ಬುಧವಾರ, ನವೆಂಬರ್ 20, 2019
20 °C

ಎನ್‌ಎಎಲ್ ಸಂಶೋಧನೆಗೆ ಸಹಕಾರ: ಅಶ್ವನಿ ಕುಮಾರ್

Published:
Updated:

ಬೆಂಗಳೂರು: ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯದ (ಎನ್‌ಎಎಲ್) ಮಹತ್ವಾಕಾಂಕ್ಷೆಯ ರಾಷ್ಟ್ರೀಯ ನಾಗರಿಕ ವಿಮಾನ ಅಭಿವೃದ್ಧಿ ಯೋಜನೆಗೆ ಅಗತ್ಯವಿರುವ 7,555 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರವೇ ನೀಡಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಅಶ್ವನಿ ಕುಮಾರ್ ಹೇಳಿದರು.ಇಲ್ಲಿನ ಎನ್‌ಎಎಲ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, `ಈ ಯೋಜನೆಯಡಿ ವಿಮಾನಗಳ ವಿನ್ಯಾಸ ಮತ್ತು ಅಭಿವೃದ್ಧಿ ಪ್ರಕ್ರಿಯೆಯಲ್ಲಿ 4,355 ಕೋಟಿ ರೂಪಾಯಿ ಖರ್ಚಾಗಲಿದೆ. ಉತ್ಪಾದನಾ ಹಂತದಲ್ಲಿ 3,500 ಕೋಟಿ ರೂಪಾಯಿ ಅಗತ್ಯವಿದೆ. ಈ ಮೊತ್ತವನ್ನು ಕೇಂದ್ರ ಸರ್ಕಾರವೇ ನೀಡಲಿದೆ~ ಎಂದರು. 90 ಆಸನಗಳ ಲಘು ನಾಗರಿಕ ವಿಮಾನಗಳನ್ನು ತಯಾರಿಸಿ ದೇಶದ ಎರಡನೆಯ ಮತ್ತು ಮೂರನೆಯ ಹಂತದ ನಗರಗಳನ್ನು ಮಹಾನಗರಗಳೊಂದಿಗೆ ಸಂಪರ್ಕಿಸುವುದು ಈ ಯೋಜನೆಯ ಉದ್ದೇಶ. ಇಸ್ರೊದ ಮಾಜಿ ಅಧ್ಯಕ್ಷ ಪ್ರೊ.ಜಿ. ಮಾಧವನ್ ನಾಯರ್ ನೇತೃತ್ವದ ಉನ್ನತಾಧಿಕಾರ ಸಮಿತಿ ಈ ಯೋಜನೆಯ ಸಾಧ್ಯತೆಗಳ ಕುರಿತು ಅಧ್ಯಯನ ನಡೆಸಿದೆ.`ಇದು ಮಾತ್ರವಲ್ಲ, ಎನ್‌ಎಎಲ್‌ನ ಎಲ್ಲಾ ಯೋಜನೆಗಳಿಗೆ ಅಗತ್ಯವಿರುವ ಹಣಕಾಸಿನ ಅನುದಾನ ದೊರೆಯುವಂತೆ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ವ್ಯವಸ್ಥೆ ಮಾಡಲಾಗುವುದು. ಸೂಪರ್ ಕಂಪ್ಯೂಟರ್‌ಗಳ ಉತ್ಪಾದನೆ ಕ್ಷೇತ್ರದಲ್ಲೂ ಭಾರತ ಶಕ್ತಿಶಾಲಿಯಾಗಬೇಕು, ಇದಕ್ಕೆ ಅಗತ್ಯವಿರುವ ಐದು ಸಾವಿರ ಕೋಟಿ ರೂಪಾಯಿಗಳನ್ನು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿಗೆ ಒದಗಿಸುವ ಕುರಿತಂತೆ ಯೋಜನಾ ಆಯೋಗದೊಂದಿಗೆ ಮಾತುಕತೆ ನಡೆಸುತ್ತೇನೆ~ ಎಂದು ಹೇಳಿದರು.`ಹಣದ ಕೊರತೆ ಇಲ್ಲ~: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ಸಂಬಂಧಿಸಿದ ಯಾವುದೇ ಯೋಜನೆಗಳೂ ಇನ್ನು ಮುಂದೆ ಹಣಕಾಸಿನ ಕೊರತೆ ಎದುರಿಸದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ ಸಚಿವರು, `ಪ್ರಸ್ತುತ ದೇಶದ ಜಿಡಿಪಿಯ ಶೇಕಡ 0.98ರಷ್ಟು ಹಣವನ್ನು ಮಾತ್ರ ಸಂಶೋಧನೆಯ ಉದ್ದೇಶಕ್ಕಾಗಿ ವಿನಿಯೋಗಿಸಲಾಗುತ್ತಿದೆ. ಇದರ ಪ್ರಮಾಣವನ್ನು ಶೇಕಡ 1.5ರಿಂದ 2ಕ್ಕೆ ಹೆಚ್ಚಿಸುವುದು ನಮ್ಮ ಗುರಿ~ ಎಂದರು.`ನಾವು ಉತ್ಪಾದಿಸುವ ನಾಗರಿಕ ವಿಮಾನಗಳ ತಂತ್ರಜ್ಞಾನ ಮತ್ತು ಮಾರುಕಟ್ಟೆ ಕುರಿತಂತೆ ದೇಶದ ನಾಗರಿಕ ವಿಮಾನಯಾನ ಸೇವಾ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ~ ಎಂದು ಎನ್‌ಎಎಲ್‌ನ ನಿರ್ದೇಶಕ ಡಾ.ಎ.ಆರ್. ಉಪಾಧ್ಯ ಹೇಳಿದರು. ಕೇಂದ್ರ ಯೋಜನಾ ಆಯೋಗದ ಸದಸ್ಯರಾದ ಡಾ.ಕೆ. ಕಸ್ತೂರಿ ರಂಗನ್ ಮತ್ತು ಡಾ. ಸೌಮಿತ್ರ ಚೌಧರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)