ಶನಿವಾರ, ಮೇ 15, 2021
24 °C

ಎನ್‌ಸಿಟಿಸಿ ಸ್ಥಾಪನೆ ನೆನೆಗುದಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಕಾಂಗ್ರೆಸ್ಸೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಉದ್ದೇಶಿತ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್‌ಸಿಟಿಸಿ) ಸ್ಥಾಪನೆಯನ್ನು ಕೈಬಿಟ್ಟಿರುವುದಾಗಿ ಹೇಳಿದೆ.`ಎನ್‌ಸಿಟಿಸಿ ಸ್ಥಾಪನೆಗೆ ಅನುಕೂಲವಾಗುವಂತೆ ಯಾವುದೇ ಕಾನೂನು ಜಾರಿಗೆ ತರುವ ಯೋಚನೆ ಇಲ್ಲ' ಎಂದು ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಅವರು ಸ್ಪಷ್ಟಪಡಿಸಿದ್ದಾರೆ.`ಎನ್‌ಸಿಟಿಸಿ ಸ್ಥಾಪನೆಗೆ ಸಂಬಂಧಿಸಿದ ಮಸೂದೆಯನ್ನು ಲೋಕಸಭೆಯಲ್ಲಿ ಚರ್ಚೆಗೆ ಮಂಡಿಸುವ ಸಾಧ್ಯತೆಗಳನ್ನು ಗೃಹ ಇಲಾಖೆ ಪರಿಶೀಲಿಸುತ್ತಿಲ್ಲ' ಎಂದೂ ಅವರು ಹೇಳಿದ್ದಾರೆ.ಎನ್‌ಸಿಟಿಸಿ ಸ್ಥಾಪನೆಗೆ ಅಗತ್ಯ ಕಾನೂನು ಜಾರಿ ಸಾಧ್ಯತೆ ಅಥವಾ ವಿಶೇಷ ಆದೇಶ ಕುರಿತಾದ ಪ್ರಶ್ನೆಗೆ `ಸದ್ಯ ನಮ್ಮ ಮುಂದೆ ಅಂತಹ ಯಾವುದೇ ಪ್ರಸ್ತಾವ ಇಲ್ಲ. ಎನ್‌ಸಿಟಿಸಿ ಸ್ಥಾಪನೆ ಕುರಿತಂತೆ ಸರ್ಕಾರ ಸದ್ಯ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ' ಎಂದು ಸ್ಪಷ್ಟವಾಗಿ ಹೇಳಿದರು.`ಇತ್ತೀಚೆಗೆ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದಾಗ ಒಕ್ಕೂಟ ವ್ಯವಸ್ಥೆಯ ನೀತಿಗಳಿಗೆ ಎನ್‌ಸಿಟಿಸಿ ಪೂರಕವಾಗಿಲ್ಲ ಎಂಬ ಕಾರಣ ಮುಂದಿಟ್ಟು ಹಲವು ಮುಖ್ಯಮಂತ್ರಿಗಳು ಎನ್‌ಸಿಟಿಸಿ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ' ಎಂದರು.ಗುಜರಾತ್, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿ, ನಿತೀಶ್‌ಕುಮಾರ್, ನವೀನ್ ಪಟ್ನಾಯಕ್, ಮಮತಾ ಬ್ಯಾನರ್ಜಿ ಹಾಗೂ ಪಂಜಾಬ್‌ನ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಎನ್‌ಸಿಟಿಸಿ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದರು.ಚುನಾವಣೆ ಕಾರಣ?: ಒಮ್ಮತದ ನಿರ್ಧಾರದ ನಂತರವಷ್ಟೇ ಎನ್‌ಸಿಟಿಸಿ ಸ್ಥಾಪನೆ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಮುಂದಾಗಬಹುದು. ಅಲ್ಲಿಯವರೆಗೂ ಈ ಪ್ರಸ್ತಾವನೆ ಮೂಲೆ ಸೇರುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.2014ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ವಿಷಯದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರೋಧ ಕಟ್ಟಿಕೊಳ್ಳಲು ಸಿದ್ಧವಿಲ್ಲ ಎನ್ನಲಾಗುತ್ತಿದೆ.ಈ ಮೊದಲು ಎನ್‌ಸಿಟಿಸಿ, ಗುಪ್ತಚರ ಇಲಾಖೆ ಅಡಿ ಕೆಲಸ ನಿರ್ವಹಿಸುತ್ತದೆ ಎನ್ನಲಾಗಿತ್ತು. ಆದರೆ, ಇತ್ತೀಚೆಗೆ ಆ ಪ್ರಸ್ತಾವಕ್ಕೆ ಬದಲಾವಣೆ ತರಲಾಗಿತ್ತು.ಎನ್‌ಸಿಟಿಸಿ ನೇರವಾಗಿ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಕೆಲಸ ನಿರ್ವಹಿಸುವ, ಭಯೋತ್ಪಾದಕರ ಅಡಗುತಾಣದ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸರ ನೆರವು ಪಡೆಯುವ ನಿಟ್ಟಿನಲ್ಲಿ ಈ ಮಾರ್ಪಾಡು ಮಾಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.