ಮಂಗಳವಾರ, ಆಗಸ್ಟ್ 20, 2019
27 °C

ಎಪಿಎಂಸಿ ಪ್ರಾಂಗಣ: ಎಲ್ಲೆಲ್ಲೂ ಕೊಳಚೆ

Published:
Updated:

ಚಿಟಗುಪ್ಪಾ: ಹುಮನಾಬಾದ್ ತಾಲ್ಲೂಕಿನ ಚಿಟಗುಪ್ಪಾ ಪಟ್ಟಣದಲ್ಲಿ ಕೃಷಿ ಉಪ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಹಲವು ತಿಂಗಳಿನಿಂದ ಕೊಳಚೆ ನೀರಿನಿಂದ ಆವರಿಸಿದ್ದು, ಎಲ್ಲೆಲ್ಲೂ ಕೆಸರು, ಕೆಟ್ಟ ವಾಸನೆಯಿಂದಾಗಿ ನಾಗರಿಕರು ಓಡಾಡಲು ಆಗದ ಸ್ಥಿತಿ ಇದೆ. ಪ್ರಾಂಗಣದಲ್ಲಿನ ಎರಡು ಮುಖ್ಯ ರಸ್ತೆಗಳ ಮಧ್ಯೆ ಮಳೆ ನೀರು ನಿಂತು,  ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಜನಸಂಚಾರಕ್ಕೆ ಹಾಗೂ ವಹಿವಾಟಿಗೆ ಲಾರಿ, ಆಟೋಗಳಲ್ಲಿ ತೆಗೆದುಕೊಂಡು ಬರುವ ಉತ್ಪನ್ನಗಳ ಮೂಟೆಗಳ ಸಾಗಣೆಗೂ ತೊಂದರೆಯಾಗಿದೆ. ಹಮಾಲರೂ ಕಷ್ಟ ಪಡುವಂತಾಗಿದೆ.ಅವ್ಯವಸ್ಥೆಯಿಂದಾಗಿ ವ್ಯಾಪಾರಿಗಳಿಗೆ ಸಾಂಕ್ರಾಮಿಕ ರೋಗಗಳ ಭೀತಿಯೂ ಎದುರಾಗಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಅಂಗಡಿಗಳಲ್ಲಿ ಸಮಾಧಾನದಿಂದ ಕುಳಿತು ಕೊಳ್ಳುವುದು ಕಷ್ಟವಾಗಿದೆ ಎಂದು ಹಲವು ವರ್ತಕರು ನುಡಿಯುತ್ತಾರೆ.ಹೊರ ಊರುಗಳಿಂದ ಬರುವ ರೈತರಿಗೂ ಸಂಚಾರ ಕಷ್ಟವಾಗುತ್ತಿದೆ. ಖಾಸಗಿ ಜೀಪು, ಆಟೋ ಚಾಲಕರು ಎಪಿಎಂಸಿ ಪ್ರಾಂಗಣದಲ್ಲಿಯೇ ನಿಲುಗಡೆ ಮಾಡುತ್ತಿದ್ದಾರೆ ಎಂಬ ದೂರು ಇಲ್ಲಿನ ವರ್ತಕರದು.ಸಾರ್ವಜನಿಕರಿಗೆ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲದಿರುವುದರಿಂದ ವರ್ತಕರಿಗೆ, ರೈತರಿಗೆ, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಎಪಿಎಂಸಿ ಆಡಳಿತ ಮಂಡಳಿ, ಸ್ಥಳೀಯ ಪುರಸಭೆ ಗಮನ ಹರಿಸಿ, ಪ್ರಾಂಗಣದಲ್ಲಿಯ ರಸ್ತೆಗಳ ದುರಸ್ತಿ ಹಾಗೂ ಅವುಗಳ ಅಕ್ಕಪಕ್ಕದ ಚರಂಡಿ ಸ್ವಚ್ಛಗೊಳಿಸಿ, ಕೊಳಚೆ, ಮಳೆ ನೀರು ನಿಲ್ಲದಂತೆ ಹರಿದುಹೋಗುವ ವ್ಯವಸ್ಥೆ ಕಲ್ಪಿಸಿ, ಸ್ವಚ್ಛ ವಾತಾವರಣ ನಿರ್ಮಿಸಬೇಕು ಎಂದು ಮಲ್ಲಿಕಾರ್ಜುನ ಪಾಟೀಲ್ ಮತ್ತಿತರರು ಒತ್ತಾಯಿಸಿದ್ದಾರೆ.

Post Comments (+)