`ಎಪಿಎಲ್' ಕಾರ್ಡ್ ಅಕ್ಕಿ, ಗೋಧಿಗೆ ಕತ್ತರಿ!

7

`ಎಪಿಎಲ್' ಕಾರ್ಡ್ ಅಕ್ಕಿ, ಗೋಧಿಗೆ ಕತ್ತರಿ!

Published:
Updated:

ಹುಬ್ಬಳ್ಳಿ: ಕೇಂದ್ರ ಸರ್ಕಾರ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬಿಪಿಎಲ್ ಹಾಗೂ ಅಂತ್ಯೋದಯ ಅನ್ನ ಯೋಜನೆ (ಎಎವೈ) ಪಡಿತರ ಚೀಟಿದಾರರಿಗಷ್ಟೇ ಅಲ್ಲ, `ಎಪಿಎಲ್'ದಾರರಿಗೂ ಅಕ್ಕಿ ಮತ್ತು ಗೋಧಿ ಪೂರೈಸುತ್ತಿದೆ.  ಆದರೆ, ರಾಜ್ಯ ಸರ್ಕಾರ ಅದನ್ನು `ಅನ್ನಭಾಗ್ಯ' ಯೋಜನೆಗಾಗಿ ಬಳಸುತ್ತಿರುವುದರಿಂದ ಎಪಿಎಲ್ ಕಾರ್ಡ್‌ದಾರರ ಅಕ್ಕಿ ಮತ್ತು ಗೋಧಿಗೆ ಕತ್ತರಿ ಬಿದ್ದಿದೆ!ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ದಾಖಲೆಗಳ ಪ್ರಕಾರ, ಕೇಂದ್ರ ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿ ಎಪಿಎಲ್ ಪಡಿತರಚೀಟಿ ಕುಟುಂಬಗಳಿಗೆ ಹಂಚಿಕೆ ಮಾಡಲು 57,663 ಮೆಟ್ರಿಕ್ ಟನ್ ಅಕ್ಕಿ ಮತ್ತು 5,417 ಮೆಟ್ರಿಕ್ ಟನ್ ಗೋಧಿ ಬಿಡುಗಡೆ ಮಾಡಿದೆ. ಅಲ್ಲದೆ `ಅನ್ನಭಾಗ್ಯ' ಯೋಜನೆಗಾಗಿ `ಹೆಚ್ಚುವರಿ ಎಪಿಎಲ್' ಎಂದು 28,832 ಮೆಟ್ರಿಕ್ ಟನ್ ಅಕ್ಕಿ ಮತ್ತು 2,709 ಮೆಟ್ರಿಕ್ ಟನ್ ಗೋಧಿ ಬಿಡುಗಡೆ ಮಾಡಿದೆ. `ಅನ್ನ ಭಾಗ್ಯ ಯೋಜನೆ'ಯಡಿ ವಿತರಿಸಲು ಅಗತ್ಯವಾದ ಅಕ್ಕಿ ಮತ್ತು ಗೋಧಿಯನ್ನು ಸರಿಹೊಂದಿಸುವ ಹಿನ್ನೆಲೆಯಲ್ಲಿ ಎಪಿಎಲ್ ಪಡಿತರಚೀಟಿದಾರಿಗೆ ನೀಡಲಾಗುತ್ತಿದ್ದ ಆಹಾರಧಾನ್ಯ ರದ್ದುಗೊಳಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.ಸೆಪ್ಟೆಂಬರ್ ತಿಂಗಳಿನಿಂದ ಬಿಪಿಎಲ್ ಕುಟುಂಬಗಳಿಗೆ ಕಿಲೋಗೆ ಒಂದು ರೂಪಾಯಿಯಂತೆ ಅಕ್ಕಿಯ ಜೊತೆಗೆ ಗೋಧಿ ವಿತರಣೆಯೂ ಆರಂಭವಾಗಲಿದೆ. ಆದರೆ ಉತ್ತರ ಕರ್ನಾಟಕದ ಜಿಲ್ಲೆಗಳು ಮತ್ತು ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಬೇರೆ ಬೇರೆ ಪ್ರಮಾಣದಲ್ಲಿ ಹಂಚಿಕೆಯಾಗಲಿದೆ.

ರಾಜ್ಯದ ಎಲ್ಲ ಎಎವೈ ಪಡಿತರಚೀಟಿಗಳಿಗೆ 29 ಕೆ.ಜಿ ಅಕ್ಕಿ ಮತ್ತು 6 ಕೆ.ಜಿ ಗೋಧಿ ವಿತರಣೆಯಾಗಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಪಿಎಲ್ ಏಕ ಸದಸ್ಯ ಪಡಿತರ ಚೀಟಿಗಳಿಗೆ 8 ಕೆ.ಜಿ ಅಕ್ಕಿ, 2 ಕೆ.ಜಿ ಗೋಧಿ, ದ್ವಿ ಸದಸ್ಯ ಪಡಿತರ ಚೀಟಿಗಳಿಗೆ 17 ಕೆ.ಜಿ ಅಕ್ಕಿ, 3 ಕೆ.ಜಿ ಗೋಧಿ, ಮೂರು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಪಡಿತರ ಚೀಟಿದಾರ ಕುಟುಂಬಗಳಿಗೆ 25 ಕೆ.ಜಿ ಅಕ್ಕಿ, 5 ಕೆ.ಜಿ ಗೋಧಿ ವಿತರಣೆಯಾಗಲಿದೆ.`ಎಪಿಎಲ್' ಕಾರ್ಡ್‌ದಾರರಿಗೆ ಅಕ್ಕಿ, ಗೋಧಿಗೆ ಕತ್ತರಿ!

ಆದರೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಏಕ ಸದಸ್ಯ ಪಡಿತರ ಚೀಟಿಗೆ 9 ಕಿಲೋ ಅಕ್ಕಿ, 1 ಕಿಲೋ ಗೋಧಿ, ದ್ವಿ ಸದಸ್ಯ ಚೀಟಿಗಳಿಗೆ 18 ಕಿಲೋ ಅಕ್ಕಿ, 2 ಕಿಲೋ ಗೋಧಿ, ಮೂರು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಪಡಿತರ ಚೀಟಿದಾರ ಕುಟುಂಬಗಳಿಗೆ 27 ಕಿಲೋ ಅಕ್ಕಿ, 3 ಕಿಲೋ ಗೋಧಿ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಆಗಲಿದೆ. ಆನ್‌ಲೈನ್ ಮೂಲಕ ಪ್ರತಿ ನ್ಯಾಯಬೆಲೆ ಅಂಗಡಿಗಳಿಗೆ ಆಹಾರಧಾನ್ಯ ಹಂಚಿಕೆ ಮಾಡಲಾಗಿದ್ದು, ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ.

ಮೀನುಗಾರಿಕೆಗೆ ಇನ್ನು ಸೀಮೆಎಣ್ಣೆ ಇಲ್ಲ!

ಸೆಪ್ಟಂಬರ್ ತಿಂಗಳಿನಿಂದ ಮೇ ತಿಂಗಳವರೆಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರಿಕೆಗೆ ನೀಡಲಾಗುತ್ತಿದ್ದ ಸೀಮೆಎಣ್ಣೆ ಹಂಚಿಕೆಯನ್ನು ಆಹಾರ ಇಲಾಖೆ ಸಂಪೂರ್ಣ ಸ್ಥಗಿತಗೊಳಿಸಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಬ್ಸಿಡಿ ದರದಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುತ್ತ್ದ್ದಿದ ಸೀಮೆಎಣ್ಣೆ ಸೆಪ್ಟೆಂಬರ್ ತಿಂಗಳಿನಿಂದ ರ್ದ್ದದಾಗಲಿದೆ.

`ಅನ್ನಭಾಗ್ಯ'ಕ್ಕೆ ಅಕ್ಕಿ ಕೊರತೆ?

ಸೆಪ್ಟೆಂಬರ್ ತಿಂಗಳಲ್ಲಿ `ಅನ್ನಭಾಗ್ಯ' ಯೋಜನೆಯಡಿ  ಕಡುಬಡವರಿಗೆ ವಿತರಿಸಲು ಅಕ್ಕಿ ಕೊರತೆ ಉಂಟಾಗಿದೆ. ಈ ಕೊರತೆ ತುಂಬಿಸಲು ಅಕ್ಟೋಬರ್ ತಿಂಗಳ ಹಂಚಿಕೆಯಿಂದ 1,13,927 ಮೆಟ್ರಿಕ್ ಟನ್ ಬಿಪಿಎಲ್ ಅಕ್ಕಿ, 346 ಮೆಟ್ರಿಕ್ ಟನ್ ಎಎವೈ ಅಕ್ಕಿಯನ್ನು ಮುಂಗಡವಾಗಿ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಸಲು ಆಹಾರ ಇಲಾಖೆ ನಿರ್ಧರಿಸಿದೆ. ಅಷ್ಟೇ ಅಲ್ಲ, ಅಕ್ಟೋಬರ್ ತಿಂಗಳ 81 ಮೆ. ಟನ್ ಎಎವೈ ಗೋಧಿಯನ್ನೂ ಪೂರೈಕೆ ಮಾಡಲಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry