ಸೋಮವಾರ, ಏಪ್ರಿಲ್ 19, 2021
25 °C

ಎನ್‌ಎಸ್‌ಎಲ್‌ನಿಂದ ರೈತರಿಗೆ ವಂಚನೆ:ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಆಳಂದದ ನಿಡುವೀರ ಸೀಡ್ಸ್ ಲಿಮಿಟೆಡ್ ಸಕ್ಕರೆ ಕಾರ್ಖಾನೆ ನೆರೆರಾಜ್ಯದಿಂದ ಕಬ್ಬು ತಂದು ಅರೆಯುವ ಮೂಲಕ ಸ್ಥಳೀಯ ರೈತರಿಗೆ ವಂಚಿಸುತ್ತಿದೆ. ತಕ್ಷಣ ಕಂಪೆನಿ ವಿರುದ್ಧ ಕಾನೂನು ಕ್ರಮ ಕೈಗೊಂಡು ಕಂಪೆನಿಗೆ ನೀಡಿರುವ ಗುತ್ತಿಗೆ ರದ್ದುಪಡಿಸಬೇಕು ಎಂದು ಮಾಜಿ ಉಪಸಭಾಪತಿ ಬಿ.ಆರ್.ಪಾಟೀಲ ಆಗ್ರಹಿಸಿದರು.“ಕಂಪೆನಿಗೆ ಮಹಾರಾಷ್ಟ್ರದಿಂದ ಕಬ್ಬು ತರುತ್ತಿದ್ದ 30 ಲಾರಿಗಳನ್ನು ರೈತರೇ ಪತ್ತೆ ಹಚ್ಚಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಕ್ಕರೆ ಆಯುಕ್ತರಿಗೂ ಈ ಬಗ್ಗೆ ದೂರು ನೀಡಿದ್ದರೂ ಕಾನೂನುಬಾಹಿರ ಚಟುವಟಿಕೆ ನಿಯಂತ್ರಿಸುವಲ್ಲಿ ವಿಫಲವಾಗಿರುವುದು ಖಂಡನೀಯ” ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಖಾಸಗಿ ಕಂಪೆನಿಗೆ 30 ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿದ್ದು, ಕಂಪೆನಿ ಹಸ್ತಾಂತರಿಸುವ ಮುನ್ನ ಸರ್ವಸದಸ್ಯರ ಸಭೆಯ ಒಪ್ಪಿಗೆ ಪಡೆದಿಲ್ಲ. ಸಹಕಾರ ಕಾಯ್ದೆ ಪ್ರಕಾರ ಇಡೀ ಹಸ್ತಾಂತರ ಪ್ರಕ್ರಿಯೆ ಕಾನೂನುಬಾಹಿರವಾಗಿದ್ದು, ತಕ್ಷಣ ಇದನ್ನು ಅನೂರ್ಜಿತಗೊಳಿಸಬೇಕು ಎಂದು ಒತ್ತಾಯಿಸಿದರು.“ಕಂಪೆನಿಯ ದುರಾಡಳಿತ ಮತ್ತು ರೈತರಿಗೆ ಆಗುತ್ತಿರುವ ವಂಚನೆ ವಿರುದ್ಧ ನ್ಯಾಯಯುತ ಹೋರಾಟ ಮಾಡಿದ ರೈತರ ಮೇಲೆ ಕಂಪೆನಿ ದಬ್ಬಾಳಿಕೆಗೆ ಮುಂದಾಗಿದೆ. ಸತ್ಯಾಗ್ರಹ ನಿರತ ರೈತರೊಬ್ಬರ ಹೊಲಕ್ಕೆ ಬೆಂಕಿ ಹಚ್ಚಿಸುವಂಥ ನೀಚ ಕೃತ್ಯಕ್ಕೆ ಕಂಪೆನಿ ಇಳಿದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.ಒಂದೆಡೆ ಬೇರೆ ರಾಜ್ಯದಿಂದ ಕಂಪೆನಿ ಕಬ್ಬು ತರುತ್ತಿದ್ದು, ಮತ್ತೊಂದು ಕಡೆ ಆಳಂದ ಮತ್ತು ಗುಲ್ಬರ್ಗ ತಾಲ್ಲೂಕಿನ 12 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬು ಒಣಗುತ್ತಿದೆ. ಬಾವಿ ನೀರು ಬತ್ತುತ್ತಿದ್ದು, ಕಬ್ಬು ಬೆಂಡಾಗುತ್ತಿದೆ.ಒಟ್ಟು 2.6 ಲಕ್ಷ ಟನ್ ಕಬ್ಬು ಒಣಗಿಹೋಗುವ ಅಪಾಯವಿದೆ ಎಂದು ಹೇಳಿದರು.ಕಾರ್ಖಾನೆಯ ಕಬ್ಬು ಅಭಿವೃದ್ಧಿ ವಿಭಾಗದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ತಮಗೆ ಬೇಕಾದ ರೈತರ ಕಬ್ಬನ್ನು ಮಾತ್ರ ಕಟಾವು ಮಾಡಿಸಲಾಗುತ್ತಿದೆ. ಆರು ತಿಂಗಳಲ್ಲೇ ಕಬ್ಬು ಕಟಾವು ಮಾಡಿರುವ ನಿರ್ದಶನವೂ ಇದೆ. ಅಂತೆಯೇ ಒಂದು ವರ್ಷ ಕಳೆದರೂ ಕಬ್ಬು ಕಟಾವು ಮಾಡದೇ ಕಬ್ಬು ಒಣಗಿಹೋಗುತ್ತಿರುವ ಉದಾಹರಣೆಯೂ ಇದೆ. ಇದು ಕಂಪೆನಿಯ ಪಕ್ಷಪಾತ ನೀತಿಗೆ ಉದಾಹರಣೆ. ಕಬ್ಬು ಕಟಾವಿಗೆ ಕೂಲಿಗಳನ್ನು ಕಳುಹಿಸುವಲ್ಲಿ, ಸಾಗಾಣಿಕೆಗೆ ಲಾರಿ ವ್ಯವಸ್ಥೆ ಮಾಡುವಲ್ಲಿಯೂ ಪಕ್ಷಪಾತ ನೀತಿ ಅನುಸರಿಸಲಾಗುತ್ತಿದೆ  ಎಂದು ವಿವರಿಸಿದರು.“ಮಹಾರಾಷ್ಟ್ರದಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬು ಬೆಳೆದಿರುವುದರಿಂದ ಇಂದಿಗೂ ಟ್ರ್ಯಾಕ್ಟರ್‌ಗಳ ಮೂಲಕ ಕಂಪೆನಿಗೆ ಅಲ್ಲಿಂದ ಕಬ್ಬು ಸಾಗಾಣಿಕೆಯಾಗುತ್ತಿದೆ. ಅವ್ಯಾಹತವಾಗಿ ನಡೆಯುತ್ತಿರುವ ವಂಚನೆ ತಡೆಗಟ್ಟಲು ಸರ್ಕಾರ ವಿಫಲವಾಗಿದೆ. ತಕ್ಷಣದಿಂದ ಜಿಲ್ಲೆಯ ಕಬ್ಬು ಅರೆಯಲು ಪ್ರಾರಂಭಿಸಿದರೂ ಮೇ ವರೆಗೆ ಕೇವಲ 1.5 ಲಕ್ಷ ಟನ್ ಕಬ್ಬು ಅರೆಯಲು ಸಾಧ್ಯ. ಉಳಿದ ಕಬ್ಬು ಮಣ್ಣುಪಾಲಾಗುವ ಭೀತಿ ಇದೆ” ಎಂದರು.ಕಬ್ಬು ತೂಕದಲ್ಲಿ, ಮೊಲಾಸಿಸ್ ಮತ್ತು ಇಳುವರಿ ಪ್ರಮಾಣದ ಬಗ್ಗೆಯೂ ಸರ್ಕಾರಕ್ಕೆ ಸುಳ್ಳುಲೆಕ್ಕ ತೋರಿಸಿ ವಂಚಿಸಲಾಗುತ್ತಿದೆ. ಇನ್ನೊಂದೆಡೆ ರೈತರನ್ನು ವಂಚಿಸುತ್ತಿದೆ. ಕಂಪೆನಿಯ ದುರಾಡಳಿತದಿಂದ ಬೇಸತ್ತ ರೈತ ಮುಂದಿನ ದಿನಗಳಲ್ಲಿ ಕಬ್ಬು ಬೆಳೆಯುವುದನ್ನೇ ನಿಲ್ಲಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಕಬ್ಬು ಬೆಳೆಗಾರರು ಇಂಥ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದರೂ ಸರ್ಕಾರ ಇವರ ನೆರವಿಗೆ ಬಂದಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿಯನ್ನೂ ನೀಡುತ್ತಿಲ್ಲ. ಆದ್ದರಿಂದ ನೇರವಾಗಿ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.ಕಾನೂನುಬಾಹಿರವಾಗಿ ಸಕ್ಕರೆ ಕಾರ್ಖಾನೆಯನ್ನು ಖಾಸಗಿ ಕಂಪೆನಿಗೆ ಗುತ್ತಿಗೆ ಮೂಲಕ ಹಸ್ತಾಂತರಿಸಿರುವುದನ್ನು ತಕ್ಷಣ ರದ್ದು ಮಾಡಬೇಕು ಮತ್ತು ಬೇರೆ ಒಳ್ಳೆಯ ಕಂಪೆನಿಗೆ ಹಸ್ತಾಂತರಿಸುವ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಬೇಕು. ಮುಂದಿನ ವರ್ಷವಾದರೂ ಕಬ್ಬು ಬೆಳೆಯುವ ರೈತರು ನಿಶ್ಚಿಂತೆಯಿಂದ ಇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕ ಬಸವರಾಜ ವಾರದ ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.