಎನ್ನುವ ದೃಷ್ಟಿಯಲ್ಲೆೀ ನೋಡುತ್ತೇವೆ. ಹಾಗಲ್ಲ. ಕರ್ನಾಟಕದ ಮಟ್ಟಿಗೆ ನನಗನಿಸುವ ಹಾಗೆ ನಾಯಕತ್ವವೆಲ್ಲಾ ಒಟ್ಟಾಗಿ ಅಧಿಕಾರಕ್ಕೆ ಬಂದದ್ದು ಮತ್ತು ಆಡಳಿತ ನಡೆಸಿದ್ದು ಅಂತ ಇದ್ದರೆ ಅದು ಜನತಾ/ ಜನತಾದಳ ಸರ್ಕಾರದ ಅವಧಿಯಲ್ಲಿ (1983-89) ಮಾತ್ರ. ಎಂತೆಂತಹ ಘಟಾನುಘಟಿಗಳೆಲ್ಲಾ ಒಟ್ಟು ಸೇರಿದ ಸರ್ಕಾರವಾಗಿತ್ತು ಅದು. ಈಗಲೂ ನೆನೆಸಿಕೊಂಡರೆ ರೋಮಾಂಚನವಾಗುತ್ತದೆ.ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ, ಎಸ್.ಆರ್. ಬೊಮ್ಮೋಯಿ, ಜೆ.ಹೆಚ್. ಪಟೇಲ್, ಅಬ್ದುಲ್ ನಜೀರ್ ಸಾಬ್, ರಾಚಯ್ಯ... ಒಂದರ್ಥದಲ್ಲಿ ಮೊದಲನೇ ಸಾಲಿನ, ಎರಡನೇ ಸಾಲಿನ ಮತ್ತು ಮೂರನೇ ಸಾಲಿನ ಹೀಗೆ ಮೂರೂ ಸಾಲಿನಲ್ಲಿ ಆಗ ಭರವಸೆ ಮೂಡಿಸುವ ನಾಯಕರುಗಳಿದ್ದರು. ಮೊದಲನೇ ಸಾಲಿನವರ ಹೆಸರು ಹೇಳಿದೆನಲ್ಲ. ಎರಡನೇ ಸಾಲಿನಲ್ಲಿ ಎಂ.ಪಿ. ಪ್ರಕಾಶ್ ಮುಂತಾದವರಿದ್ದರು. ಅಂದಿನ ಎರಡನೇ ಮತ್ತು ಮೂರನೇ ಸಾಲಿನ ನಾಯಕರು ಈಗ ಬೇರೆ ಬೇರೆ ಪಕ್ಷಗಳಲ್ಲಿ ಹಂಚಿಹೋಗಿದ್ದಾರೆ. ಕರ್ನಾಟಕದ ಮಟ್ಟಿಗೆ ರಾಜಕೀಯ ನಾಯಕತ್ವ ಪಕ್ವವಾದ ಕಾಲ ಅದು.ಹಿಂದಿನ ಹಲವಾರು ಚುನಾವಣೆಗಳ ಫಲಿತಾಂಶವನ್ನು ನೀವು ಹೆಚ್ಚುಕಡಿಮೆ ಸರಿಯಾಗಿಯೇ ಊಹಿಸಿದ್ದಿರಿ. ಈ ಬಾರಿ?

-ಹಾಗೇನಿಲ್ಲ. ಇತ್ತೀಚೆಗಿನ ವರ್ಷಗಳಲ್ಲಿ ಚುನಾವಣೆಯ ಫಲಿತಾಂಶದಲ್ಲಿ ಊಹಿಸುವಂಥದ್ದು ಅಂತ ಉಳಿಯುವುದು ಬಹಳ ಕಡಿಮೆ. ಹೆಚ್ಚುಕಡಿಮೆ ಅದು ಸ್ಪಷ್ಟವಾಗಿಯೇ ಇರುತ್ತದೆ. 1980-2008ರ ಅವಧಿಯಲ್ಲಿ ಭಾರತದಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಶೇಕಡಾ 70ರಷ್ಟು ರಾಜ್ಯಗಳಲ್ಲಿ ಆಡಳಿತ ಪಕ್ಷ ಅಧಿಕಾರ ಕಳೆದುಕೊಂಡಿದೆ. ಪಶ್ಚಿಮ ಬಂಗಾಳ, ತ್ರಿಪುರಾ ಮುಂತಾದ ರಾಜ್ಯಗಳನ್ನು ಬಿಟ್ಟು ಲೆಕ್ಕ ಹಾಕಿದರೆ ಇದು ಶೇಕಡಾ 90 ರಷ್ಟು. ಕರ್ನಾಟಕದಲ್ಲಿ ಕೂಡಾ 85ರ ನಂತರ ಆಡಳಿತ ಪಕ್ಷಗಳು ಸೋಲುತ್ತಲೇ ಬಂದಿವೆ. ಅಷ್ಟರ ಮಟ್ಟಿಗೆ ಫಲಿತಾಂಶವನ್ನು ಊಹಿಸುವುದು ಕಷ್ಟವಲ್ಲ.(ಜೇಮ್ಸ ಮೇನರ್ ಅವರ ಹಳೆಯ ವಿದ್ಯಾರ್ಥಿಯಾಗಿರುವ ಸಂದರ್ಶಕರು ಪ್ರಸ್ತುತ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದಲ್ಲಿ ಬೋಧಕ ಮತ್ತು ಸಂಶೋಧಕರು)

ಪ್ರತಿಕ್ರಿಯಿಸಿ (+)