ಗುರುವಾರ , ಮೇ 19, 2022
21 °C

ಎನ್‌ಕೆಪಿ ಸಾಳ್ವೆ ಚಾಲೆಂಜರ್ ಟ್ರೋಫಿ: ಭಾರತ ರೆಡ್‌ಗೆ ಭರ್ಜರಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಪುರ (ಪಿಟಿಐ):  ಭಾರತ ಬ್ಲೂ ತಂಡ ಸವಾಲಿನ ಮೊತ್ತ ಎದುರಿಗಿಟ್ಟರೂ, ಅಭಿನವ್ ಮುಕುಂದ್ ಅವರ ಅಬ್ಬರದ ಬ್ಯಾಟಿಂಗ್‌ನಿಂದ  ಭಾರತ ರೆಡ್‌ಗೆ ಗೆಲುವು ಕಷ್ಟವೆನಿಸಲಿಲ್ಲ.

ಇದರಿಂದ ಎನ್‌ಕೆಪಿ ಸಾಳ್ವೆ ಚಾಲೆಂಜರ್ ಟ್ರೋಫಿ  ಕ್ರಿಕೆಟ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ನೇತೃತ್ವದ  ಭಾರತ ರೆಡ್ ತಂಡಕ್ಕೆ ಮೊದಲ ಪಂದ್ಯದಲ್ಲಿ ಐದು ವಿಕೆಟ್‌ಗಳ ಜಯ ಪಡೆಯಲು ಸಾಧ್ಯವಾಯಿತು.

ಇಲ್ಲಿನ ಜಾಮ್ತಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ  ಭಾರತ ರೆಡ್ ಫೀಲ್ಡಿಂಗ್ ಆಯ್ದುಕೊಂಡಿತು. ಆರಂಭದಲ್ಲಿ ಕಷ್ಟ.. ಕಷ್ಟ.. ಎನಿಸಿದರೂ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ನೆರವಿನಿಂದ ಬ್ಲೂ ತಂಡ 50 ಓವರ್‌ಗಳಲ್ಲಿ 274 ರನ್ ಗಳಿಸಿತು. ಕಳೆದುಕೊಂಡಿದ್ದು ಎಂಟು  ವಿಕೆಟ್. ಇದಕ್ಕುತ್ತರವಾಗಿ ಗಂಭೀರ್ ಪಡೆ 47.3 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

ಮೊದಲೆರೆಡು ಓವರ್‌ಗಳಲ್ಲಿ ತಲಾ ಒಂದೊಂದು ವಿಕೆಟ್ ಕಳೆದುಕೊಂಡ ರೆಡ್ ತಂಡಕ್ಕೆ ಆಪತ್ತು ಎದುರಾಯಿತು. ಆಗ ಬೆಂಬಲಕ್ಕೆ ನಿಂತಿದ್ದು ಅಭಿನವ್ ಮುಕುಂದ್ (127, 133ಎಸೆತ, 10ಬೌಂ). ಮುಕುಂದ್ ಆಟಕ್ಕೆ ಉತ್ತಮ ಸಾಥ್ ನೀಡಿದ ವೃದ್ಧಿಮಾನ್ ಸಹಾ (ಔಟಾಗದೆ 65, 80ಎಸೆತ, 3ಬೌಂ ) ಗಂಭೀರ್ ಪಡೆ ಶುಭ ಮುನ್ನುಡಿ ಬರೆಯಲು ನೆರವಾದರು.

ಇದಕ್ಕು ಮುನ್ನ ಬ್ಯಾಟಿಂಗ್ ಮಾಡಿದ ಇಂಡಿಯಾ ಬ್ಲೂ ತಂಡ ಆರಂಭದಲ್ಲಿ ಸಂಕಷ್ಟದಿಂದ ಅನುಭವಿಸಿತು. ನಂತರ ನಿಧಾನವಾಗಿ ಪುಟಿದೆದ್ದು ಬಂದಿತು. ತಂಡದ  ಮೊತ್ತ ನೂರರ ಗಡಿ ಮುಟ್ಟುವ ಮುನ್ನವೇ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಹಾದಿ ತುಳಿದಿದ್ದರು. ಐದನೇ ವಿಕೆಟ್‌ಗೆ ಹರಿದು ಬಂದ 103 ರನ್‌ಗಳ ಜೊತೆಯಾಟದಿಂದ ಇಂಡಿಯಾ ಬ್ಲೂ ಸವಾಲಿನ ಮೊತ್ತ ಕಲೆ ಹಾಕಿತು. ಬ್ಲೂ ತಂಡ ಸಂಕಷ್ಟಕ್ಕೆ ಒಳಗಾದಾಗ ಎಸ್. ಬದರೀನಾಥ್ (56, 80ಎಸೆತ, 4ಬೌಂ) ಹಾಗೂ ಮನೀಷ್ ಪಾಂಡೆ (45; 48ಎಸೆತ 5ಬೌಂ 1ಸಿಕ್ಸರ್) ನೆರವಾದರು. ಇವರ ಆಟಕ್ಕೆ ಬೆಂಬಲ ನೀಡಿದ್ದು ಮನ್‌ದೀಪ್ ಸಿಂಗ್. 38ಎಸೆತಗಳಲ್ಲಿ 5ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದಂತೆ  50 ರನ್ ಗಳಿಸಿದರು.

ಎಸ್. ಬದರೀನಾಥ್ ಪಡೆ ಕೊನೆಯ 55 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಈ ತಂಡದ ರನ್ ವೇಗಕ್ಕೆ ರೆಡ್ ಬೌಲರ್‌ಗಳು ತಡೆಗೋಡೆಯಾದರು. ಈ ತಂಡಕ್ಕೆ ಪೆಟ್ಟು ನೀಡಿದ್ದು, ರೆಡ್ ತಂಡದ ಭಾರ್ಗವ್ ಭಟ್, ಪಂಕಜ್ ಸಿಂಗ್ ಹಾಗೂ ಪಿಯೂಷ್ ಚಾವ್ಲಾ. 

ಸಂಕ್ಷಿಪ್ತ ಸ್ಕೋರು: ಭಾರತ ಬ್ಲೂ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 274. (ಪಾಲ್ ವಲ್ತಾಟಿ 36, ಮುರಳಿ ವಿಜಯ್ 26, ಎಸ್. ಬದರೀನಾಥ್ 56, ಮನೀಷ್ ಪಾಂಡೆ 45, ಮನ್‌ದೀಪ್ ಸಿಂಗ್ 50; ಭಾರ್ಗವ್ ಭಟ್ 48ಕ್ಕೆ2, ಪಂಕಜ್ ಸಿಂಗ್ 38ಕ್ಕೆ2, ಪಿಯೂಷ್ ಚಾವ್ಲಾ 42ಕ್ಕೆ2); ಭಾರತ ರೆಡ್ 47.3 ಓವರ್‌ಗಳಲ್ಲಿ 5 ವಿಕೆಟ್‌ಗೆ 275. (ಗೌತಮ್ ಗಂಭೀರ್ 11, ಅಭಿನವ್ ಮುಕುಂದ್ 127, ಯುಸೂಫ್ ಪಠಾಣ್ 22, ವೃದ್ಧಿಮಾನ್ ಸಹಾ ಔಟಾಗದೆ 65). ಪಂದ್ಯ ಶ್ರೇಷ್ಠ: ಅಭಿನವ್ ಮುಕುಂದ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.