ಶನಿವಾರ, ಅಕ್ಟೋಬರ್ 19, 2019
28 °C

ಎನ್‌ಇಕೆಎಸ್‌ಆರ್‌ಟಿಸಿ: ಭ್ರಷ್ಟ ಅಧಿಕಾರಿಗಳಿಂದ ನಷ್ಟ

Published:
Updated:

ಗುಲ್ಬರ್ಗ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಎಸ್‌ಆರ್‌ಟಿಸಿ)ಯು 360 ಕೋಟಿ ರೂಪಾಯಿ ನಷ್ಟ ಅನುಭವಿಸಲು ಹಿರಿಯ ಅಧಿಕಾರಿಗಳ ವ್ಯಾಪಕ ಭ್ರಷ್ಟಾಚಾರವೇ ಕಾರಣ. ಈ ಬಗ್ಗೆ ತನಿಖೆಗಾಗಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಮತ್ತು ಕಾರ್ಮಿಕರ ಒಕ್ಕೂಟದ ಜಂಟಿ ಕಾರ್ಯದರ್ಶಿ ಶೌಕತ ಅಲಿ ಆಲೂರ ಹೇಳಿದರು.ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಗಾವಣೆ, ನೇಮಕಾತಿ, ಟೆಂಡರ್, ಪ್ರಯಾಣ... ಹೀಗೆ ಎಲ್ಲದರಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಹಿರಿಯ ಅಧಿಕಾರಿಗಳು ತಳಮಟ್ಟದ ಕಾರ್ಮಿಕರಿಂದ ಪ್ರತಿ ಕಾರ್ಯಕ್ಕೂ ಲಂಚ ಕೇಳುತ್ತಾರೆ. ಸುಮಾರು ಒಂದು ಸಾವಿರ ಚಾಲಕ, ನಿರ್ವಾಹಕ ಹಾಗೂ ಸಿಬ್ಬಂದಿ ತಿಂಗಳಿಗೆ 2,500 ರೂಪಾಯಿಗಿಂತಲೂ ಕಡಿಮೆ ವೇತನ ಪಡೆಯುತ್ತಿದ್ದಾರೆ. ಇದು ಸರ್ಕಾರ ನಿಗದಿ ಪಡಿಸಿದ ಕನಿಷ್ಠ ವೇತನಕ್ಕಿಂತಲೂ ಕಡಿಮೆ. ಅಲ್ಲದೇ ಈ ಸಿಬ್ಬಂದಿ 3-4 ವರ್ಷ ಸೇವೆ ಪೂರೈಸಿದರೂ ಪ್ರೊಬೆಷನರಿಗೆ ತೆಗೆದುಕೊಳ್ಳುತ್ತಿಲ್ಲ. ಅದಕ್ಕೂ ಹಣದ ಬೇಡಿಕೆ ಇಡುತ್ತಾರೆ ಎಂದು ಅವರು ಆಪಾದಿಸಿದರು.ಮುಖ್ಯ ಸಂಚಾರಿ ವ್ಯವಸ್ಥಾಪಕ (ಸಿಟಿಎಂ) ಸಿ. ನಾಗರಾಜ ಸಂಸ್ಥೆಯ ನಿಯಮಾವಳಿಯನ್ನು ಮುರಿದು ಪ್ರಯಾಣಕ್ಕೆ ಸ್ವಂತ ವಾಹನ ಬಳಸುತ್ತಿದ್ದು, ಕಳೆದ 44 ತಿಂಗಳಿನಿಂದ 7,34,00 ರೂಪಾಯಿ ಪಡೆದಿದ್ದಾರೆ. ಇದು ವಂಚನೆಯಾಗಿದೆ. ಆದರೆ ಕೆಳಹಂತದ ಕಾರ್ಮಿಕರ ಮೇಲೆ ಕರ್ತವ್ಯಲೋಪದ ಮತ್ತಿತರ ಆರೋಪಗಳನ್ನು ಹೇರಿ ಜೇವರ್ಗಿಯಲ್ಲಿ 95,000 ರೂಪಾಯಿ, ಚಿತ್ತಾಪುರಲ್ಲಿ 1,15,000 ದಂಡ ಹಾಕಿದ್ದಾರೆ. ತಮ್ಮ ಲಂಚಗುಳಿತನವನ್ನು ಮುಚ್ಚಿ ಹಾಕಲು ಪ್ರಾಮಾಣಿಕ ಕಾರ್ಮಿಕರ ಮೇಲೆ ದಂಡ ವಿಧಿಸಿ ಆರೋಪ ಹೇರುತ್ತಾರೆ ಎಂದು ಆಲಿ ಆರೋಪಿಸಿದರು.ರಾಯಚೂರು ಜಿಲ್ಲೆಯ ಸಿಂಧನೂರು ತಾತ್ಕಾಲಿಕ ಬಸ್ ನಿಲ್ದಾಣದಲ್ಲಿನ ಚಹಾದಂಗಡಿಯನ್ನು ಅನಂತರಾಮ ಶೆಟ್ಟಿ ಎಂಬವರು ಹರಾಜಿನ ಮೂಲಕ ಬಾಡಿಗೆಗೆ ಪಡೆದಿದ್ದರು. ಆದರೆ 9 ತಿಂಗಳು ಕಳೆದರೂ ಅವರಿಗೆ ಮಳಿಗೆಯನ್ನು ನೀಡಿರುವುದಿಲ್ಲ. ಹೀಗಾಗಿ ಸಂಸ್ಥೆಗೆ 2,31,309 ರೂಪಾಯಿ ನಷ್ಟವಾಗಿದೆ. ಅಧಿಕಾರಿಗಳ ಇಂತಹ ಬೇಜವಾಬ್ದಾರಿ ಕಾರ್ಯಗಳಿಂದ ಸಂಸ್ಥೆ ನಷ್ಟ ಅನುಭವಿಸುತ್ತಿದೆ ಎಂದರು.2010ರಲ್ಲಿ 50 ಜನ ಸಹಾಯಕ ಸಂಚಾರಿ ನಿರೀಕ್ಷಕರನ್ನು ನೇಮಕಾತಿ ಮಾಡಿದ್ದು, ಅವರಲ್ಲಿ 32 ಮಂದಿ ದೈಹಿಕ ಕ್ಷಮತೆ ಹೊಂದಿಲ್ಲ. ಆದರೂ ನೇಮಕಾತಿ ಆಗಿದೆ. ಸಂಸ್ಥೆಯ ಬಸ್‌ನಿಲ್ದಾಣಗಳ ಸುಲಭ ಶೌಚಾಲಯ, ವಾಣಿಜ್ಯ ಮಳಿಗೆ, ಹೋಟೆಲ್ ಸೇರಿದಂತೆ ಮತ್ತಿತರ ಮಳಿಗೆಗಳಿಗೆ ಸಾಕಷ್ಟು ಬೇಡಿಕೆ ಇದ್ದರೂ, ಅಕ್ರಮವಾಗಿ ಕಡಿಮೆ ಬಾಡಿಗೆಗೆ ನೀಡಲಾಗುತ್ತಿದೆ. ಈ ಎಲ್ಲ ಕೃತ್ಯಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಿದ್ದಣ್ಣ ರಾಜವಾರ ಮತ್ತಿತರರು ಇದ್ದರು.

Post Comments (+)