ಸೋಮವಾರ, ಜೂನ್ 21, 2021
20 °C

ಎನ್‌ಡಿಎದೊಂದಿಗೆ ಬಿಎಸ್‌ಆರ್‌ ಕಾಂಗ್ರೆಸ್‌ ಮೈತ್ರಿ?

ಪ್ರಜಾವಾಣಿ ವಾರ್ತೆ/ ಬಸವರಾಜ ಮರಳಿಹಳ್ಳಿ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಬಿಎಸ್‌ಆರ್‌ ಕಾಂಗ್ರೆಸ್‌ ಮುಖಂಡ ಬಿ.ಶ್ರೀರಾಮುಲು ಅವರನ್ನು ಸೇರಿಸಿಕೊಳ್ಳಲು ಬಿಜೆಪಿಯ ವರಿಷ್ಠರು ಅಸಮ್ಮತಿ ಸೂಚಿಸಿರುವುದರಿಂದ ಎನ್‌ಡಿ­ಎ ಹಾಗೂ ಬಿಎಸ್‌ಆರ್‌ ಕಾಂಗ್ರೆಸ್‌ ಮಧ್ಯೆ ಚುನಾವಣಾ ಮೈತ್ರಿಯ ಮಾತುಗಳು ಕೇಳಲಾರಂಭಿಸಿವೆ.ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ವಿಲೀನಕ್ಕೆ ಬಿಜೆಪಿಯ ಕೇಂದ್ರದ ಕೆಲ ವರಿಷ್ಠರು ವಿರೋಧ ವ್ಯಕ್ತಪಡಿಸಿದ್ದರಿಂದ ಶ್ರೀರಾಮುಲು ಅವರು ಈಗ ಮೈತ್ರಿ ಪ್ರಸ್ತಾವ ಮುಂದಿಟ್ಟಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ಖಚಿತ ಪಡಿಸಿವೆ.ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎದೊಂದಿಗೆ ಸ್ಥಾನ ಹೊಂದಾ­ಣಿಕೆ ಮಾಡಿಕೊಳ್ಳುವ ಮೂಲಕ ಬಳ್ಳಾರಿ ಕ್ಷೇತ್ರವನ್ನು ಪಕ್ಷಕ್ಕೆ ಬಿಟ್ಟುಕೊಡುವಂತೆ ಶ್ರೀರಾಮುಲು ಅವರು ರಾಜ್ಯ ಬಿಜೆಪಿ ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ. ಆದರೆ ರಾಜ್ಯ ಬಿಜೆಪಿಯ ನಾಯಕರು ಈ ಕುರಿತು ಉತ್ಸುಕರಾಗಿದ್ದರೂ ನಿರ್ಧಾರ ತೆಗೆದುಕೊಳ್ಳಬೇಕಾದವರು ಕೇಂದ್ರದ ನಾಯಕರಾಗಿರುವುದರಿಂದ ಚೆಂಡು ಕೇಂದ್ರದ ವರಿಷ್ಠರ ಅಂಗಳದಲ್ಲಿ ಇದೆ ಎಂದು ಮೂಲಗಳು ತಿಳಿಸಿವೆ.ಇತ್ತೀಚಿಗೆ ಬಳ್ಳಾರಿಯಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿ ಬಿಜೆಪಿಯಲ್ಲಿ ತಮ್ಮ ಪಕ್ಷವನ್ನು ವಿಲೀನಗೊಳಿಸುವು­ದಾಗಿ ಶ್ರೀರಾಮುಲು ಘೋಷಿಸಿದ್ದರು. ಹಾಗೆಯೆ ಶ್ರೀರಾಮುಲು ಅವರು ಪಕ್ಷಕ್ಕೆ ಮರಳಿದರೆ ಜಿಲ್ಲೆಯಲ್ಲಿ ಪಕ್ಷವನ್ನು ಮೊದಲಿನ ಹಾಗೆ ಬಲಗೊಳಿಸಲು ಸಾಧ್ಯವಿದೆ ಎಂಬುದು ಬಳ್ಳಾರಿ ಹಾಗೂ ರಾಜ್ಯ ಬಿಜೆಪಿಯ ನಾಯಕರ ಲೆಕ್ಕಾಚಾರವಾಗಿತ್ತು. ಆದರೆ ನಾಯಕರ ಈ ಲೆಕ್ಕಾಚಾರ ತಲೆ ಕೆಳಗಾಗಿದ್ದು, ಎರಡು ಪಕ್ಷಗಳ ಮಧ್ಯೆ ಚುನಾವಣಾ ಮೈತ್ರಿ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ.   ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಸೆಣಸಾಡಲು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಅಥವಾ ಎನ್‌ಡಿಎದೊಂದಿಗೆ ಮೈತ್ರಿ ಅನಿವಾರ್ಯ ಎಂಬ ಸ್ಥಿತಿಯಲ್ಲಿ ಶ್ರೀರಾಮುಲು ಅವರು ಇದ್ದಾರೆ. ಇತ್ತ ಬಿಜೆಪಿಗೂ ಆಡಳಿತಾರೂಢ ಕಾಂಗ್ರೆಸ್‌ ವಿರುದ್ಧ ಹೋರಾಡಲು ಪ್ರಬಲ ಅಭ್ಯರ್ಥಿಯ ಕೊರತೆ ಇದೆ. ಹಾಗೆಯೆ ನಾಯಕ ಸಮುದಾಯದ ಪ್ರಬಲ ನಾಯಕರಾಗಿರುವ ಶ್ರೀರಾಮುಲು ಅವರು ಬಿಜೆಪಿಯಿಂದ ಕಣಕ್ಕಿಳಿಯದೆ ಇದ್ದರೂ ಎರಡು ಪಕ್ಷಗಳ ಮಧ್ಯೆ ಮೈತ್ರಿ ಏರ್ಪಟ್ಟರೆ ಶ್ರೀರಾಮುಲು ಅವರನ್ನು ಬೆಂಬಲಿಸಲು ಬಿಜೆಪಿಯ ಬಳ್ಳಾರಿ ಜಿಲ್ಲಾ ಘಟಕವೂ ಮಾನಸಿಕವಾಗಿ ಸಿದ್ಧವಾಗಿದೆ. ಗೊಂದಲದಲ್ಲಿ ಕಾರ್ಯಕರ್ತರು: ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದಿಂದ ಎನ್‌.ವೈ.ಹನುಮಂತಪ್ಪ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಪ್ರಚಾರವೂ ಆರಂಭವಾಗಿದೆ. ಆದರೆ, ಬಿಜೆಪಿ ಸೇರಿದಂತೆ ಬೇರಾವ ಪಕ್ಷಗಳ ಅಭ್ಯರ್ಥಿಗಳು ಅಂತಿಮವಾಗಿಲ್ಲ.  ಚುನಾವಣೆ ಸಮೀಪಿಸುತ್ತಿದ್ದರೂ ಶ್ರೀರಾಮುಲು ಅವರ ಬಿಜೆಪಿ ಸೇರ್ಪಡೆ ಅಥವಾ ಎರಡು ಪಕ್ಷಗಳ ನಡುವಿನ ಮೈತ್ರಿಯೂ ಖಚಿತವಾಗಿಲ್ಲ. ಈ ಕಾರಣದಿಂದ ಚುನಾವಣೆಯಲ್ಲಿ ಯಾರ ಪರ ಪ್ರಚಾರ ಮಾಡುವುದು ಎಂಬ ತೊಳಲಾಟದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಮುಳಗಿದ್ದಾರೆ.ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನೇಮಿರಾಜ್‌ ನಾಯ್ಕ ಅವರು, ‘ಬಿ. ಶ್ರೀರಾಮುಲು ಅವರು ಪಕ್ಷಕ್ಕೆ ಮರಳಬೇಕು ಎಂಬುದು ಪಕ್ಷದ ಕಾರ್ಯಕರ್ತರ ಬಯಕೆ. ಒಂದು ವೇಳೆ ಅದು ಸಾಧ್ಯವಾಗದೆ ಮೈತ್ರಿ ಏರ್ಪಟ್ಟರೂ ಕೇಂದ್ರದ ವರಿಷ್ಠರು ಸೂಚನೆಯಂತೆ ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.