ಎನ್‌ಎಸ್‌ಡಿ : ರಂಗಕ್ಕಾಗಿ ಹಗ್ಗಜಗ್ಗಾಟ

7

ಎನ್‌ಎಸ್‌ಡಿ : ರಂಗಕ್ಕಾಗಿ ಹಗ್ಗಜಗ್ಗಾಟ

Published:
Updated:

ಬೆಂಗಳೂರು: ರಾಷ್ಟ್ರೀಯ ನಾಟಕ ಶಾಲೆಯ (ಎನ್‌ಎಸ್‌ಡಿ) ದಕ್ಷಿಣ ಭಾರತದ ಪ್ರಾದೇಶಿಕ ಕೇಂದ್ರ ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭಿಸಲು ಇನ್ನೂ ಎಷ್ಟು ಕಾಲ ಬೇಕಾಗಬಹುದು? ಇದಕ್ಕೆ ಸ್ಪಷ್ಟ ಉತ್ತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಾಗಲಿ, ಎನ್‌ಎಸ್‌ಡಿಯ ಪ್ರಾದೇಶಿಕ ಕೇಂದ್ರದಲ್ಲಾಗಲಿ ತಕ್ಷಣಕ್ಕೆ ಲಭ್ಯವಿಲ್ಲ.ಸ್ಪಷ್ಟ ಉತ್ತರ ಇಲ್ಲದಿರುವುದಕ್ಕೆ ಸಾಕಷ್ಟು ಕಾರಣಗಳೂ ಇವೆ. ಬೆಂಗಳೂರು ವಿಶ್ವವಿದ್ಯಾಲಯದ `ಜ್ಞಾನಭಾರತಿ~ ಸಮೀಪದ ಮಲ್ಲತ್ತಹಳ್ಳಿಯಲ್ಲಿನ ಕಲಾಗ್ರಾಮದ ಬಳಿ ಎನ್‌ಎಸ್‌ಡಿ ಪ್ರಾದೇಶಿಕ ಕೇಂದ್ರಕ್ಕೆ ಮೂರು ಎಕರೆ ಭೂಮಿ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಇದೇ ಜೂನ್ 27ರಂದು ಪ್ರಕಟಿಸಿದ್ದರು. ಆದರೆ, ಉದ್ದೇಶಿತ ಭೂಮಿ ಪ್ರಾದೇಶಿಕ ಕೇಂದ್ರಕ್ಕೆ ಇದುವರೆಗೂ ಹಸ್ತಾಂತರ ಆಗಿಲ್ಲ.ಹಸ್ತಾಂತರ ಕಾರ್ಯ ಏಕೆ ನಡೆದಿಲ್ಲ ಎಂಬ ಪ್ರಶ್ನೆಗೂ ಸಂಸ್ಕೃತಿ ಇಲಾಖೆ ಹಾಗೂ ಪ್ರಾದೇಶಿಕ ಕೇಂದ್ರದ ಪ್ರತಿನಿಧಿಗಳಿಂದ ವಿಭಿನ್ನ ಉತ್ತರಗಳು ದೊರೆಯುತ್ತವೆ. ಮಂಜೂರಾಗಿರುವ ಭೂಮಿಯು ಸಚಿವ ಸಂಪುಟದ ತೀರ್ಮಾನಕ್ಕೆ ಅನುಗುಣವಾಗಿಲ್ಲ ಎಂದು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಸುರೇಶ ಆನಗಳ್ಳಿ ಅವರು ಹೇಳಿದರೆ, `ಭೂಮಿ ಸ್ವೀಕಾರ ಕುರಿತು ಪ್ರಾದೇಶಿಕ ಕೇಂದ್ರದ ನಿರ್ದೇಶಕರು ಸಹಿ ಹಾಕಿದರೆ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ~ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್ ಸ್ಪಷ್ಟಪಡಿಸುತ್ತಾರೆ.ಹಿನ್ನೆಲೆ: ಎನ್‌ಎಸ್‌ಡಿಯ ಕೇಂದ್ರವೊಂದು ದಕ್ಷಿಣ ಭಾರತದಲ್ಲೂ ಆರಂಭವಾಗಬೇಕು. ದಕ್ಷಿಣದ ರಾಜ್ಯಗಳ ವಿದ್ಯಾರ್ಥಿಗಳಿಗೆ ರಂಗ ಚಟುವಟಿಕೆಗಳನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಲು ದಕ್ಷಿಣ ಭಾರತದಲ್ಲೇ ಅವಕಾಶ ದೊರೆಯಬೇಕು ಎಂಬ ಒತ್ತಾಯದಿಂದ ರಂಗಕರ್ಮಿ ಪ್ರಸನ್ನ ಅವರು ನಡೆಸಿದ ಐದು ದಿನಗಳ ಉಪವಾಸಕ್ಕೆ ಮಣಿದ ಕೇಂದ್ರ ಸರ್ಕಾರ 2007ರ ಜನವರಿಯಲ್ಲಿ ಬೆಂಗಳೂರಿಗೆ ಎನ್‌ಎಸ್‌ಡಿ ಘಟಕವೊಂದನ್ನು ಮಂಜೂರು ಮಾಡಿತ್ತು. ಆ ಸಂದರ್ಭದಲ್ಲಿ ಅಂಬಿಕಾ ಸೋನಿ ಕೇಂದ್ರ ಸರ್ಕಾರದಲ್ಲಿ ಸಂಸ್ಕೃತಿ ಸಚಿವರಾಗಿದ್ದರು.ನಂತರ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ಗುರುನಾನಕ್ ಭವನವನ್ನು ಸರ್ಕಾರ ತಾತ್ಕಾಲಿಕ ಬಳಕೆಗೆ ಪ್ರಾದೇಶಿಕ ಕೇಂದ್ರಕ್ಕೆ ನೀಡಿತು. ತನ್ನದೇ ಆದ ಭೂಮಿಯಲ್ಲಿ ತನ್ನ ಅಗತ್ಯಗಳಿಗೆ ತಕ್ಕ ಕಟ್ಟಡಗಳು ನಿರ್ಮಾಣವಾಗುವವರೆಗೆ ಪ್ರಾದೇಶಿಕ ಕೇಂದ್ರ ಗುರುನಾನಕ್ ಭವನದಲ್ಲಿ ಚಟುವಟಿಕೆ ನಡೆಸಲಿ ಎಂಬ ಉದ್ದೇಶದಿಂದ ಇದನ್ನು ನೀಡಲಾಗಿತ್ತು. ಇದು ನಡೆದಿದ್ದು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ. ಅಂದಿನಿಂದ ಇಂದಿನವರೆಗೂ ಗುರುನಾನಕ್ ಭವನದಲ್ಲೇ ಪ್ರಾದೇಶಿಕ ಕೇಂದ್ರದ ಚಟುವಟಿಕೆಗಳು ನಡೆಯುತ್ತಿವೆ. ಪ್ರಾದೇಶಿಕ ಕೇಂದ್ರವನ್ನು ಬೆಂಗಳೂರಿನಲ್ಲಿ ಆರಂಭಿಸಲು ನವದೆಹಲಿಯ ಎನ್‌ಎಸ್‌ಡಿ ಒಪ್ಪಿದ ನಂತರ, 2009ರ ಮಾರ್ಚ್ 17ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಾದೇಶಿಕ ಕೇಂದ್ರಕ್ಕೆ 3 ಎಕರೆ ಭೂಮಿ ನೀಡಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಮಲ್ಲತ್ತಹಳ್ಳಿಯಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರಕ್ಕೆ ಸೇರಿದ 2 ಎಕರೆ ಮತ್ತು ಕಲಾಗ್ರಾಮಕ್ಕೆ ಸೇರಿದ 1 ಎಕರೆ (ಒಟ್ಟು 3 ಎಕರೆ) ಭೂಮಿ ನೀಡಬೇಕು ಎಂಬ ನಿರ್ಣಯ ಇದಾಗಿತ್ತು.ಆದರೆ, 2011ರ ಮೇ ವರೆಗೂ ಭೂಮಿ ಮಂಜೂರು ಮಾಡುವ ಕುರಿತು ಸರ್ಕಾರದಿಂದ ಯಾವುದೇ ನಿರ್ಧಾರ ಹೊರಬರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯೆ, ರಂಗಕರ್ಮಿ ಬಿ. ಜಯಶ್ರೀ ಅವರು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ, `ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ದಕ್ಷಿಣ ಭಾರತದ ಬೇರೆ ರಾಜ್ಯಗಳೂ ಆಸಕ್ತಿ ತೋರಿಸಿವೆ. ರಾಜ್ಯ ಸರ್ಕಾರ ಭೂಮಿ ನೀಡಲು ತಡ ಮಾಡಿದರೆ ಪ್ರಾದೇಶಿಕ ಕೇಂದ್ರ ಬೇರೆ ರಾಜ್ಯದವರ ಪಾಲಾಗಬಹುದು~ ಎಂಬ ಎಚ್ಚರಿಸಿದ್ದರು.ಈ ನಡುವೆ ಮೇ 3ರಂದು ಭೂಮಿಯ ಪರಿಶೀಲನೆ ನಡೆಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ಕಾರ್ಯದರ್ಶಿ (ರಮೇಶ್ ಬಿ. ಝಳಕಿ) ಪ್ರಾದೇಶಿಕ ಕೇಂದ್ರಕ್ಕೆ ಭೂಮಿ ಹಸ್ತಾಂತರಿಸುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆಯ ನಿರ್ದೇಶಕರಾದ (ಈಗ ಆಯುಕ್ತರು) ಮನು ಬಳಿಗಾರ್ ಅವರಿಗೆ ಸೂಚಿಸಿದ್ದರು. ಅವರ ಸೂಚನೆಯ ಮೇರೆಗೆ ಬಳಿಗಾರ್ ಅವರು ಜೂನ್ 16ರಂದು ಪ್ರಸ್ತಾವನೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಭೂಮಿಮಂಜೂರು ಮಾಡುವ ಕುರಿತು ಸರ್ಕಾರ ಜೂನ್ 22ರಂದು ಆದೇಶ ಹೊರಡಿಸಿದೆ. ಆದರೆ ಭೂಮಿ ಹಸ್ತಾಂತರ ಮಾತ್ರ ಇದುವರೆಗೂ ಆಗಿಲ್ಲ.

`ಸಹಿ ಮಾಡುವುದು ಬಾಕಿ~: ಈ ಬಗ್ಗೆ `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ಬಳಿಗಾರ್, `ಪ್ರಾದೇಶಿಕ ಕೇಂದ್ರಕ್ಕೆ ಭೂಮಿ ನೀಡಲು ಸಮಸ್ಯೆ ಇಲ್ಲ. ಭೂಮಿ ನೀಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಭೂಮಿ ಪಡೆದುಕೊಳ್ಳುವ ಮುನ್ನ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರು  ಬಂದು ಭೂಮಿ ಸ್ವೀಕಾರ ಒಪ್ಪಂದಕ್ಕೆ ಸಹಿ ಮಾಡಬೇಕು. ಅದು ಮಾತ್ರ ಬಾಕಿ ಇದೆ~ ಎಂದರು.`ಸಹಿ ಮಾಡಿ, ಭೂಮಿ ಹಸ್ತಾಂತರ ಮಾಡಿಕೊಳ್ಳಿ ಎಂದು ಸೂಚಿಸಿ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ. ಆದರೆ ಅವರಿಂದ ಪ್ರತಿಕ್ರಿಯೆ ಬಂದಿಲ್ಲ~ ಎಂದು ಬಳಿಗಾರ್ ಹೇಳಿದರು.`ಸಂಪುಟ ತೀರ್ಮಾನದಂತೆ ಇಲ್ಲ~: `ಪ್ರಾದೇಶಿಕ ಕೇಂದ್ರಕ್ಕೆ ಸರ್ಕಾರ ಮಂಜೂರು ಮಾಡಿರುವ ಭೂಮಿ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಣಯದಂತೆ ಇಲ್ಲ. 3 ವರ್ಷಗಳ ಹಿಂದೆ ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯದ ಅನ್ವಯ ಪ್ರಾದೇಶಿಕ ಕೇಂದ್ರಕ್ಕೆ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರಕ್ಕೆ ಸೇರಿದ 2 ಎಕರೆ ಮತ್ತು ಕಲಾಗ್ರಾಮಕ್ಕೆ ಸೇರಿದ 1 ಎಕರೆ ನೀಡಬೇಕು. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಮಗೆ ಕೊಡಲು ಮುಂದಾಗಿರುವುದು ತೀರ್ಮಾನಕ್ಕೆ ಅನುಗುಣವಾಗಿ ಇಲ್ಲ~ ಎಂದು ಸುರೇಶ್ ಆನಗಳ್ಳಿ ತಿಳಿಸಿದರು.`ಸಚಿವ ಸಂಪುಟದ ನಿರ್ಣಯದಂತೆ ಭೂಮಿ ನೀಡಬೇಕು ಎಂದು ಕೋರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆಯಲಾಗಿದೆ~ ಎನ್ನುತ್ತಾರೆ.ಬಗೆಹರಿಯದ ವಿಷಯ: ಗುರುನಾನಕ್ ಭವನದಲ್ಲಿ ಈಗ ನಾಟಕಗಳಿಗೆ ಸಂಬಂಧಿಸಿದ ಕೋರ್ಸ್‌ಗಳು ಕಾಲಕಾಲಕ್ಕೆ ನಡೆಯುತ್ತಿವೆ. ನಟನೆ, ನೇಪಥ್ಯ, ರಂಗ ತರಬೇತಿ ಕುರಿತ ಕೋರ್ಸ್‌ಗಳು ನಡೆದಿವೆ. ಕೆಲ ಶಾಲೆಗಳ ಶಿಕ್ಷಕರನ್ನು ಆಯ್ದು `ಪಠ್ಯದಲ್ಲಿ ರಂಗಶಿಕ್ಷಣ~  ತಿರುಗಾಟ ಕಾರ್ಯಕ್ರಮ ನಡೆದಿದೆ. ಇತ್ತೀಚೆಗೆ ರಾಷ್ಟ್ರೀಯ ಮಟ್ಟದ ರಂಗಭೂಮಿ ಕಾರ್ಯಕ್ರಮ ನಡೆದಿದೆ.ಪ್ರಾದೇಶಿಕ ಕೇಂದ್ರ ನವದೆಹಲಿಯ ಕೇಂದ್ರದ ಅಂಗಸಂಸ್ಥೆಯಾಗಿ ಕೆಲಸ ಮಾಡಬೇಕೊ ಅಥವಾ ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಳ್ಳಬೇಕೊ ಎಂಬ ಜಿಜ್ಞಾಸೆ ಇನ್ನೂ ಬಗೆಹರಿದಿಲ್ಲ. ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಇರುವುದು ಎನ್‌ಎಸ್‌ಡಿಯ ಅಧಿಕಾರಿಗಳು ಮತ್ತು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ. `ಎನ್‌ಎಸ್‌ಡಿ ಬಳಿ ಹಣ ಇದೆ, ಅಧಿಕಾರ ಇದೆ. ಆದರೆ ಎನ್‌ಎಸ್‌ಡಿ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ~ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ.ಎನ್‌ಎಸ್‌ಡಿಯ ನವದೆಹಲಿಯ ಅಧಿಕಾರಿಗಳು ಪ್ರಾದೇಶಿಕ ಕೇಂದ್ರಕ್ಕೆ ಅಗತ್ಯವಿರುವ ಸ್ವಂತ ಕಟ್ಟಡಗಳ ಕುರಿತು ಯೋಜನೆಯೊಂದನ್ನು ಸಿದ್ಧಪಡಿಸಿ ಕೇಂದ್ರ ಯೋಜನಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಯೋಜನಾ ಆಯೋಗದಿಂದ ಇದು ಅನುಮೋದನೆ ಪಡೆದುಕೊಳ್ಳಬೇಕಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry