ಬುಧವಾರ, ಆಗಸ್ಟ್ 4, 2021
22 °C

ಎಪಿಎಂಸಿ ಪ್ರಾಂಗಣದಲ್ಲೇ ಮಾರಾಟ: ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿಯೇ ವರ್ತಕರು ಮಾರಾಟ ಮಾಡುವಂತೆ ಆಡಳಿತ ಮಂಡಳಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ರೈತರ ಹಿತ ಕಾಪಾಡಬೇಕು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಶುಕ್ರವಾರ                ಒತ್ತಾಯಿಸಿದರು.ಕೆಲ ವರ್ತಕರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಂದ ಮಾಲು ಖರೀದಿಸದೆ ಬೇರೆಡೆ ವ್ಯಾಪಾರ ಮಾಡಿ ರೈತರಿಗೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂಬ ರೈತರ ದೂರಿನ ಮೇರೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯಲ್ಲಿ ಆಯೋಜಿಸಿದ್ದ ರೈತರು ಮತ್ತು ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು.ಪಟ್ಟಣದ ಕೆಲವು ಮಂದಿ ತರಕಾರಿ ಸಗಟು ವರ್ತಕರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೂಲಸೌಕರ್ಯಗಳ ಕೊರತೆಯಿರುವ ಕಾರಣವನ್ನು ನೆಪವಾಗಿರಿಸಿ ಕೊಂಡು ತಮಗೆ ಅನುಕೂಲವಾಗಿರುವ ಕಡೆಗಳಲ್ಲಿ ಹಳ್ಳಿಗಳಿಂದ ರೈತರು ಮಾರಾಟಕ್ಕೆ ತಂದ ತರಕಾರಿಗಳನ್ನು ಖರೀದಿ ಮಾಡುತ್ತಿರುವುದು  ಸರಿಯಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಈ ರೀತಿ ವ್ಯವಹಾರಕ್ಕೆ ಆಸ್ಪದ ನೀಡಬಾರದು ಎಂದು ಅಧಿಕಾರಿಗಳಿಗೆ ಅವರು ತಾಕೀತು ಮಾಡಿದರು.   ಎಪಿಎಂಸಿ ಕಾರ್ಯದರ್ಶಿ ಗಾಯತ್ರಿದೇವಿ ಮಾತನಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲೇ ವ್ಯಾಪಾರ ವಹಿವಾಟು ನಡೆಯಲಿದೆ. ಆದರೆ ವ್ಯಾಪಾರ ವಹಿವಾಟು ಬದಲಾವಣೆ ಮಾಡುವ ಅಧಿಕಾರ ಇರುವುದು ಜಿಲ್ಲಾಧಿಕಾರಿಗಳಿಗೆ ಮಾತ್ರ ಇದೆ. ಆದರೆ ಕೆಲವೇ ಮಂದಿ ವರ್ತಕರಿಗೆ ಮಾತ್ರ ಇದರಿಂದ ತೊಂದರೆ ಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಇಲ್ಲಿ ತರಕಾರಿ ಖರೀದಿಸದೆ ಬೇರೆಡೆ ಖರೀದಿಸುವ ವರ್ತಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ರಾಜ್ಯ ರೈತ ಸಂಘದ ಸಂಚಾಲಕ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಹೊನ್ನಾವರ ಸಿದ್ದಪ್ಪ, ಹಸಿರು ಸೇನೆ ಜಿಲ್ಲಾಧ್ಯಕ್ಷ ಬಾಬು, ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜು, ಕನಕಂಚೇನಹಳ್ಳಿ ಪ್ರಸನ್ನ ಕುಮಾರ್, ಕರುಗುಂದ ಶಿವಲಿಂಗಪ್ಪ, ಅಣ್ಣಾಯಕನಹಳ್ಳಿ ಶಿವಮೂರ್ತಿ, ವಡೇರಹಳ್ಳಿ ಮಧು, ಶಿವಕುಮಾರ್, ತಿರುಪತಿಹಳ್ಳಿ ನಾಗರಾಜು ಉಪಸ್ಥಿತರಿದ್ದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.