ಎಪಿಎಂಸಿ ಕಟ್ಟಡ ದುರ್ಬಳಕೆಗೆ ಆಕ್ರೋಶ

ಭಾನುವಾರ, ಜೂಲೈ 21, 2019
27 °C

ಎಪಿಎಂಸಿ ಕಟ್ಟಡ ದುರ್ಬಳಕೆಗೆ ಆಕ್ರೋಶ

Published:
Updated:

ಮೂಡುಬಿದಿರೆ: ಇಲ್ಲಿನ ಎಪಿಎಂಸಿ ಕಟ್ಟಡದ ತಳಮಹಡಿಯಲ್ಲಿ ಅಕ್ರಮ ವ್ಯವಹಾರಗಳು ನಡೆಯುತ್ತಿರುವುದರಿಂದ ಈ ಕಟ್ಟಡವನ್ನು ಪುರಸಭೆ ಸ್ವಾಧಿನಪಡಿಸಿಕೊಳ್ಳಬೇಕು ಎಂದು ಮಂಗಳವಾರ ನಡೆದ ಪುರಸಭೆ ಮಾಸಿಕ ಸಭೆಯಲ್ಲಿ ತೀರ್ಮಾನಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಪುರಸಭಾಧ್ಯಕ್ಷ ರತ್ನಾಕರ ದೇವಾಡಿಗ ವಹಿಸಿದ್ದರು. ಸ್ಥಳೀಯ ರೈತರ ಕೃಷಿ ಉತ್ಪನ್ನವನ್ನು ಯಾವುದೇ ಶುಲ್ಕವಿಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ಎಪಿಎಂಸಿ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೆ ಇಲ್ಲಿ ರೈತರ ಕೃಷಿಯುತ್ಪನ್ನಗಳನ್ನು ಮಾರಾಟ ಮಾಡಬೇಕಾದರೆ  ಕಾನೂನುಬಾಹಿರ ಶುಲ್ಕ ವಿಧಿಸಬೇಕಾಗುತ್ತದೆ. ಈ ಶುಲ್ಕ ಪುರಸಭೆಗೆ ಬರುವುದಿಲ್ಲ. ಎಲ್ಲಿಗೆ ಹೋಗುತ್ತದೆ ಎನ್ನುವುದು ಕೃಷ್ಣರಾಜ ಹೆಗ್ಡೆಯವರ ಪ್ರಶ್ನೆಯಾಗಿತ್ತು.ನಿರ್ದಿಷ್ಟ ವ್ಯಕ್ತಿಯೋರ್ವರ ಬ್ಯಾಂಕ್ ಖಾತೆಗೆ ಪಿಗ್ಮಿ ರೂಪದಲ್ಲಿ ನಿತ್ಯ 250ರಿಂದ 500 ರೂಪಾಯಿ ಹಣ ಜಮೆ ಆಗುತ್ತದೆ. ವ್ಯಕ್ತಿಯೋರ್ವರ ಮೂರು ಬ್ಯಾಂಕ್‌ನಲ್ಲಿರುವ ಬೇರೆ ಬೇರೆ ಖಾತೆಗೆ ಈ ರೀತಿ ಹಣ ಜಮೆಯಾದ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ರೈತ ಮಾರುಕಟ್ಟೆಯನ್ನು ಹಣ ಮಾಡುವ ದಂಧೆಗೆ ಬಳಕೆ ಮಾಡುತ್ತಿರುವುದರಿಂದ ಈ ಕಟ್ಟಡವನ್ನು  ಪುರಸಭೆ ಸ್ವಾಧೀನಪಡಿಸಿಕೊಳ್ಳಬೇಕು ಎಂದು ಭೋಜ ಕೋಟ್ಯಾನ್ ಮತ್ತು ಹನೀಫ್ ಅಲಂಗಾರ್ ಆಗ್ರಹಿಸಿದರು. ಸುದೀರ್ಘ ಚರ್ಚೆ ಬಳಿಕ ಸದ್ರಿ ಕಟ್ಟಡವನ್ನು ಪುರಸಭೆಗೆ ಹಸ್ತಾಂತರಿಸಲು ನಿರ್ಧರಿಸಲಾಯಿತು.ಮೂಡುಬಿದಿರೆ ಪುರಸಭೆಯಲ್ಲಿ ನೀರಿನ ದರ ಮಂಗಳೂರು ಮಹಾನಗರ ಪಾಲಿಕೆ, ಬಂಟ್ವಾಳ, ಪುತ್ತೂರು ಪುರಸಭೆಗಳಲ್ಲಿ ವಿಧಿಸುವ ನೀರಿನ ದರಕ್ಕಿಂತಲೂ ದುಬಾರಿಯಾಗಿದೆ. ಮಂಗಳೂರಿನಲ್ಲಿ 24 ಸಾವಿರ ಲೀಟರ್‌ಗೆ 65 ರೂಪಾಯಿಯಾದರೆ, ಮೂಡುಬಿದಿರೆಯಲ್ಲಿ  ಮಾಸಿಕ 18 ಸಾವಿರ ಲೀಟರ್‌ಗೆ 90 ರೂಪಾಯಿ ವಿಧಿಸಲಾಗುತ್ತದೆ. ಈ ದರವನ್ನು 65 ರೂಪಾಯಿಗೆ ಇಳಿಸಬೇಕು ಮತ್ತು ಬಿಪಿಎಲ್ ಫಲಾನುಭವಿಗಳಿಗೆ 50 ರೂಪಾಯಿ ನಿಗದಿಪಡಿಸಬೇಕು ಎಂಬುದು ಬಿಜೆಪಿಯ ಬಾಹುಬಲಿ ಪ್ರಸಾದ್ ಮತ್ತು ಪಕ್ಷದ ಇತರ ಸದಸ್ಯರ ಆಗ್ರಹವಾಗಿತ್ತು.ನೀರಿನ ನಿರ್ವಹಣೆಗೆ ವರ್ಷಕ್ಕೆ ಅಂದಾಜು ರೂ.1.60 ಕೋಟಿ ಖರ್ಚು ತಗಲುತ್ತದೆ. ಆದರೆ ಬರುವ ಆದಾಯ ರೂ.66 ಲಕ್ಷ ಇದೆ. ನಷ್ಟದಲ್ಲಿ ನಡೆಯುತ್ತಿರುವುದರಿಂದ ದರ ಇಳಿಕೆ ಅಸಾಧ್ಯ ಎಂದು ಅಧ್ಯಕ್ಷ ರತ್ನಾಕರ ದೇವಾಡಿಗ ಹೇಳಿದರು. `2009 ಏಪ್ರಿಲ್‌ನಲ್ಲಿ ನೀವು ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾಗ ದರ ಏರಿಕೆ ಮಾಡಲಾಗಿತ್ತು. ಆಗ ನಾನು ಆಕ್ಷೇಪ ಮಾಡಿದರೂ ನೀವು ಒಪ್ಪಲಿಲ್ಲ. ಈಗ ನೀವೇ ದರ ಇಳಿಕೆಗೆ ಒತ್ತಾಯಿಸುವುದರಲ್ಲಿ ಅರ್ಥವಿಲ್ಲ~ ಎಂದು ಉಪಾಧ್ಯಕ್ಷೆ ರಮಣಿ ಹೇಳಿದರು. `ಆಗ ತಪ್ಪಾಗಿರಬಹುದು, ಈಗ ಸರಿಪಡಿಸಿ, ದರ ಇಳಿಸಿ~ ಎಂದು ಪ್ರಸಾದ್ ಹೇಳಿದರು.ಇತರ ಪುರಸಭೆಗಳಿಗೆ ಮುಖ್ಯಮಂತ್ರಿ 5 ಕೋಟಿ ಅನುದಾನ ಬಿಡುಗಡೆ ಮಾಡಿದರೆ ಮೂಡುಬಿದಿರೆಗೆ ಕೇವಲ 3 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಉಳಿದ 2 ಕೋಟಿ ಅನುದಾನ ಬಿಡುಗಡೆಯಾದರೆ ದರ ಪರಿಷ್ಕರಣೆಗೆ ನೋಡೋಣ ಎಂದು ಪಿ.ಕೆ. ಥೋಮಸ್ ಮತ್ತು ಸುರೇಶ್ ಕೋಟ್ಯಾನ್ ಹೇಳಿದರು.  ಕೊನೆಗೆ ದರ ಪರಿಷ್ಕರಣೆ ಬಗ್ಗೆ ಸಮಿತಿ ರಚಿಸಿ ವರದಿ ನೀಡಲು ಸಭೆ ತೀರ್ಮಾನಿಸಿತು. ಚರಂಡಿಗೆ ಗಲೀಜು ನೀರು ಬಿಡುವ ವಸತಿ ಸಮುಚ್ಚಯಗಳ ಪೈಪ್‌ಲೈನ್ ಕಡಿತಕ್ಕೆ ಕಠಿಣಕ್ರಮ ಕೈಗೊಳ್ಳುವಂತೆ ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ್ ರೈ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry