ಎನ್‌ಆರ್‌ಬಿಸಿ ವಿಸ್ತರಣೆ-ನಂದವಾಡಗಿ ಯೋಜನೆ

7

ಎನ್‌ಆರ್‌ಬಿಸಿ ವಿಸ್ತರಣೆ-ನಂದವಾಡಗಿ ಯೋಜನೆ

Published:
Updated:

ರಾಯಚೂರು: ನಾರಾಯಣಪೂರ ಬಲದಂಡೆ ಕಾಲುವೆ ವಿಸ್ತರಣೆ ಕಾಮಗಾರಿ ಶೀಘ್ರ ಆರಂಭಿಸಬೇಕು ಹಾಗೂ ನಂದವಾಡಗಿ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಲು ರಾಜ್ಯ ಸರ್ಕಾರಕ್ಕೆ  ಒತ್ತಾಯದ ಪ್ರಸ್ತಾವನೆ ಸಲ್ಲಿಸಲು ಇಲ್ಲಿ ಶುಕ್ರವಾರ ನಡೆದ ಜಿಪಂ ಸಾಮಾನ್ಯ ಸಭೆಯು ನಿರ್ಣಯ ಕೈಗೊಂಡಿತು.ಅಧ್ಯಕ್ಷೆ ತನ್ವೀರಾ ಬಷಿರುದ್ದೀನ್ ಅಧ್ಯಕ್ಷತೆಯಲ್ಲಿ ನಡೆದ ಜಿಪಂ 5ನೇ ಸಾಮಾನ್ಯ ಸಭೆಯಲ್ಲಿ ಮಧ್ಯಾಹ್ನದ ಬಳಿಕ ನಡೆದ ಈ ವಿಷಯ ಪ್ರಸ್ತಾಪಿಸಿದ್ದು ಸದಸ್ಯ ಎಚ್.ಬಿ.ಮುರಾರಿ ಅವರು. ಎನ್‌ಆರ್‌ಬಿಸಿ ಕಾಲುವೆ ಶೀಘ್ರ ವಿಸ್ತರಣೆ ಮಾಡುವುದರಿಂದ ಹಾಗೂ ನಂದವಾಡಗಿ ಏತ ನೀರಾವರಿ ಯೋಜನೆ ಅನುಷ್ಠಾನ ಆಗುವುದರಿಂದ ಜಿಲ್ಲೆಯ ಲಿಂಗಸುಗೂರು, ಮಾನ್ವಿ ಹಾಗೂ ರಾಯಚೂರು ತಾಲ್ಲೂಕಿನ ಸುಮಾರು 75 ಗ್ರಾಮಗಳಿಗೆ ನೀರಾವರಿ ಸೌಲಭ್ಯ ದೊರಕುತ್ತದೆ.  ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ.  ಹೀಗಾಗಿ ಶೀಘ್ರ ಯೋಜನೆ ಅನುಷ್ಠಾನಕ್ಕೆ ಸರ್ಕಾರಕ್ಕೆ ಸಾಮಾನ್ಯ ಸಭೆ ಮೂಲಕ ಜಿಪಂ ಪ್ರಸ್ತಾವನೆ ಸಲ್ಲಿಸಬೇಕು ಎಂದು ಗಮನ ಸೆಳೆದರು.ಮುರಾರಿ ಅವರ ವಿಷಯ ಪ್ರಸ್ತಾಪಕ್ಕೆ ಸಭೆಯೂ ಒಪ್ಪಿಗೆ ಸೂಚಿಸಿ ಪ್ರಸ್ತಾವನೆ ಸಲ್ಲಿಸುವ ನಿರ್ಧಾರ ಕೈಗೊಂಡಿತು.

ನೀರ್ ಕೊಡ್ರಿ... ಇಲ್ದಿದ್ದರೆ ಫೋನ್ ನಂಬರ್ ಕೊಡ್ರಿ..: ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಎಂಬ ಬೇಡಿಕೆಯನ್ನು ಕಳೆದ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾ ಪಂಚಾಯಿತಿ ದುರಗಮ್ಮ ಗುಂಡಪ್ಪ ನಾಯಕ ಅವರು ಸಭೆಗೆ ತಿಳಿಸಿದರು.ಇನ್ನೆರಡು ದಿನಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದಾಗಿ ಅಧಿಕಾರಿಗಳು ಹೇಳಿದ ಉತ್ತರ ಸದಸ್ಯರಿಗೆ ಸಮಾಧಾನ ತರಲಿಲ್ಲ. ನಿಮ್ಮ ಫೋನ್ ನಂಬರ್‌ರಾದ್ರು ಕೊಡ್ರಿ ಎಂದು ಒತ್ತಾಯಿಸಿದರು.ಕವಿತಾಳ ಗ್ರಾಮದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯದ ಬಾಗಿಲು, ಕಿಟಕಿಗಳು ಹಾಗೂ ಶೌಚಾಲಯದ ಸರಿಯಾಗಿ ವ್ಯವಸ್ಥೆ ಇರುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ಶಾಂತಮ್ಮ ಪಾಟೀಲ್ ಅವರು ಸಭೆಯ ಗಮನಕ್ಕೆ ತಂದರು.ಕುಡಿಯುವ ನೀರಿನ ಪೂರೈಕೆಗೆ ವಿವಿಧ ಯೋಜನೆಯಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಹಾಗೂ ಆರಂಭಗೊಂಡಿರುವ ಕಾಮಗಾರಿಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವಿಶ್ವನಾಥ ಪಾಟೀಲ್ ಅವರು ಒತ್ತಾಯಿಸಿದರು.ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬಸವ, ಆಶ್ರಯ ಸೇರಿದಂತೆ ಅನೇಕ ಯೋಜನೆಗಳಲ್ಲಿ ನಿರ್ಮಾಣ ಮಾಡುವ ಮನೆಗಳನ್ನು ನೈಜ ಫಲಾನುಭವಿಗಳಿಗೆ ಕಲ್ಪಿಸಬೇಕು. ಗ್ರಾಮಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ  ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ  ಸೂಕ್ತ ಆದೇಶ ನೀಡಬೇಕು ಎಂದು ದೇವಸುಗೂರು ಜಿಪಂ ಸದಸ್ಯರಾದ ಡಿ.ಅಚ್ಯುತರೆಡ್ಡಿ, ಕೆ.ಶರಣಪ್ಪ ಕಲ್ಮಲಾ ಸಭೆಗೆ ತಿಳಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮನೋಜ ಜೈನ್,ಯೋಜನಾಧಿಕಾರಿ ಡಾ.ರೋಣಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ, ಅಸ್ಲಂಪಾಷಾ, ಹನುಮೇಶ ಮದ್ಲಾಪುರ, ಶರಣಬಸವ ನಾಯಕ, ಮಹಾದೇವಪ್ಪ, ಶಿವನಗೌಡ ಎಲೆಕೂಡ್ಲಗಿ, ಮಾನ್ವಿ ತಾಪಂ ಅಧ್ಯಕ್ಷ ಪಂಪನಗೌಡ, ಪ್ರಕಾಶ ಪಾಟೀಲ್, ಶಿವಣ್ಣತಾತ, ಸದಸ್ಯೆ ಬಸಮ್ಮ ಕುಂಟೋಜಿ, ಉಮಾದೇವಿ ಹುಲಿರಾಜ್ ಹಾಗೂ ಇತರ ಕೆಲ ಸದಸ್ಯರು ಮಾತನಾಡಿದರು. ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry