ಮಂಗಳವಾರ, ನವೆಂಬರ್ 19, 2019
27 °C
ವಿದೇಶಿ ಹಣ ಸ್ವೀಕಾರ; ಭಾರತಕ್ಕೆ ಮೊದಲ ಸ್ಥಾನ

ಎನ್‌ಆರ್‌ಐ: ರೂ 3.72 ಲಕ್ಷ ಕೋಟಿ ಜಮಾ

Published:
Updated:
ಎನ್‌ಆರ್‌ಐ: ರೂ 3.72 ಲಕ್ಷ ಕೋಟಿ ಜಮಾ

ವಾಷಿಂಗ್ಟನ್ (ಐಎಎನ್‌ಎಸ್): ಅನಿವಾಸಿ ಭಾರತೀಯರಿಂದ (ಎನ್‌ಆರ್‌ಐ) 2012ನೇ ಸಾಲಿನಲ್ಲಿ 6,900 ಕೋಟಿ ಡಾಲರ್‌ಗಳಷ್ಟು (ರೂ3.72 ಲಕ್ಷ ಕೋಟಿ) ಹಣ ಭಾರತಕ್ಕೆ ಜಮಾ ಆಗಿದೆ ಎಂದು ವಿಶ್ವಬ್ಯಾಂಕ್  ಹೇಳಿದೆ.  ಅನಿವಾಸಿ ಹಣ ಸ್ವೀಕಾರದಲ್ಲಿ ಭಾರತ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಚೀನಾಕ್ಕೆ 6,000 ಕೋಟಿ ಡಾಲರ್ (ರೂ3.24 ಲಕ್ಷ ಕೋಟಿ)  ಮತ್ತು ಫಿಲಿಪ್ಪೀನ್ಸ್  2,400 ಕೋಟಿ ಡಾಲರ್ (ರೂ1.29 ಲಕ್ಷ ಕೋಟಿ) ಹಣ ಜಮಾ ಆಗಿದ್ದು ನಂತರದ ಎರಡು ಸ್ಥಾನಗಳಲ್ಲಿವೆ.  2,300 ಕೋಟಿ ಡಾಲರ್ (ರೂ1.24 ಲಕ್ಷ ಕೋಟಿ) ವಿದೇಶಿ ಹಣ ಸ್ವೀಕಸಿರುವ ಮೆಕ್ಸಿಕೊ ನಾಲ್ಕನೆಯ ಸ್ಥಾನದಲ್ಲಿದೆ.  ನೈಜೀರಿಯಾ ಮತ್ತು ಈಜಿಪ್ತ್  ನಂತರದ ಸ್ಥಾನಗಳಲ್ಲಿವೆ ಎಂದು ವಿಶ್ವಬ್ಯಾಂಕ್‌ನ ವಲಸೆ ಮತ್ತು ಅಭಿವೃದ್ಧಿ ವರದಿ ಹೇಳಿದೆ.ಪ್ರಪಂಚದಲ್ಲಿಯೇ ಅತಿ ಹೆಚ್ಚು ವಿದೇಶಿ ಹಣ ಜಮಾ ಆಗುತ್ತಿರುವುದು ಭಾರತದಲ್ಲಿ. ತೈಲ ನಿಕ್ಷೇಪ ಹೇರಳವಾಗಿರುವ ಕೊಲ್ಲಿ ದೇಶಗಳಲ್ಲಿ ಭಾರತದ ಸಾವಿರಾರು ಕೌಶಲ್ಯ ರಹಿತ ವಲಸಿಗರು ಕೆಲಸ ಮಾಡುತ್ತಿದ್ದಾರೆ. ಅಮೆರಿಕ ಸೇರಿದಂತೆ ಗರಿಷ್ಠ ವರಮಾನ ಹೊಂದಿರುವ ದೇಶಗಳಲ್ಲೂ ಭಾರತೀಯ ಮೂಲದ ಕೌಶಲ ಹೊಂದಿರುವ ಮಾನವ ಸಂಪನ್ಮೂಲ ದೊಡ್ಡ ಪ್ರಮಾಣದಲ್ಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.ಕೊಲ್ಲಿ ದೇಶಗಳ ಉತ್ತಮ ಆರ್ಥಿಕ ಪ್ರಗತಿಯಿಂದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳಕ್ಕೂ ಅನಿವಾಸಿಗಳಿಂದ ಹರಿದು ಬರುವ ವಿದೇಶಿ ಹಣದ ಪ್ರಮಾಣ ಹೆಚ್ಚಿದೆ. ಮುಂಬರುವ ವರ್ಷಗಳಲ್ಲಿ ಇದು 14,000 ಕೋಟಿ ಡಾಲರ್ (ರೂ7.56 ಲಕ್ಷ ಕೋಟಿ) ದಾಟಬಹುದು ಎಂದು ಅಂದಾಜು ಮಾಡಲಾಗಿದೆ.  ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಅನಿವಾಸಿ ಹಣದ ಹರಿವು 2012ರಲ್ಲಿ ಶೇ 5ರಷ್ಟು ಹೆಚ್ಚಿದ್ದು 40,111 ಕೋಟಿ ಡಾಲರ್‌ಗಳಿಗೆ (ರೂ21.65 ಲಕ್ಷ ಕೋಟಿ) ಏರಿಕೆ ಕಂಡಿದೆ.ನಿಖರ ಲೆಕ್ಕ ಇಲ್ಲ

ಅನಿವಾಸಿ ಭಾರತೀಯರು ಸರಕು ಮತ್ತು ಹಣವನ್ನು ತಮ್ಮ ಪರಿಚಯದ ವ್ಯಕ್ತಿಗಳ ಕೈಯಲ್ಲಿ ಅಥವಾ ಇನ್ನಿತರ ಅನಧಿಕೃತ ಮಾರ್ಗಗಳ ಮೂಲಕ ರವಾನಿಸುತ್ತಾರೆ. ಆದ್ದರಿಂದ  ವಿದೇಶಿ ಹಣ ಹರಿವಿನ ಬಗ್ಗೆ ನಿಖರ ಅಂಕಿ ಅಂಶಗಳಿಲ್ಲ. ಅಸಲಿ ಮೊತ್ತವು ಈಗ ಜಮಾ ಆಗಿರುವ ಮೊತ್ತಕ್ಕಿಂತಲೂ ಹೆಚ್ಚಿರುತ್ತದೆ ಎಂದು ವಿಶ್ವಬ್ಯಾಂಕ್ ಹೇಳಿದೆ.ಅನಿವಾಸಿಗಳಿಂದ ಬರುವ ಹಣ ಬಡತನ ನಿರ್ಮೂಲನೆ, ಜೀವನ ಮಟ್ಟ ಸುಧಾರಣೆಗೆ ಬಳಕೆಯಾಗುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ, ದೇಶವೊಂದು ಶಿಕ್ಷಣ, ಕುಡಿಯುವ ನೀರು, ನೈರ್ಮಲ್ಯ, ಆರೋಗ್ಯ ಕ್ಷೇತ್ರಗಳಲ್ಲಿ ನಿಗದಿಪಡಿಸಿರುವ ಶತಮಾನದ ಗುರಿಯನ್ನು ತಲುಪುವಲ್ಲಿಯೂ ಈ ಮೊತ್ತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿಶ್ವ    ಬ್ಯಾಂಕಿನ ನಿರ್ದೇಶಕ ಹಾನ್ಸ್ ಟಿಮ್ಮರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)