ಎನ್‌ಸಿಟಿಸಿ: ಮುಖ್ಯಮಂತ್ರಿಗಳಿಗೆ ಪ್ರಧಾನಿ ಪತ್ರ

7

ಎನ್‌ಸಿಟಿಸಿ: ಮುಖ್ಯಮಂತ್ರಿಗಳಿಗೆ ಪ್ರಧಾನಿ ಪತ್ರ

Published:
Updated:

ನವದೆಹಲಿ (ಪಿಟಿಐ): ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್‌ಸಿಟಿಸಿ) ಸ್ಥಾಪಿಸುವ ಕೇಂದ್ರದ ಪ್ರಸ್ತಾವವನ್ನು ತಡೆ ಹಿಡಿಯಬೇಕೆಂದು ವಿರೋಧ ಪಕ್ಷಗಳ ಒತ್ತಡ ಹೆಚ್ಚಿದ ಬೆನ್ನಲ್ಲೇ, ಪ್ರಧಾನಿ ಮನಮೋಹನ್ ಸಿಂಗ್ ಮಂಗಳವಾರ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಇದರಿಂದ ರಾಜ್ಯಗಳ ಅಧಿಕಾರಕ್ಕೆ ಧಕ್ಕೆಯಾಗುವುದಿಲ್ಲ ಎಂದಿದ್ದಾರೆ.

ಗೃಹ ಸಚಿವ ಪಿ.ಚಿದಂಬರಂ ಅವರ  ಪರಿಕಲ್ಪನೆಯಾದ ಎನ್‌ಸಿಟಿಸಿ ಸ್ಥಾಪನೆಗೆ ಮಂಗಳವಾರ ನಡೆದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದ ನಂತರ ಪ್ರಧಾನಿ ಏಳು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದರು. ಅಲ್ಲದೇ, ಚಿದಂಬರಂ ಅವರಿಗೆ ಈ ಸಂಬಂಧ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸುವಂತೆಯೂ ಸೂಚಿಸಿದ್ದಾರೆ.

ಸ್ಥಾಯಿ ಸಮಿತಿ ಸಭೆಯಲ್ಲಿ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್ ಅವರ ಮುಂದೆ ಪ್ರತಿಪಕ್ಷಗಳು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿ, ಎನ್‌ಸಿಟಿಸಿ ಪ್ರಸ್ತಾವವನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿದವು.

ಕಾಂಗ್ರೆಸ್ ಮಿತ್ರ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ಕೂಡ ಎನ್‌ಸಿಟಿಸಿ ಸ್ಥಾಪನೆ ಕುರಿತು ಸಭೆಯಲ್ಲಿ ಅಸಮ್ಮತಿಯನ್ನು ವ್ಯಕ್ತಪಡಿಸಿತು.   ಭಯೋತ್ಪಾದನಾ ನಿಗ್ರಹಕ್ಕೆ ಸಂಬಂಧಿಸಿದಂತೆ ರಾಷ್ಟ್ರದ ವಿವಿಧ ರಾಜ್ಯಗಳ ನಡುವೆ ಸಮನ್ವಯತೆ ಮೂಡಿಸುವ ಉದ್ದೇಶವನ್ನು ಎನ್‌ಸಿಟಿಸಿ ಹೊಂದಿದೆ. ಇದು ಈಗಿನ ಬೇಹುಗಾರಿಕಾ ದಳದ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸಂವಿಧಾನದ ಮೂಲ ಆಶಯಗಳನ್ನು ಇದು ಹಾಳುಗೆಡಹುವುದಿಲ್ಲ ಎಂದು ಮನಮೋಹನ್ ಸಿಂಗ್ ಪತ್ರದಲ್ಲಿ ವಿವರಿಸಿದ್ದಾರೆ.

ತ್ರಿಪುರ, ತಮಿಳುನಾಡು, ಒಡಿಶಾ, ಗುಜರಾತ್, ಪಶ್ಚಿಮ ಬಂಗಾಳ, ಬಿಹಾರ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿಗಳಿಗೆ ಪ್ರಧಾನಿ ಪತ್ರ ಬರೆದಿದ್ದಾರೆ.

ಮನಮೋಹನ್ ಸಿಂಗ್ ಮತ್ತು ಮಮತಾ ಬ್ಯಾನರ್ಜಿ ಬುಧವಾರ ಇಲ್ಲಿ ಭೇಟಿಯಾಗುತ್ತಿದ್ದು ಆ ವೇಳೆ ಎನ್‌ಸಿಟಿಸಿ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆ ಇದೆ. ಹೀಗಾಗಿ ಗೃಹ ಸಚಿವಾಲಯವು ಪ್ರಧಾನಿಯವರಿಗೆ ಹಲವು ಅಂಶಗಳ ಕುರಿತು ಮನವರಿಕೆ ಮಾಡಿಕೊಟ್ಟಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry