ಎನ್.ಎಚ್.4 ವಿಸ್ತರಣೆಗೆ ಐತಿಹಾಸಿಕ ಕೋಟೆ ಬಲಿ

7

ಎನ್.ಎಚ್.4 ವಿಸ್ತರಣೆಗೆ ಐತಿಹಾಸಿಕ ಕೋಟೆ ಬಲಿ

Published:
Updated:
ಎನ್.ಎಚ್.4 ವಿಸ್ತರಣೆಗೆ ಐತಿಹಾಸಿಕ ಕೋಟೆ ಬಲಿ

ಬೆಂಗಳೂರು: ಐತಿಹಾಸಿಕ ಸ್ಮಾರಕಗಳಿಗೆ ಒಂದಲ್ಲಾ ಒಂದು ಕುತ್ತು ತಪ್ಪಿದ್ದಲ್ಲ ಎಂಬುದು ಮತ್ತೆ ಸಾಬೀತಾಗಿದೆ. ದೇವನಹಳ್ಳಿ ರಸ್ತೆಯ ಚಿಕ್ಕಜಾಲದ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರ ವಿಸ್ತರಣೆಗಾಗಿ ಕೋಟೆಯ ಭಾಗವನ್ನು ಒಡೆಯಲಾಗಿದ್ದು, ಆರು ತಿಂಗಳಾದರೂ ಕೋಟೆಯ ಗೋಡೆಯನ್ನು ಪುನರ್ ನಿರ್ಮಿಸಿಲ್ಲ ಎಂಬುದು ಸ್ಥಳೀಯರ ಆರೋಪ.

ಸುಮಾರು ಎರಡು ಎಕರೆ ಜಾಗದ ಕೋಟೆಯ ಆವರಣದಲ್ಲಿ ದೇವಾಲಯ, ಮನೆಗಳು, ಮಂಟಪ ಸಾಲು ಹಾಗೂ ಕಲ್ಯಾಣಿ ಇದ್ದು, ಬಹಳ ದಿನಗಳಿಂದ ಕೋಟೆ ಸಂಕ್ಷಣೆ ಇಲ್ಲದೇ ಪಾಳು ಬಿದ್ದಿದೆ. ರಸ್ತೆ ವಿಸ್ತರಣೆಗಾಗಿ ಕೋಟೆಯ ಗೋಡೆಯನ್ನು ಒಡೆದ ನಂತರ ಕೋಟೆಯ ಸ್ಥಿತಿ ಇನ್ನಷ್ಟು ಹಾಳಾಗಿದೆ. ರಸ್ತೆ ವಿಸ್ತರಣೆ ಕಾಮಗಾರಿ ಮುಗಿದ ನಂತರ ಕೋಟೆಯ ಗೋಡೆಯನ್ನು ಪುನರ್ ನಿರ್ಮಿಸುವುದಾಗಿ ಹೇಳಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲ್ಲಿಯವರೆಗೂ ಕೋಟೆಯ ಗೋಡೆ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

`ಕೋಟೆಯನ್ನು 19 ನೇ ಶತಮಾನದಲ್ಲಿ ನಿರ್ಮಿಸಿರುವ ಸಾಧ್ಯತೆಗಳಿವೆ. ಕೋಟೆಯಲ್ಲಿ ಮೈಸೂರು ಅರಸರ ಲಾಂಛನವಾಗಿದ್ದ ಗಂಡುಭೇರುಂಡದ ಶಿಲ್ಪ ಪತ್ತೆಯಾಗಿದೆ. ಹೀಗಾಗಿ ಮೈಸೂರು ಅರಸರ ಕಾಲದಲ್ಲಿ ಈ ಕೋಟೆ ನಿರ್ಮಾಣವಾಗಿರಬಹುದು~ ಎಂದು ಭಾರತೀಯ ಪುರಾತತ್ವ ಸಂಶೋಧನಾ ಸಮಿತಿಯ ಉಪ ನಿರ್ದೇಶಕ ಡಾ.ಎಸ್.ಕೆ.ಅರುಣಿ `ಪ್ರಜಾವಾಣಿ~ ಗೆ ತಿಳಿಸಿದರು.

`ಇದು ನಿಜವಾಗಿ ಕೋಟೆಯೇ ಅಥವಾ ಪಾಳೇಗಾರರ ಮನೆಯ ಸಂರಕ್ಷಣೆಗಾಗಿ ಕಟ್ಟಿದ್ದ `ವಾಡೆ~ಯೋ ಎಂಬ ಬಗ್ಗೆ ಸರಿಯಾದ ಮಾಹಿತಿಗಳಿಲ್ಲ. ನಿಜಾಮರ ಆಳ್ವಿಕೆಯ ಕಾಲದ ಗುತ್ತೇದಾರ್ ಮನೆತನಗಳ `ವಾಡೆ~ಗಳೂ ಇದೇ ಮಾದರಿಯಲ್ಲಿ ನಿರ್ಮಾಣಗೊಂಡಿವೆ. ಹೀಗಾಗಿ ಇದನ್ನು ನಿಖರವಾಗಿ ಕೋಟೆ ಎಂದು ಕರೆಯಲು ಸಾಧ್ಯವಿಲ್ಲ~ ಎಂದು ಅವರು ತಿಳಿಸಿದ್ದಾರೆ.

`ಕೋಟೆ ನಮ್ಮ ಮುತ್ತಾತನ ಕಾಲದಲ್ಲಿ ಪಾಳೇಗಾರರೊಬ್ಬರಿಂದ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಇಲ್ಲಿನ ಮಂಟಪಗಳನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಕಟ್ಟಿಸಲಾಗಿದ್ದು, ಇವು ಧರ್ಮಛತ್ರಗಳಾಗಿದ್ದವು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು~ ಎಂದು ಸ್ಥಳೀಯರಾದ ಎಸ್.ಕೃಷ್ಣಪ್ಪ ಹೇಳಿದ್ದಾರೆ.

`ಪಾಳೇಗಾರರ ನಂತರ ಕೋಟೆ ತಿಮ್ಮಕ್ಕ ಎಂಬುವರ ಕುಟುಂಬ ಈಗಿನ ಕೋಟೆಯ ಸ್ಥಳವನ್ನು ಆಕ್ರಮಿಸಿಕೊಂಡಿತ್ತು. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಆಕೆಯ ಮರಣದ ನಂತರ ಆಕೆಯ ಕುಟುಂಬದವರು ಕೋಟೆಯನ್ನು ತೊರೆದರು. ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೋಟೆಯ ಗೋಡೆಯನ್ನು ಒಡೆದಿದ್ದು, ಇಲ್ಲಿಯವರೆಗೂ ಪುನರ್ ನಿರ್ಮಿಸಿಲ್ಲ. ಕೋಟೆಯ ಬಗ್ಗೆ ಸರ್ಕಾರಕ್ಕೂ ಯಾವುದೇ ಕಾಳಜಿ ಇಲ್ಲ~ ಎಂದು ಸ್ಥಳೀಯ ನಿವಾಸಿ ಎನ್.ಸುರೇಶಪ್ಪ ದೂರಿದರು.

ಯಲಹಂಕ ತಾಲ್ಲೂಕು ಕಚೇರಿಯ ಮಾಹಿತಿಯ ಪ್ರಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೋಟೆಯನ್ನು ಒಡೆಯಲು ತಹಶೀಲ್ದಾರ್ ಅವರಿಂದ ನಿರಪೇಕ್ಷಣಾ ಪತ್ರವನ್ನು ಪಡೆದಿದೆ ಎನ್ನಲಾಗಿದೆ. ಕೋಟೆ ಒಡೆಯಲು ಸರ್ಕಾರದಿಂದ ಅನುಮತಿ ಪಡೆಯಲಾಗಿದೆ ಎಂದು ಪ್ರಾಧಿಕಾರ ಅಧಿಕಾರಿಗಳು ತಿಳಿಸಿದ್ದಾರೆ.

`ನಗರದಲ್ಲಿ ನೂರಾರು ಐತಿಹಾಸಿಕ ಸ್ಮಾರಕಗಳಿದ್ದು, ಸ್ಮಾರಕಗಳ ಸಂರಕ್ಷಣೆಗೆ ಸರ್ಕಾರ ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಸ್ಥಳೀಯ ಆಡಳಿತ ಹಾಗೂ ಸಂಘ ಸಂಸ್ಥೆಗಳು ಸ್ಮಾರಕ ಸಂರಕ್ಷಣೆಯ ಜವಾಬ್ದಾರಿ ವಹಿಸಬೇಕು. ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು~ ಎಂದು `ಆರಂಭ~ ಸಂಸ್ಥೆಯ ಸ್ಥಾಪಕ ಹಾಗೂ ಇತಿಹಾಸಕಾರ ಸುರೇಶ್ ಮೂನ ಅಭಿಪ್ರಾಯಪಟ್ಟರು.

`ಚಿಕ್ಕಜಾಲದ ಕೋಟೆ ರಾಜ್ಯ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಸೇರಿಲ್ಲ. ಆದರೂ ಸ್ಮಾರಕದ ಸಂರಕ್ಷಣೆ ಎಲ್ಲರ ಜವಾಬ್ದಾರಿ. ಹೀಗಾಗಿ ಕನಿಷ್ಠ ಕೋಟೆ ಗೊಡೆಯನ್ನು ಪುನರ್ ನಿರ್ಮಾಣ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಸುಮಾರು ಇಪ್ಪತ್ತು ಸಾವಿರ ಶಿಲ್ಪಕಲಾ ಸ್ಮಾರಕಗಳಿದ್ದು, ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಎಲ್ಲಾ ಸ್ಮಾರಕಗಳ ಸರಿಯಾದ ನಿರ್ವಹಣೆ ಸಾಧ್ಯವಾಗುತ್ತಿಲ್ಲ~ ಎಂದು ರಾಜ್ಯ ಪುರಾತತ್ವ ಇಲಾಖೆಯ ಉಪ ನಿರ್ದೇಶಕ ಎಚ್.ಎಂ.ಸಿದ್ಧನಗೌಡರ್ `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry