ಎಪಿಎಂಸಿಗೂ ಆಪರೇಷನ್ ಕಮಲ

ಗುರುವಾರ , ಜೂಲೈ 18, 2019
28 °C

ಎಪಿಎಂಸಿಗೂ ಆಪರೇಷನ್ ಕಮಲ

Published:
Updated:

ತುಮಕೂರು: ಜಿಲ್ಲೆಯಲ್ಲಿ ನೆಲಮಟ್ಟದಲ್ಲಿ ಅಧಿಕಾರಿ ಹಿಡಿಯಲು ಬಿಜೆಪಿ ಮುಂದಾಗಿದ್ದು, ಎಪಿಎಂಸಿ ಗಾದಿಗೂ `ಆಪರೇಷನ್ ಕಮಲ~ ವಿಸ್ತರಿಸಲು ವೇದಿಕೆ ಸಿದ್ಧಗೊಂಡಿದೆ.ಜಿಲ್ಲೆಯ 8 ಎಪಿಎಂಸಿಗಳಲ್ಲಿ ಈಗಾಗಲೇ 4 ಎಪಿಎಂಸಿ ಅಧಿಕಾರ ಗಾದಿ ಬಿಜೆಪಿ ಬೆಂಬಲಿಗರಿಗೆ ನಿರಾಯಾಸವಾಗಿ ಒಲಿದಿದೆ. ಶಿರಾದಲ್ಲಿ ಜೆಡಿಎಸ್‌ಗೆ ಅಧಿಕಾರ ಖಚಿತ. ಉಳಿದ 3 ತಾಲ್ಲೂಕುಗಳ ಅತಂತ್ರ ಸ್ಥಿತಿಯನ್ನು ಉಪಯೋಗಿಸಿಕೊಂಡು ಕನಿಷ್ಠ ಮತ್ತೆರಡು ಎಪಿಎಂಸಿಯಲ್ಲಿ ಅಧಿಕಾರ ಹಿಡಿದರೆ ಜಿಲ್ಲೆಯಲ್ಲಿ ಉಳಿದ ಪಕ್ಷಗಳನ್ನು ಸಡ್ಡು ಹೊಡೆಯಬಹುದು ಎಂಬ ಲೆಕ್ಕಾಚಾರ ಬಿಜೆಪಿ ವಲಯದಲ್ಲಿ ನಡೆದಿದೆ.ಎಪಿಎಂಸಿ ಚುನಾವಣೆ ಪಕ್ಷಾತೀತವಾಗಿ ನಡೆದರೂ, ಎಲ್ಲ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿ ಘೋಷಿಸಿದ್ದವು. ಈಗ ಅಧ್ಯಕ್ಷ- ಉಪಾಧ್ಯಕ್ಷ ಗಾದಿ ಸಹ ಪಕ್ಷ ರಾಜಕೀಯದಂತೆಯೆ ನಡೆಯಲಿದೆ.ಕಳೆದ ಬಾರಿ ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ `ಶೂನ್ಯ ಸಂಪಾದನೆ~ ಮಾಡಿತ್ತು. ನಂತರ ಕೊನೆ ಅವಧಿಯಲ್ಲಿ ತುಮಕೂರು ಎಪಿಎಂಸಿ ಅಧ್ಯಕ್ಷ ಗಾದಿ ಬಿಜೆಪಿ ಪಾಲಾಗಿತ್ತು. ಈಗ ತುಮಕೂರು, ಕುಣಿಗಲ್, ತಿಪಟೂರು, ಗುಬ್ಬಿ ಎಪಿಎಂಸಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಹೀಗಾಗಿ ಇಲ್ಲಿ ಬಿಜೆಪಿಗೆ ಅಧಿಕಾರ ಖಚಿತ. ಶಿರಾದಲ್ಲಿ ಬಿಜೆಪಿಯದ್ದು ಶೂನ್ಯ ಸಂಪಾದನೆ. ಉಳಿದಂತೆ ಪಾವಗಡ, ಮಧುಗಿರಿಯಲ್ಲಿ ಆಧಿಕಾರ ಹಿಡಿಯಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ.ಪ್ರತಿ ಎಪಿಎಂಸಿಯಲ್ಲಿ 12 ಮಂದಿ ಚುನಾಯಿತ ನಿರ್ದೇಶಕರಿದ್ದಾರೆ. ಅಲ್ಲದೆ ಸರ್ಕಾರ 3 ಮಂದಿಯನ್ನು ಪ್ರತಿ ಎಪಿಎಂಸಿಗೆ ನಾಮ ನಿರ್ದೇಶನ ಮಾಡಿದೆ. ಮತ್ತೆ ಕರ್ನಾಟಕ ಆಯಿಲ್ ಫೆಡರೇಷನ್ ಸ್ಥಾನವನ್ನು ಸಹ ನಾಮ ನಿರ್ದೇಶನ ಮಾಡುವ ಅವಕಾಶವಿದೆ. ನಾಮಿನಿ ಸದಸ್ಯರಿಗೂ ಮತ ಚಲಾಯಿಸುವ ಹಕ್ಕು ಇರುವುದರಿಂದ ಬಿಜೆಪಿ `ನಂಬರ್ ಗೇಮ್~ಗೆ ಮುಂದಾಗಿದೆ. ಮುಂದಿನ ಪ್ರಮುಖ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಳಮಟ್ಟದಲ್ಲಿ ಶತಾಯಗತಾಯ ಅಧಿಕಾರ ಹಿಡಿಯುವಂತೆ ಜಿಲ್ಲಾ ಮುಖಂಡರಿಗೆ ಪಕ್ಷದ ಆದೇಶ ರವಾನೆಯಾಗಿದೆ ಎಂದು ಮೂಲಗಳು ತಿಳಿಸಿವೆ.ಪಾವಗಡದಲ್ಲಿ ಬಿಜೆಪಿ ಬೆಂಬಲಿತರು 3, ಜೆಡಿಎಸ್ 3, ಕಾಂಗ್ರೆಸ್ 6 ಮಂದಿ ನಿರ್ದೇಶಕರಿದ್ದಾರೆ. 4 ಮಂದಿಯನ್ನು ನಾಮ ನಿರ್ದೇಶನ ಮಾಡಿದರೆ ಬಿಜೆಪಿ ಬಲ 7ಕ್ಕೆ ಏರಲಿದೆ. ಅಗತ್ಯವಿರುವ ಇಬ್ಬರಿಗಾಗಿ `ಆಪರೇಷನ್ ಕಮಲಕ್ಕೆ~ ಸಿದ್ಧತೆ ನಡೆದಿದೆ. ಮಧುಗಿರಿಯಲ್ಲಿ ಬಿಜೆಪಿ ಕೇವಲ 1 ಸ್ಥಾನ ಪಡೆದಿದೆ. ಜೆಡಿಎಸ್ 6 ಸ್ಥಾನ ಪಡೆದಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್‌ನ ಕೆಲವು ನಿರ್ದೇಶಕರು ಈಗಾಗಲೇ ಬಿಜೆಪಿ ತೆಕ್ಕೆಗೆ ಬರಲು ಸಿದ್ಧವಾಗಿದ್ದಾರೆ ಎನ್ನಲಾಗಿದೆ. ತುರುವೇಕೆರೆಯಲ್ಲಿ ಬಿಜೆಪಿ 3 ಸ್ಥಾನ ಪಡೆದಿದ್ದು, ಮತ್ತಿಬ್ಬರನ್ನು ಎಳೆದು ತರಲು ತಂತ್ರ ರೂಪಿಸಲಾಗುತ್ತಿದೆ ಎನ್ನಲಾಗಿದೆ.ಈಗಾಗಲೇ 5 ಎಪಿಎಂಸಿ ಅಧ್ಯಕ್ಷರ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ಜೂ. 16ರಿಂದ 22ರ ವರೆಗೆ ನಡೆಯಲಿದೆ. ತಿಪಟೂರು, ತುಮಕೂರು, ಪಾವಗಡ, ಮಧುಗಿರಿ, ಗುಬ್ಬಿ ಎಪಿಎಂಸಿಗೆ ದಿನಾಂಕ ನಿಗದಿಯಾಗಿದೆ. ಉಳಿದಂತೆ ತುರುವೇಕೆರೆ, ಶಿರಾ, ಕುಣಿಗಲ್‌ಗೆ ದಿನ ನಿಗದಿಯಾಗಿಲ್ಲ.ಜಿಲ್ಲೆಯಲ್ಲಿ ಅಸ್ತಿತ್ವವೇ ಇಲ್ಲದಿದ್ದ ಬಿಜೆಪಿ ಕಳೆದ ಚುನಾವಣೆಯಲ್ಲಿ 10 ತಾಲ್ಲೂಕು ಪಂಚಾಯಿತಿಗಳಲ್ಲಿ 3ರಲ್ಲಿ ಸ್ವಂತ ಬಲದಿಂದ ಅಧಿಕಾರ ಹಿಡಿದಿತ್ತು. ಚಿಕ್ಕನಾಯಕನಹಳ್ಳಿಯಲ್ಲಿ ಜೆಡಿಯು ಜೊತೆಗೆ ಅಧಿಕಾರ ಹಂಚಿಕೊಂಡಿದೆ. ತುರುವೇಕೆರೆಯಲ್ಲಿ ಮೀಸಲಾತಿ ಪ್ರಯೋಜನ ಪಡೆದು ಅಧಿಕಾರದಲ್ಲಿದೆ. ಒಟ್ಟಾರೆ ಕಾಂಗ್ರೆಸ್, ಜೆಡಿಎಸ್‌ಗೆ ಸಮಬಲವಾಗಿ ಅಧಿಕಾರ ಹಿಡಿದಿದೆ. ಈಗ ಮತ್ತೆ ಎಪಿಎಂಸಿಯಲ್ಲಿಅಧಿಕಾರ ಹಿಡಿಯಲು ಮುಂದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry