ಗುರುವಾರ , ಏಪ್ರಿಲ್ 22, 2021
27 °C

ಎನ್‌ಪಿಎ ರೂ 1.47 ಲಕ್ಷ ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ದೇಶದ ಬ್ಯಾಂಕಿಂಗ್ ವಲಯದಲ್ಲಿ ಈಗ `ಎನ್‌ಪಿಎ~ ಬಿರುಗಾಳಿ. ಬ್ಯಾಂಕ್‌ಗಳ ವಿತರಿಸಿದ ದೊಡ್ಡ ಮೊತ್ತದ ಸಾಲ ವಸೂಲಿ ಆಗದೇ ಇರುವ ಪ್ರಮಾಣ ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಲೇ ಇದೆ.ದೇಶದ ಬ್ಯಾಂಕ್‌ಗಳು ಸಾಲ ವಿತರಣೆಯಲ್ಲಿ ಮುಂದಿದ್ದರೂ, ಸಾಲ ವಸೂಲಿಯಲ್ಲಿ ಬಹಳ ಹಿಂದೆ ಬಿದ್ದಿರುವುದು ವರ್ಷದ ಪ್ರಥಮಾರ್ಧದಲ್ಲಿ ಸ್ಪಷ್ಟಗೋಚರ. ವಸೂಲಾಗದ ಸಾಲ ಪ್ರಮಾಣ (ಎನ್‌ಪಿಎ) ಪ್ರಸಕ್ತ ಹಣಕಾಸು ವರ್ಷದ ಆರಂಭದಲ್ಲಿ ಇದ್ದುದಕ್ಕಿಂತ ಸೆಪ್ಟೆಂಬರ್ 30ರ ವೇಳೆಗೆ ಶೇ 85ರಷ್ಟು ಹೆಚ್ಚಿದೆ. ಈ ಆರು ತಿಂಗಳಲ್ಲಿಯೇ ರೂ. 40000 ಕೋಟಿಯಷ್ಟು ಸಾಲ ಬ್ಯಾಂಕ್‌ಗಳಿಗೆ ಬಾಕಿ ಆಗಿದೆ.ಮರುಹೊಂದಾಣಿಕೆ ಕಸರತ್ತು: ನಿಗದಿತ ಅವಧಿಯೊಳಗೆ ವಸೂಲಿ ಆಗದೇ ಇರುವ ಸಾಲಗಳನ್ನು ಮರು ಹೊಂದಾಣಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದು, ಈ ಬಗ್ಗೆ ಬ್ಯಾಂಕ್‌ಗಳು ಚಿಂತನೆ ನಡೆಸಿವೆ. ಇದರಲ್ಲಿ ದೊಡ್ಡ ಕಂಪೆನಿಗಳ ಬಾಕಿಯೇ ಹೆಚ್ಚಿನ ಪ್ರಮಾಣದ್ದಾಗಿದ್ದು, ಕಾರ್ಪೊರೇಟ್ ಡೆಬ್ಟ್ ರಿಸ್ಟ್ರಕ್ಚರಿಂಗ್(ಸಿಡಿಆರ್) ಪ್ರಕರಣಗಳು ಈ ವರ್ಷ ಹಿಂದೆಂದೂ ಇಲ್ಲದಷ್ಟು ಅತ್ಯಧಿಕ ಪ್ರಮಾಣದಲ್ಲಿವೆ.ಪ್ರಸಕ್ತ ಹಣಕಾಸು ವರ್ಷದಲ್ಲಿ ಸೆ. 30ರವರೆಗೆ ಒಟ್ಟು 101 `ಸಿಡಿಆರ್~ ಪ್ರಕರಣಗಳಿಗೆ ಶಿಫಾರಸು ಮಾಡಲಾಗಿದೆ. ಇವುಗಳಲ್ಲಿ ಬಾಕಿಯಾಗಿರುವ ಸಾಲ ಮೊತ್ತ ರೂ. 64000 ಕೋಟಿಯಷ್ಟಿದೆ.  ಇದೇ ವೇಳೆ 35 ಬ್ಯಾಂಕ್‌ಗಳು ಪ್ರತಿ ತಿಂಗಳೂ `ಎನ್‌ಪಿಎ~ ಹೆಚ್ಚುತ್ತಲೇ ಇರುವುದಕ್ಕೆ ಕಳವಳ ವ್ಯಕ್ತಪಡಿಸಿವೆ.

ಪ್ರಸಕ್ತ ಹಣಕಾಸು ವರ್ಷದ ಪ್ರಥಮಾರ್ಧದಲ್ಲಿ ಈ ಬ್ಯಾಂಕ್‌ಗಳ ರೂ. 32000 ಕೋಟಿ ಸಾಲ ವಸೂಲಿ ಆಗಿಲ್ಲ. ಪರಿಣಾಮ ಎನ್‌ಪಿಎ ಮೊತ್ತ 1.47 ಲಕ್ಷ ಕೋಟಿಗೆ ಹೆಚ್ಚಿದೆ. ಸೌತ್ ಇಂಡಿಯನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಲಕ್ಷ್ಮಿ ವಿಲಾಸ್ ಬ್ಯಾಂಕ್ ಎನ್‌ಪಿಎ ಗರಿಷ್ಠ ಮಟ್ಟದಲ್ಲಿದೆ.ಪ್ರಮುಖ ಬ್ಯಾಂಕ್‌ಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ಒಟ್ಟಾರೆ ಎನ್‌ಪಿಎ ಅನುಪಾತ ಶೇ 4.44ರಲ್ಲಿದ್ದುದು ಈ ವರ್ಷದ ಪ್ರಥಮಾರ್ಧದಲ್ಲಿ ಶೇ 5.15ಕ್ಕೆ ಏರಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಎನ್‌ಪಿಎ ಅನುಪಾತ ಶೇ 2.93ರಿಂದ ಶೇ 4.66ಕ್ಕೆ ಹೆಚ್ಚಿದೆ.ಇದ್ದುದರಲ್ಲಿ ಉತ್ತಮ ಎನ್ನುವಂತೆ ಬ್ಯಾಂಕ್ ಆಫ್ ಮಹಾರಾಷ್ಟ್ರ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಸಿಂಡಿಕೇಟ್ ಬ್ಯಾಂಕ್ ಮತ್ತು ಡೆವಲಪ್‌ಮೆಂಟ್ ಕ್ರೆಡಿಟ್ ಬ್ಯಾಂಕ್‌ನ ಎನ್‌ಪಿಎ ಹಿಂದಿನ ವರ್ಷಕ್ಕಿಂತ ಕೊಂಚ (ಶೇ 1.7ರಷ್ಟು) ತಗ್ಗಿದೆ. ಹಾಗಿದ್ದೂ ಈ ಬ್ಯಾಂಕ್‌ಗಳ ಎನ್‌ಪಿಎ ರೂ. 8163 ಕೋಟಿಯಷ್ಟಿದೆ.ಒಟ್ಟಾರೆ ಎನ್‌ಪಿಎ ಅನುಪಾತ ಎಚ್‌ಡಿಎಫ್‌ಸಿ ಬ್ಯಾಂಕ್‌ನದು ಶೇ 1.02ರಿಂದ ಶೇ 0.91ಕ್ಕೂ, ಐಸಿಐಸಿಐ ಬ್ಯಾಂಕ್‌ನದು ಶೇ 3.62ರಿಂದ 3.54ಕ್ಕೂ ಇಳಿಕೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.