ಎನ್‌ಸಿಟಿಸಿ ವಿರೋಧಿ ದನಿಗೆ ಉತ್ತರಾಖಂಡ ಸೇರ್ಪಡೆ

7

ಎನ್‌ಸಿಟಿಸಿ ವಿರೋಧಿ ದನಿಗೆ ಉತ್ತರಾಖಂಡ ಸೇರ್ಪಡೆ

Published:
Updated:

ಡೆಹ್ರಾಡೂನ್ (ಪಿಟಿಐ): ಕೇಂದ್ರ ಸರ್ಕಾರವು ಮಾರ್ಚಿ 1ರಿಂದ ಆರಂಭಿಸಲು ಉದ್ದೇಶಿಸಿರುವ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (ಎನ್‌ಸಿಟಿಸಿ) ಪ್ರಸ್ತಾವವನ್ನು ವಿರೋಧಿಸುತ್ತಿರುವ ರಾಜ್ಯಗಳ ಪಟ್ಟಿಗೆ ಭಾನುವಾರ ಉತ್ತರಾಖಂಡವೂ ಸೇರಿಕೊಂಡಿದೆ.

ಇದರೊಂದಿಗೆ ಕೇಂದ್ರದ ಉದ್ದೇಶವನ್ನು ವಿರೋಧಿಸುತ್ತಿರುವ ರಾಜ್ಯಗಳ ಸಂಖ್ಯೆ ಈಗ 12ಕ್ಕೆ ಏರಿದೆ.

ಎನ್‌ಸಿಟಿಸಿಯೇ ಇರಬಹುದು ಅಥವಾ ಮತ್ತೊಂದು ವಿಷಯವಿರುಬಹುದು; ಕೆಲವು ನಿರ್ಧಾರಗಳನ್ನು ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಬಿ.ಸಿ.ಖಂಡೂರಿ ಆಕ್ಷೇಪಿಸಿದ್ದಾರೆ.

ಎನ್‌ಸಿಟಿಸಿಯಂತಹ ಪ್ರಮುಖ ಸಂಗತಿಯ ಬಗ್ಗೆ ಕೇಂದ್ರವು ರಾಜ್ಯಗಳೊಂದಿಗೆ ವಿಚಾರ ವಿನಿಮಯ ಮಾಡದೇ ಇದ್ದುದು ವಿಷಾದಕರ ಎಂದಿದ್ದಾರೆ.

ಅಗರ್ತಲ/ ಅಹಮದಾಬಾದ್ ವರದಿ:  ಎನ್‌ಸಿಟಿಸಿ ಸಂಬಂಧ ಪ್ರಧಾನಿ ಅವರಿಗೆ ಶನಿವಾರ ಪತ್ರ ಬರೆದಿದ್ದ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್, ಎನ್‌ಸಿಟಿಸಿ ಸ್ಥಾಪನೆ ಕುರಿತ ಗೃಹ ಸಚಿವಾಲಯದ ಆದೇಶವನ್ನು ವಾಪಸು ಪಡೆಯುವ ಜತೆಗೆ, ಈ ಬಗ್ಗೆ ಹೆಚ್ಚಿನ ಸಮಾಲೋಚನೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಮತ್ತೊಂದೆಡೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೂಡ ಕೇಂದ್ರದ ವಿರುದ್ಧ ಪ್ರಹಾರ ಮಾಡಿ, ಭದ್ರತೆ ಕಾಪಾಡುವುದು ಕೇಂದ್ರ ಹಾಗೂ ರಾಜ್ಯಗಳ ಜಂಟಿ ಹೊಣೆಗಾರಿಕೆ ಎಂದು  ಕೇಂದ್ರ ಸರ್ಕಾರ ಬಾಯಿಮಾತಿನ ತತ್ವ ಹೇಳುತ್ತಿದೆ. ಎನ್‌ಸಿಟಿಸಿ ಸ್ಥಾಪನೆಗೆ ಆದೇಶಿಸುವ ಮುನ್ನ ರಾಜ್ಯಗಳನ್ನು ಅದು ಲೆಕ್ಕಕ್ಕೇ ತೆಗೆದುಕೊಂಡಿಲ್ಲ ಎಂದಿದ್ದಾರೆ.

ಭದ್ರತೆ ಕಾಪಾಡುವುದು ಕೇಂದ್ರ ಮತ್ತು ರಾಜ್ಯಗಳ ಜಂಟಿ ಹೊಣೆಗಾರಿಕೆ ಎಂದಿರುವ ಕೇಂದ್ರ ಸಚಿವ ಪಿ.ಚಿದಂಬರಂ ಹೇಳಿಕೆಗೆ ಮೋದಿ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ, ಒರಿಸ್ಸಾ, ಪಶ್ಚಿಮ ಬಂಗಾಳ, ತಮಿಳುನಾಡು, ಪಂಜಾಬ್, ಬಿಹಾರ, ಛತ್ತೀಸ್‌ಗಡ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶಗಳು ಎನ್‌ಸಿಟಿಸಿ ಸ್ಥಾಪನೆಗೆ ಈಗಾಗಲೇ ತಮ್ಮ ವಿರೋಧ ದಾಖಲಿಸಿದೆ.

ಕೇಂದ್ರ ಸಮರ್ಥನೆ: ಭಯೋತ್ಪಾದನಾ ವಿರುದ್ಧದ ಸಮರದಲ್ಲಿ ಸಹಭಾಗಿತ್ವ ಇರಬೇಕು. ಎನ್‌ಸಿಟಿಸಿ ಸ್ಥಾಪನೆ ವಿಷಯವನ್ನು ರಾಜಕೀಯ  ವಿಷಯ ಮಾಡಬಾರದು ಎಂದು ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವೆ ಅಂಬಿಕಾ ಸೋನಿ ಸಮರ್ಥಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry