ಎನ್‌ಸಿಟಿಸಿ ಸ್ಥಾಪನೆಗೆ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳ ವಿರೋಧ

7

ಎನ್‌ಸಿಟಿಸಿ ಸ್ಥಾಪನೆಗೆ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳ ವಿರೋಧ

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್): ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್‌ಸಿಟಿಸಿ) ಸ್ಥಾಪಿಸುವ ಪ್ರಸ್ತಾವದ ವಿರುದ್ಧ ತೃಣಮೂಲ ಕಾಂಗ್ರೆಸ್ ಸೇರಿದಂತೆ ಕಾಂಗ್ರೆಸ್ಸೇತರ ಏಳು ಮುಖ್ಯಮಂತ್ರಿಗಳು ಬಂಡಾಯದ ಬಾವುಟ ಹಾರಿಸುವ ಮೂಲಕ ಯುಪಿಎ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.ಉದ್ದೇಶಿತ ಕಾಯ್ದೆಯು ರಾಜ್ಯಗಳ ಅಧಿಕಾರವನ್ನು ಅತಿಕ್ರಮಿಸುತ್ತದೆ ಮತ್ತು ಒಕ್ಕೂಟ ವ್ಯವಸ್ಥೆಯ ಬೇರುಗಳನ್ನು ಅಲ್ಲಾಡಿಸುತ್ತದೆ. ಅಲ್ಲದೇ ತಮ್ಮನ್ನು ಸಂಪರ್ಕಿಸದೆಯೇ ಈ ಸಂಬಂಧ ಕೇಂದ್ರವು ಅಧಿಸೂಚನೆ ಹೊರಡಿಸಿದೆ ಎಂದು 6 ಮುಖ್ಯಮಂತ್ರಿಗಳು ಪ್ರಧಾನಿಗೆ ಪ್ರತ್ಯೇವಾಗಿ ಬರೆದ ಪತ್ರಗಳಲ್ಲಿ ಆರೋಪಿಸಿದ್ದಾರೆ.

ಆದರೆ ಇದನ್ನು ಅಲ್ಲಗಳೆದಿರುವ ಕೇಂದ್ರವು, ಇಂಥ ಒತ್ತಡಕ್ಕೆಲ್ಲ ಬೆದರುವುದಿಲ್ಲ ಎಂಬ ಅರ್ಥದಲ್ಲಿ ಪ್ರತಿಕ್ರಿಯೆ ನೀಡಿದೆ.ಎನ್‌ಸಿಟಿಸಿಗೆ ಮೊದಲು ಆಕ್ಷೇಪ ಎತ್ತಿದವರು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್. ಪಶ್ಚಿಮ ಬಂಗಾಳ, ಗುಜರಾತ್, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ, ಬಿಹಾರ ಹಾಗೂ ತಮಿಳುನಾಡು ಮುಖ್ಯಮಂತ್ರಿಗಳು ಮತ್ತು ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರಿಗೂ ಪತ್ರ ಬರೆದು ಪಟ್ನಾಯಕ್ ಈ ವಿಷಯವನ್ನು ಗಮನಕ್ಕೆ ತಂದರು.

ವಿರೋಧ ಯಾಕೆ?
ಗೃಹ ಸಚಿವ ಪಿ.ಚಿದಂಬರಂ ಅವರ ಕನಸಿನ ಯೋಜನೆಯಾದ   ಎನ್‌ಸಿಟಿಸಿ, ಮಾರ್ಚ್ 1ರಿಂದ ಕಾರ್ಯಾರಂಭ ಮಾಡಲಿದ್ದು, ದೇಶದಲ್ಲಿ ಭಯೋತ್ಪಾದಕ ಬೆದರಿಕೆ ಕುರಿತ ಮಾಹಿತಿಗಳನ್ನು ಸಂಗ್ರಹಿಸಿ ವಿಶ್ಲೇಷಿಸುವ ಕೆಲಸ ಮಾಡುತ್ತದೆ. ಉದ್ದೇಶಿತ ಕಾಯ್ದೆ ಅಡಿಯಲ್ಲಿ ಕೇಂದ್ರ ಸರ್ಕಾರದ ಸಂಸ್ಥೆಗಳು ಉಗ್ರರ ದಾಳಿಗೆ ತುತ್ತಾದ ರಾಜ್ಯಗಳಲ್ಲಿ ಆರೋಪಿಗಳನ್ನು ಬಂಧಿಸುವ ಅಥವಾ ಶೋಧಿಸುವ ಅಧಿಕಾರ ಹೊಂದಿರುತ್ತವೆ. ಇದಕ್ಕೆ ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಅನುಮತಿ ಪಡೆಯಬೇಕಾಗಿಲ್ಲ.ಇದಕ್ಕೆ ಮೊದಲು ಪ್ರತಿಕ್ರಿಯೆ ನೀಡಿದವರು ಯುಪಿಎ ಮಿತ್ರ ಪಕ್ಷ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ. `ಇಂಥ ನಿರಂಕುಶ ಅಧಿಕಾರವನ್ನು ಒಪ್ಪಿಕೊಳ್ಳುವುದು ರಾಜ್ಯ ಸರ್ಕಾರಗಳಿಗೆ ಕಷ್ಟವಾಗುತ್ತದೆ. ಆದ ಕಾರಣ ಉದ್ದೇಶಿತ ಕಾಯ್ದೆಯನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು~ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಅವರು ಆಗ್ರಹಿಸಿದ್ದಾರೆ. ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಕೂಡ ಎನ್‌ಸಿಟಿಸಿ ವಿರುದ್ಧವಾಗಿ ಮಾತನಾಡಿದ್ದಾರೆ.ಜೇಟ್ಲಿ ಎಚ್ಚರಿಕೆ: ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನ ಮಾಡಿದರೆ ಕೇಂದ್ರ ಸರ್ಕಾರ ಹಳಿ ತಪ್ಪಬಹುದು ಎಂದು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಎದಿರೇಟು
2002ರಲ್ಲಿ ಎನ್‌ಡಿಎ ಸರ್ಕಾರವು, ವಿವಾದಿತ ಪೊಟಾ ಕಾಯ್ದೆ ಅನುಮೋದನೆ ಮಾಡಿದ್ದನ್ನು ಪ್ರಸ್ತಾಪಿಸುವ ಮೂಲಕ ಕೇಂದ್ರವು ಎನ್‌ಸಿಟಿಸಿ ವಿಷಯದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಗೆ ಎದಿರೇಟು ನೀಡಿದೆ.    `ಪೊಟಾ ಕಾಯ್ದೆ ಅನುಮೋದನೆಯಾದಾಗ ನಿಮ್ಮಲ್ಲಿ ಅನೇಕರು ಎನ್‌ಡಿಎ ಪಾಲುದಾರರಾಗಿರಲಿಲ್ಲವೇ?~ ಎಂದು ಕಾಂಗ್ರೆಸ್ ವಕ್ತಾರೆ ರೇಣುಕಾ ಚೌಧರಿ ಅವರು ಪ್ರಶ್ನಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಗುಜರಾತ್‌ನ  ನರೇಂದ್ರ ಮೋದಿ, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚವಾಣ್ ಹಾಗೂ ಹಿಮಾಚಲ ಪ್ರದೇಶದ ಪ್ರೇಮ್ ಕುಮಾರ್ ಧುಮಾಲ್ ಕೂಡ ಎನ್‌ಸಿಟಿಸಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಈ ನಡುವೆ ಪಶ್ಚಿಮ ಬಂಗಾಳದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಮುಖ್ಯಮಂತ್ರಿಗಳು ವ್ಯಕ್ತಪಡಿಸಿರುವ ಆಕ್ಷೇಪಗಳನ್ನು ಪರಿಶೀಲಿಸಿದ ಬಳಿಕ ಒಂದು ನಿರ್ಧಾರಕ್ಕೆ ಬರಲಾಗುತ್ತದೆ ಎಂದಿದ್ದಾರೆ.ಮುಖ್ಯಮಂತ್ರಿಗಳ ಆಕ್ಷೇಪಕ್ಕೆ ಪ್ರಧಾನಿ ಸಿಂಗ್ ಹಾಗೂ ಚಿದಂಬರಂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್, `ಸರ್ಕಾರ ನೂತನ ಕಾಯ್ದೆಗೆ ಅನುಮೋದನೆ ನೀಡುವುದಿಲ್ಲ~ ಎಂದಿದ್ದಾರೆ. ಆದರೆ ಅವರು ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ.`ಎನ್‌ಸಿಟಿಸಿ ಅಧಿಸೂಚನೆಗೆ ಮುನ್ನ ರಾಜ್ಯಗಳನ್ನು ಸಂಪರ್ಕಿಸುವ ಅಗತ್ಯ ಇರಲಿಲ್ಲ. ಭಯೋತ್ಪಾದನೆಯನ್ನು ಹತ್ತಿಕ್ಕಲು ಭದ್ರತಾ ಸಂಸ್ಥೆಗಳ ನಡುವೆ ಉತ್ತಮ ಸಹಕಾರಕ್ಕಾಗಿ ಇದನ್ನು ರಚಿಸಲಾಗಿದೆ~ ಎಂದು ಅವರು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry