ಎನ್‌ಸಿಪಿ ತೊರೆದ ಸಂಗ್ಮಾ

7

ಎನ್‌ಸಿಪಿ ತೊರೆದ ಸಂಗ್ಮಾ

Published:
Updated:
ಎನ್‌ಸಿಪಿ ತೊರೆದ ಸಂಗ್ಮಾ

ನವದೆಹಲಿ(ಪಿಟಿಐ/ಐಎಎನ್‌ಎಸ್): ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಬುಧವಾರ ನಡೆದ ಮತ್ತೊಂದು ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಷ್ಟ್ರಪತಿ ಸ್ಥಾನದ ಆಕಾಂಕ್ಷಿಯಾಗಿರುವ ಮಾಜಿ ಲೋಕಸಭಾಧ್ಯಕ್ಷ ಮತ್ತು ಎನ್‌ಸಿಪಿ ಸಂಸ್ಥಾಪಕ ನಾಯಕ ಪಿ.ಎ. ಸಂಗ್ಮಾ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದ ಸಂಗ್ಮಾ ಅವರನ್ನು ಪಕ್ಷ ಬೆಂಬಲಿಸದ ಕಾರಣ ಬೇಸರಗೊಂಡು, ಅವರು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.ಎನ್‌ಡಿಎ ಮತ್ತು ಇತರ ಪಕ್ಷಗಳ ಬೆಂಬಲ ಪಡೆದು ಅವರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದ್ದು, ಇದರಿಂದಾಗಿ ಯುಪಿಎ ಅಭ್ಯರ್ಥಿ ಪ್ರಣವ್ ಮುಖರ್ಜಿ ಅವರ ಅವಿರೋಧ ಆಯ್ಕೆಯ ಕನಸು ಭಗ್ನಗೊಂಡಿದೆ. ಈ ಬೆಳವಣಿಗೆಯಿಂದ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಪಕ್ಷದ ನಾಯಕರು ಕೊನೆಯವರೆಗೂ ನಡೆಸಿದ ಮನವೊಲಿಕೆ  ಯತ್ನಗಳು ನಿರೀಕ್ಷಿತ ಫಲ ನೀಡಲಿಲ್ಲ. ಶಿಸ್ತು ಕ್ರಮದ ಎಚ್ಚರಿಕೆ ಮತ್ತು ಒಂದು ಹಂತದಲ್ಲಿ ಪಕ್ಷದಿಂದ ಉಚ್ಛಾಟಿಸುವ ಚಿಂತನೆಯೂ ನಡೆದಿತ್ತು ಎನ್ನಲಾಗಿದೆ. ಇದರ ಸುಳಿವು ಅರಿತ ಸಂಗ್ಮಾ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.ಸುಳಿವು ನೀಡಿದ ಸ್ವಾಮಿ: ರಾಜಧಾನಿಯಲ್ಲಿ ಬುಧವಾರ ಬೆಳಿಗ್ಗೆ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್‌ಸ್ವಾಮಿ ಅವರು ಸಂಗ್ಮಾ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.ಇದರ ಬೆನ್ನಲ್ಲೇ ಸಂಗ್ಮಾ ತಮ್ಮ ರಾಜೀನಾಮೆ ಪತ್ರವನ್ನು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರಿಗೆ ರವಾನಿಸಿದರು. ಸಂಗ್ಮಾ ನಿವಾಸದಿಂದ ಹೊರಬಂದ ಸ್ವಾಮಿ, ರಾಜೀನಾಮೆ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದರು.`ಆತ್ಮಗೌರವದ ರಕ್ಷಣೆ~ಗಾಗಿ ಸಂಗ್ಮಾ ಈ ನಿರ್ಧಾರ ಕೈಗೊಂಡಿದ್ದಾರೆ~ ಎಂದು ಸಮರ್ಥಿಸಿಕೊಂಡ ಸ್ವಾಮಿ, `ಸ್ಪರ್ಧೆಯಿಂದ ಹಿಂದೆ ಸರಿದರೆ ಮಾರಿಷಸ್‌ಗೆ ರಾಯಭಾರಿಯನ್ನಾಗಿ ನೇಮಕ ಮಾಡುವ ಆಮಿಷವನ್ನು ಕಾಂಗ್ರೆಸ್ ಒಡ್ಡಿತ್ತು~ ಎಂದು ಆರೋಪಿಸಿದರು. ಸಂಗ್ಮಾ ಅವರಿಗೆ ಬೆಂಬಲ ನೀಡುವ ಮತ್ತು ಎನ್‌ಡಿಎ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆಗಳ ಬಗ್ಗೆಯೂ ಅವರು ಇದೇ ವೇಳೆ ಸುಳಿವು ನೀಡಿದರು.ರಾಜೀನಾಮೆ ಅಂಗೀಕಾರ:  ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಂಗ್ಮಾ ನೀಡಿರುವ ರಾಜೀನಾಮೆಯನ್ನು ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಗೀಕರಿಸಿರುವುದಾಗಿ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ತಿಳಿಸಿದ್ದಾರೆ.  ಮೇಘಾಲಯ ಶಾಸಕರಾಗಿರುವ ಸಂಗ್ಮಾ ಅವರ ರಾಜೀನಾಮೆ ವಿಷಯವನ್ನು ಅಲ್ಲಿನ ವಿಧಾನಸಭಾಧ್ಯಕ್ಷರ ಗಮನಕ್ಕೆ ತರುವುದಾಗಿಯೂ ಹೇಳಿದ ಅವರು, ಈ ಕುರಿತು ಹೆಚ್ಚಿಗೆ ಮಾತನಾಡಲು ನಿರಾಕರಿಸಿದರು.`ಅನ್ಯ ಮಾರ್ಗ ಇರಲಿಲ್ಲ~: ರಾಜೀನಾಮೆ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಂಗ್ಮಾ, `ಕಾಂಗ್ರೆಸೇತರ ಪಕ್ಷಗಳು ಮತ್ತು ಎನ್‌ಡಿಎ ಮಿತ್ರಪಕ್ಷಗಳ ನಾಯಕರು ತಮ್ಮನ್ನು ಬೆಂಬಲಿಸುವ ಭರವಸೆ ನೀಡಿದ್ದಾರೆ~ ಎಂದು ಹೇಳುವ ಮೂಲಕ ತಮ್ಮ ಸ್ಪರ್ಧೆಯನ್ನು ಖಚಿತಪಡಿಸಿದರು.`ರಾಜೀನಾಮೆಯ ಹೊರತಾಗಿ ಬೇರೆ ಮಾರ್ಗಗಳು ಉಳಿದಿರಲಿಲ್ಲ. ನನ್ನ ನಿರ್ಧಾರಕ್ಕೆ ವೈಯಕ್ತಿಕ ಕಾರಣಗಳಿಲ್ಲ. ಸಮಯ ಮತ್ತು ಸಂದರ್ಭ ಕಾರಣ. ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ಪಕ್ಷ ಮತ್ತು ನಾಯಕರನ್ನು ಸಂಕಷ್ಟಕ್ಕೆ ಸಿಲುಕಿಸುವ ಬದಲು ರಾಜೀನಾಮೆ ನೀಡಿದರೆ ಒಳ್ಳೆಯದು ಎಂಬ ವಿಚಾರದಿಂದ ಈ ನಿರ್ಧಾರ ತೆಗೆದುಕೊಂಡೆ~ ಎಂದು ರಾಜೀನಾಮೆಗೆ ಕಾರಣವಾದ ಸಂಗತಿಗಳನ್ನು ವಿವರಿಸಿದರು.`ಎನ್‌ಸಿಪಿ ನನ್ನನ್ನು ಬೆಂಬಲಿಸಲು ನಿರಾಕರಿಸುವ ಮೂಲಕ ರಾಷ್ಟ್ರದ ಬುಡಕಟ್ಟು ಜನಾಂಗದ ಆಸೆ, ಆಕಾಂಕ್ಷೆಗಳನ್ನು ತಿರಸ್ಕರಿಸಿದೆ. ಪಕ್ಷದ ನಿಲುವು ನಿಜಕ್ಕೂ ಬೇಸರ ಮೂಡಿಸಿದೆ. ತಮ್ಮ ಜನಾಂಗದ ವ್ಯಕ್ತಿಯೊಬ್ಬ ರಾಷ್ಟ್ರಪತಿ ಭವನ ಪ್ರವೇಶಿಸುವ ಬುಡಕಟ್ಟು ಜನರ ಬಹುದಿನಗಳ ಕನಸು ನನಸಾಗುವುದನ್ನು ತಡೆಯಲು ಯತ್ನಿಸಿದೆ. ಬುಡಕಟ್ಟು ಜನರ ಆಸೆಯನ್ನು ನೆರವೇರಿಸುವ ಹೊಣೆ ನನ್ನ ಮೇಲಿದೆ~ ಎಂದು 64 ವರ್ಷದ ಗಾರೊ ಬುಡಕಟ್ಟು ಜನಾಂಗದ ಸಂಗ್ಮಾ  ಪ್ರತಿಕ್ರಿಯಿಸಿದ್ದಾರೆ.ಎರಡನೇ ಬಾರಿ..:  1999ರಲ್ಲಿ ಕಾಂಗ್ರೆಸ್‌ನಿಂದ ಸಿಡಿದು ಬಂದ ಸಂಗ್ಮಾ, ಪವಾರ್ ಮತ್ತು ತಾರಿಕ್ ಅನ್ವರ್ ಜತೆ ಸೇರಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ಯನ್ನು ಹುಟ್ಟು ಹಾಕಿದ್ದರು. ತಮಿಳುನಾಡು ಮುಖ್ಯಮಂತ್ರಿ, ಎಐಎಡಿಎಂ ಮುಖ್ಯಸ್ಥೆ ಜಯಲಲಿತಾ ಮತ್ತು ಬಿಜು ಜನತಾದಳದ ನಾಯಕ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸಂಗ್ಮಾ  ಹೆಸರನ್ನು ರಾಷ್ಟ್ರಪತಿ ಸ್ಥಾನಕ್ಕೆ ಘೋಷಿಸಿದ್ದರು.ಇದಕ್ಕೆ ಎನ್‌ಸಿಪಿ ಆರಂಭದಿಂದಲೂ ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿ ತಾವೇ ಸ್ಥಾಪಿಸಿದ ಪಕ್ಷದಿಂದ ಅವರು ಈಗ ಹೊರಬಿದ್ದಿದ್ದಾರೆ. ಈ ಹಿಂದೆಯೂ ಅವರು ಪಕ್ಷವನ್ನು ತೊರೆದಿದ್ದರು. 2004ರಲ್ಲಿ ನಡೆದ ಲೋಕಸಭಾ ಚುನಾವಣೆಗೂ ಮುನ್ನ ಎನ್‌ಸಿಪಿ ತೊರೆದಿದ್ದ ಅವರು ತೃಣಮೂಲ ಕಾಂಗ್ರೆಸ್ ಸೇರಿದ್ದರು. ನಂತರ 2007ರಲ್ಲಿ ಮರಳಿ ಎನ್‌ಸಿಪಿ ತೆಕ್ಕೆಗೆ ಬಂದಿದ್ದರು.

ಅಗಾಥಾಗೆ ಎನ್‌ಸಿಪಿ ಎಚ್ಚರಿಕೆ

ಪ್ರಧಾನಿ ಮನಮೋಹನ್ ಸಿಂಗ್ ಸಂಪುಟದ ಅತಿ ಕಿರಿಯ ವಯಸ್ಸಿನ ಸಚಿವೆ ಹಾಗೂ ಪಿ.ಎ. ಸಂಗ್ಮಾ ಅವರ ಪುತ್ರಿ ಅಗಾಥಾ ಸಂಗ್ಮಾ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮ ತಂದೆಯ ಪರ ಪ್ರಚಾರ ನಡೆಸಿದರೆ ಕೇಂದ್ರ ಸಂಪುಟದಿಂದ ಕೈಬಿಡಲಾಗುವುದು, ಜತೆಗೆ ಪಕ್ಷದ ಶಿಸ್ತು ಕ್ರಮ ಎದುರಿಸಬೇಕಾಗಬಹುದು ಎಂದು ಎನ್‌ಸಿಪಿ ಎಚ್ಚರಿಕೆ ನೀಡಿದೆ.  ಎನ್‌ಸಿಪಿಗೆ ಪಿ.ಎ. ಸಂಗ್ಮಾ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಪಕ್ಷದ ಈ ಎಚ್ಚರಿಕೆ ಹೊರಬಿದ್ದಿದೆ. ಆಗಾಥಾ ಬಗ್ಗೆ ಕ್ರಮ ಕೈಗೊಳ್ಳುವ ನಿರ್ಣಯವನ್ನು ಎನ್‌ಸಿಪಿ ವಿವೇಚನೆಗೆ ಕಾಂಗ್ರೆಸ್ ಬಿಟ್ಟಿದೆ.ತಮ್ಮ ತಂದೆ ಅನೇಕ ಬಾರಿ ಪ್ರತಿನಿಧಿಸಿದ್ದ ತುರಾ ಲೋಕಸಭಾ ಕ್ಷೇತ್ರದಿಂದ ಎನ್‌ಸಿಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಆಗಾಥಾ ನಡೆ ಇನ್ನೂ ನಿಗೂಢವಾಗಿದೆ.      ಈ ಕುರಿತು ಶಿಲ್ಲಾಂಗ್‌ದಲ್ಲಿ ಪ್ರತಿಕ್ರಿಯಿಸಿರುವ ಮೇಘಾಲಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಸಂಗ್ಮಾ ಅವರ ಪುತ್ರ ಕಾನ್‌ರಾಡ್ ಕೆ. ಸಂಗ್ಮಾ, ಪಕ್ಷವನ್ನು ಇಕ್ಕಿಟ್ಟಿಗೆ ಸಿಲುಕಿಸಲು ಬಯಸದ ಕಾರಣ ತಮ್ಮ ತಂದೆ ರಾಜೀನಾಮೆ ನಿಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಜತೆ ಉಳಿಯುವ ಅಥವಾ ತಂದೆಯ ಹಾದಿಯನ್ನು ತುಳಿಯುವ ಬಗ್ಗೆ ಅವರು ಗುಟ್ಟು ಬಿಟ್ಟುಕೊಟ್ಟಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry