ಗುರುವಾರ , ಅಕ್ಟೋಬರ್ 17, 2019
26 °C

ಎನ್‌ಎಸ್‌ಎಸ್ ಶಿಬಿರ ಗಾಂಧಿ ಕನಸು

Published:
Updated:

ದೊಡ್ಡಬಳ್ಳಾಪುರ: ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಗಾಂಧೀಜಿ ಕನಸಿನ ಕೂಸು. ಗ್ರಾಮೀಣ ಜನರ ಬದಕನ್ನು ಯುವ ಸಮುದಾಯಕ್ಕೆ ಅರ್ಥಮಾಡಿಸಬೇಕು ಎನ್ನುವ ಉದ್ದೇಶದಿಂದ ಇವತ್ತಿಗೂ ಸಹ ವಿಶೇಷ ಶಿಬಿರಗಳನ್ನು ಗ್ರಾಮಗಳಲ್ಲೇ ವಾಸ್ತವ್ಯ ಮಾಡುವ ಮೂಲಕ ನಡೆಸಲಾಗುತ್ತಿದೆ ಎಂದು ಗಾಂಧಿವಾದಿ ಎಚ್.ಎಸ್. ದೊರೆಸ್ವಾಮಿ ಹೇಳಿದರು.ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಯಲಹಂಕ ಶೇಷಾದ್ರಿಪುರಂ ಪದವಿ ಕಾಲೇಜಿನ ವತಿಯಿಂದ ನಡೆದ ವಿಶೇಷ ರಾಷ್ಟ್ರೀಯ ಯೋಜನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ವಿದ್ಯಾವಂತ ಯುವ ಸಮುದಾಯ ಸರ್ಕಾರಿ ನೌಕರಿಗೆ ಸೇರಿದ ಮೇಲೆ ಗ್ರಾಮೀಣ ಜನರ ಕಷ್ಟಗಳನ್ನು ಅರ್ಥಮಾಡಿಕೊಂಡು ಕೆಲಸ ಮಾಡಬೇಕು. ಆಗ ಮಾತ್ರ ಗಾಂಧೀಜಿ ಕಂಡ ರಾಮರಾಜ್ಯದ ಕನಸು ಸಾಕಾರವಾಗಲು ಸಾಧ್ಯ. ಒಂದು ವಾರಗಳ ಕಾಲ ನಡೆಯುವ ವಿಶೇಷ ಶಿಬಿರಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಬದುಕು ಉತ್ತಮ ಹಾದಿಯಲ್ಲಿ ಸಾಗಲು ಸಹಕಾರಿಯಾಗುವ ಅಂಶಗಳು ದೊರೆಯಲಿದೆ ಎಂದರು.ಇವತ್ತಿನ ರಾಜಕೀಯ ಬೆಳವಣಿಗೆ ಗಮನಿಸಿದರೆ ಆತಂಕವಾಗುತ್ತದೆ. ಕಾನೂನು, ಸಂವಿಧಾನ ಎನ್ನುವುದು ಹಣವಂತರಿಗೆ, ಅಧಿಕಾರಸ್ಥರಿಗೆ ಎನ್ನುವಂತಹ ವಾತಾವರಣ ಉಂಟಾಗಿದೆ.ಇದನ್ನು ದೂರಮಾಡುವ ಕಡೆಗೆ ಯುವ ಸಮುದಾಯ ಮುಂದಾಗಬೇಕು. ಇಲ್ಲವಾದರೆ ರಾಜ್ಯದಲ್ಲಿನ ನೈಸರ್ಗಿಕ ಸಂಪತ್ತು ಮುಂದಿನ ಪೀಳಿಗೆಗೆ ಖಾಲಿಯಾಗಲಿದೆ ಎಂದು ಹೇಳಿದರು.ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಗಾಂಧೀಜಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀನಿವಾಸಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಚ್.ಅಪ್ಪಯ್ಯಣ್ಣ, ಶೇಷಾದ್ರಿಪುರಂ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಪಿ.ಕೃಷ್ಣ, ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಪಿ.ಸುಶೀಲಮ್ಮ, ಎನ್‌ಎಸ್‌ಎಸ್ ಅಧಿಕಾರಿ ಲಕ್ಷ್ಮೀನಾರಾಯಣ್, ಜನಪದ ಗಾಯಕ ಎ.ನಾಗರಾಜ್ ಮತ್ತಿತರರು ಹಾಜರಿದ್ದರು.

Post Comments (+)