ಶನಿವಾರ, ಮೇ 8, 2021
26 °C
ಬಿಪಿಎಲ್ ಕುಟುಂಬಕ್ಕೆ ಪೂರೈಸಲು ಸರ್ಕಾರದ ನಿರ್ಧಾರ

ಎಪಿಎಲ್‌ಗೆ ಅಕ್ಕಿ ಬಂದ್

ಪ್ರಜಾವಾಣಿ ವಾರ್ತೆ / ಪಿ.ಎಂ. ರಘುನಂದನ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಡತನ ರೇಖೆಗಿಂತ ಮೇಲಿರುವ (ಎಪಿಎಲ್) ಕುಟುಂಬಗಳಿಗೆ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿ (ಪಿಡಿಎಸ್) ಅಕ್ಕಿ ಪೂರೈಸುವುದನ್ನು ಸ್ಥಗಿತಗೊಳಿಸಲು  ರಾಜ್ಯ ಸರ್ಕಾರ ನಿರ್ಧರಿಸಿದೆ. ಜುಲೈ ತಿಂಗಳಿನಿಂದ ಇದು ಜಾರಿಗೆ ಬರಲಿದೆ. ಎಪಿಎಲ್ ಕಾರ್ಡುದಾರರ ಪಾಲಿನ ಅಕ್ಕಿಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (ಬಿಪಿಎಲ್) ನೀಡಲು ಬಳಸಿಕೊಳ್ಳಲಾಗುತ್ತದೆ.ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ 10 ರೂಪಾಯಿಗೆ ಒಂದು ಕೆ.ಜಿ.ಯಂತೆ ತಿಂಗಳಿಗೆ 10 ಕೆ.ಜಿ. ಅಕ್ಕಿಯನ್ನು ಈಗ ಪಡಿತರ ಅಂಗಡಿಗಳ ಮೂಲಕ ಪೂರೈಸಲಾಗುತ್ತಿದೆ. ಇದನ್ನು ಸ್ಥಗಿತಗೊಳಿಸಿ, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಕೆ.ಜಿ.ಗೆ ಒಂದು ರೂಪಾಯಿಗೆ ತಿಂಗಳಿಗೆ 30 ಕೆ.ಜಿ. ಅಕ್ಕಿ ಪೂರೈಸುವ ಯೋಜನೆಯನ್ನು ಜುಲೈ 1ರಿಂದ ಆರಂಭಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಹಣಕಾಸು ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ, ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದ ಅಕ್ಕಿ ಪೂರೈಕೆ ಆರಂಭವಾದ ನಂತರ ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೂ ಅಕ್ಕಿ ಪೂರೈಕೆ ಮಾಡಲು ಸಭೆ ತೀರ್ಮಾನಿಸಿದೆ.ಪ್ರಸ್ತಾವಿತ ಆಹಾರ ಭದ್ರತಾ ಮಸೂದೆಗೆ ಸಂಸತ್ತಿನ ಅನುಮೋದನೆ ದೊರೆತ ನಂತರ ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚಿನ ಪ್ರಮಾಣದ ಅಕ್ಕಿ ದೊರೆಯುವ ಸಾಧ್ಯತೆ ಇದೆ.`ಬಡವರಿಗೆ ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಪೂರೈಸುವುದರ ಜೊತೆಯಲ್ಲೇ, ಎಪಿಎಲ್ ಪಡಿತರ ಚೀಟಿ ಹೊಂದಿರುವವರಿಗೂ ಪಿಡಿಎಸ್ ವ್ಯವಸ್ಥೆಯ ಅಡಿ ಅಕ್ಕಿ ಪೂರೈಕೆ ಮುಂದುವರಿಸಲಾಗುವುದು' ಎಂದು ಸಿದ್ದರಾಮಯ್ಯ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು.ಒಂದು ರೂಪಾಯಿಗೆ ಕೆ.ಜಿ. ದರದಲ್ಲಿ 30 ಕೆ.ಜಿ. ಅಕ್ಕಿ ಪೂರೈಸುವ ಹೊಸ ಯೋಜನೆ ಜಾರಿಗೆ ರಾಜ್ಯಕ್ಕೆ ಪ್ರತಿ ತಿಂಗಳು 2.84 ಲಕ್ಷ ಟನ್ ಅಕ್ಕಿ ಬೇಕು. ಆದರೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪ್ರತಿ ತಿಂಗಳು ದೊರೆಯುತ್ತಿರುವ ಅಕ್ಕಿ ಪ್ರಮಾಣ 1.77 ಲಕ್ಷ ಟನ್. ಇದರಲ್ಲಿ ಎಪಿಎಲ್ ಪಡಿತರ ಚೀಟಿಯ 34 ಲಕ್ಷ ಕುಟುಂಬಗಳಿಗೆ ನೀಡುವ 85 ಸಾವಿರ ಮೆಟ್ರಿಕ್ ಟನ್ ಅಕ್ಕಿಯೂ ಸೇರಿದೆ. ಎಪಿಎಲ್ ಕುಟುಂಬಗಳಿಗೆ ನೀಡುತ್ತಿದ್ದ ಅಕ್ಕಿಯನ್ನು ಇನ್ನು ಮುಂದೆ ಹೊಸ, ಮಹತ್ವಾಕಾಂಕ್ಷೆಯ ಯೋಜನೆ ಅನುಷ್ಠಾನಕ್ಕೆ ಬಳಸಿಕೊಳ್ಳಲಾಗುವುದು. ಇದರಿಂದ ಸರ್ಕಾರದ ಮೇಲಿನ ಹೊರೆ ಗಣನೀಯ ಪ್ರಮಾಣದಲ್ಲಿ ತಗ್ಗಲಿದೆ. ಅಲ್ಲದೆ, ಗುರುವಾರ ನಡೆದ ಸಂಪುಟ ಸಭೆ ಯೂನಿಟ್ ವ್ಯವಸ್ಥೆ (ಪ್ರತಿಯೊಬ್ಬ ವ್ಯಕ್ತಿಗೆ ಇಂತಿಷ್ಟು ಅಕ್ಕಿ ಎಂದು ನಿರ್ಧರಿಸುವ ವ್ಯವಸ್ಥೆ) ಉಳಿಸಿಕೊಳ್ಳುವ ನಿರ್ಧಾರ ಕೈಗೊಂಡಿದೆ.ಇದರಿಂದ ತನ್ನ ಮೇಲಿನ ಹಣಕಾಸಿನ ಹೊರೆ ತಗ್ಗಲಿದೆ ಎಂಬ ಲೆಕ್ಕಾಚಾರ ಸರ್ಕಾರದ್ದು. ಇಷ್ಟಾದರೂ ಹೊಸ ಯೋಜನೆ ಜಾರಿಗೆ ಸರ್ಕಾರ ಮುಕ್ತ ಮಾರುಕಟ್ಟೆಯಿಂದ ಪ್ರತಿ ತಿಂಗಳು 1.07 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಖರೀದಿಸಬೇಕಿದೆ.ಇತ್ತೀಚಿನ ಕೆಲವು ವರ್ಷಗಳವರೆಗೆ ಎಪಿಎಲ್ ಪಡಿತರ ಚೀಟಿ ಹೊಂದಿರುವ ಬಹುಪಾಲು ಕುಟುಂಬಗಳು ಪಿಡಿಎಸ್ ವ್ಯವಸ್ಥೆ ಅಡಿ ನೀಡುವ ಅಕ್ಕಿಯನ್ನು ಖರೀದಿಸುತ್ತಿರಲಿಲ್ಲ. ಆದರೆ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ತೀವ್ರ ಗತಿಯಲ್ಲಿ ಏರಿಕೆ ಕಂಡ ಕಾರಣ, ಈ ಕುಟುಂಬಗಳು ಇತ್ತೀಚೆಗೆ ಪಡಿತರ ಅಕ್ಕಿ ಖರೀದಿಸಲು ಆರಂಭಿಸಿದ್ದವು. ಸಾಮಾನ್ಯವಾಗಿ ಬಳಕೆಯಾಗುವ ಸೋನಾ ಮಸೂರಿ ಅಕ್ಕಿಯ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ 55 ರೂಪಾಯಿ, ದೋಸೆ ಅಕ್ಕಿಯ ಬೆಲೆ 28 ರೂಪಾಯಿ ಇದೆ. ದೋಸೆ ಅಕ್ಕಿ ಮಾದರಿಯ ಅಕ್ಕಿಯನ್ನು ಒಂದು ಕೆ.ಜಿ.ಗೆ 10 ರೂಪಾಯಿ ದರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪೂರೈಕೆ ಮಾಡುತ್ತಿದ್ದ ಕಾರಣ, ಎಪಿಎಲ್ ಕುಟುಂಬಗಳೂ ಪಡಿತರ ಅಂಗಡಿಯಿಂದ ಈ ಅಕ್ಕಿಗೆ ಬೇಡಿಕೆ ಹೆಚ್ಚಿತ್ತು ಎಂಬುದು ಅಧಿಕಾರಿ ಮೂಲಗಳ ವಿವರಣೆ.

`ಸದ್ಯಕ್ಕೆ ನಾವು ಬಿಪಿಎಲ್ ಕುಟುಂಬಗಳಿಗೆ ಹೊಸ ಯೋಜನೆಯ ಅಡಿ ಅಕ್ಕಿ ಪೂರೈಸಲು ಹೆಚ್ಚಿನ ಗಮನ ನೀಡುತ್ತಿದ್ದೇವೆ. ಎಪಿಎಲ್ ಕುಟುಂಬಗಳಿಗೆ ಪೂರೈಕೆ ಮಾಡುತ್ತಿದ್ದ ಅಕ್ಕಿ ದುರ್ಬಳಕೆ ಆಗುತ್ತಿತ್ತು. ಇನ್ನು ಮುಂದೆ ಅದು ನಿಲ್ಲಲಿದೆ' 

  ಆಹಾರ ಸಚಿವ ದಿನೇಶ್ ಗುಂಡೂರಾವ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.