ಸೋಮವಾರ, ಮೇ 17, 2021
23 °C
34 ಲಕ್ಷ ಕುಟುಂಬ ಸಂಕಷ್ಟಕ್ಕೆ: ಬಿಜೆಪಿ, ಜೆಡಿಎಸ್ ಟೀಕೆ

`ಎಪಿಎಲ್ 'ಗೆ ಅಕ್ಕಿ ಬಂದ್: ಸಿ.ಎಂ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಡತನ ರೇಖೆಗಿಂತ ಮೇಲಿರುವ (ಎಪಿಎಲ್) ಕುಟುಂಬಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಅಕ್ಕಿ ವಿತರಿಸದ ತೀರ್ಮಾನವನ್ನು ಹಿಂದಿನ ಬಿಜೆಪಿ ಸರ್ಕಾರವೇ ತೆಗೆದುಕೊಂಡಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅದರ ಬೆನ್ನಲ್ಲೇ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್, ಎಪಿಎಲ್ ಕುಟುಂಬಗಳನ್ನು ಕಾಂಗ್ರೆಸ್ ಸರ್ಕಾರ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ತಿರುಗೇಟು ನೀಡಿವೆ.ಬಜೆಟ್ ಸಿದ್ಧತೆ ಕುರಿತ ಅಧಿಕಾರಿಗಳ ಸಭೆಗೂ ಮುನ್ನ ಗೃಹ ಕಚೇರಿ `ಕೃಷ್ಣಾ'ದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, `ಎಪಿಎಲ್ ಕುಟುಂಬಗಳಿಗೆ ನ್ಯಾಯಬೆಲೆ ಅಂಗಡಿ ಮೂಲಕ ಅಕ್ಕಿ ವಿತರಿಸುವುದನ್ನು ಹಿಂದಿನ ಬಿಜೆಪಿ ಸರ್ಕಾರವೇ ಸ್ಥಗಿತಗೊಳಿಸಿತ್ತು. ಎಪಿಎಲ್ ಪಡಿತರ ಚೀಟಿದಾರರು ಅಕ್ಕಿ ಪಡೆಯುತ್ತಿಲ್ಲ ಎಂದು ಭಾವಿಸಿ ಬಿಜೆಪಿ ಸರ್ಕಾರ ಅಕ್ಕಿ ಕೊಡುವುದನ್ನು ನಿಲ್ಲಿಸಿತ್ತು. ಇದರಲ್ಲಿ ನಮ್ಮ ಸರ್ಕಾರದ ಪಾತ್ರ ಇಲ್ಲ' ಎಂದು ಸ್ಪಷ್ಟಪಡಿಸಿದರು.ಅರ್ಹರಿಗೆ ನಿಗದಿತ ಅವಧಿಯಲ್ಲೇ ಬಿಪಿಎಲ್ ಪಡಿತರ ಚೀಟಿ ನೀಡಲಾಗುವುದು. ಈ ಬಗ್ಗೆ ಗೊಂದಲ ಬೇಡ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದೇ ಸಂದರ್ಭದಲ್ಲಿ ಆಹಾರ ಖಾತೆ ರಾಜ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, `ಎಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ, ಸಕ್ಕರೆ ಮತ್ತು ಗೋಧಿ ವಿತರಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುವುದು' ಎಂದರು.

`ಆಹಾರ ಧಾನ್ಯ ವಿತರಣೆಯಲ್ಲಿ ಆಗುತ್ತಿರುವ ಸೋರಿಕೆ ತೆಡೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಸದ್ಯಕ್ಕೆ ಎಪಿಎಲ್ ಪಡಿತರ ಚೀಟಿಗಳನ್ನು ಅಡುಗೆ ಅನಿಲ ಸಂಪರ್ಕಕ್ಕೆ ಬಳಸಬಹುದು' ಎಂದರು.`ಬಡ ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ಸಿಗಬೇಕು ಎನ್ನುವುದು ಸರ್ಕಾರದ ಆಶಯ. ಇದಕ್ಕಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಸಡಿಲಿಸುವುದಕ್ಕೂ ಸಿದ್ಧ. ಅರ್ಹ ಫಲಾನುಭವಿಗಳಿಗೆ ಎರಡು ತಿಂಗಳಲ್ಲಿ ಬಿಪಿಎಲ್ ಪಡಿತರ ಚೀಟಿ ವಿತರಿಸಲಾಗುವುದು' ಎಂದರು.

`ಜನರಿಗೆ ಅನ್ಯಾಯ':ಎಪಿಎಲ್ ಕುಟುಂಬಗಳಿಗೆ ಪಡಿತರ ವ್ಯವಸ್ಥೆಯಡಿ ಅಕ್ಕಿ ವಿತರಿಸುವುದನ್ನು ಸ್ಥಗಿತಗೊಳಿಸಿರುವುದು ಕಾಂಗ್ರೆಸ್ ಸರ್ಕಾರ, ಜನಸಾಮಾನ್ಯರಿಗೆ ಮಾಡಿರುವ ದೊಡ್ಡ ಅನ್ಯಾಯ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದಗೌಡ ಆರೋಪಿಸಿದರು.

`ಎಪಿಎಲ್'ಗೆ ಅಕ್ಕಿ ಬಂದ್: ಸಿ.ಎಂ ಸಮರ್ಥನೆ

ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ವಿತರಿಸುವುದಕ್ಕಾಗಿ ಎಪಿಎಲ್ ಕುಟುಂಬಗಳಿಗೆ ಅಕ್ಕಿ ನೀಡುವುದನ್ನು ನಿಲ್ಲಿಸುವ ನಿರ್ಧಾರ ಸಮರ್ಥನೀಯವಲ್ಲ. ಸರ್ಕಾರದ ತೀರ್ಮಾನದ ಪರಿಣಾಮವಾಗಿ ಮಧ್ಯಮ ವರ್ಗದ 34 ಲಕ್ಷ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ' ಎಂದರು.`ಬಿಪಿಎಲ್ ಕುಟುಂಬಗಳಿಗೆ ಅಗ್ಗದ ದರದಲ್ಲಿ ಅಕ್ಕಿ ವಿತರಿಸುವ ಯೋಜನೆ ಘೋಷಿಸುವ ಮುನ್ನ ಮುಖ್ಯಮಂತ್ರಿಯವರು ಚರ್ಚೆಯನ್ನೇ ನಡೆಸಿರಲಿಲ್ಲ. ಇನ್ನೂ ಅಕ್ಕಿಗಾಗಿ ಹುಡುಕಾಟ ನಡೆಯುತ್ತಿದೆ. ಛತ್ತೀಸ್‌ಗಡ ಸರ್ಕಾರ ಅಕ್ಕಿ ನೀಡದೇ ಇದ್ದರೆ, ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಿಂದಲೇ ಖರೀದಿ ಮಾಡಬೇಕಾಗುತ್ತದೆ. ಆಗ ಸಹಜವಾಗಿಯೇ ಮಾರುಕಟ್ಟೆಯಲ್ಲಿ ಅಕ್ಕಿ ದರ ಗಗನಕ್ಕೆ ಏರುತ್ತದೆ. ಇದು ಮಧ್ಯಮ ವರ್ಗಕ್ಕೆ ಈ ಸರ್ಕಾರ ಮಾಡುತ್ತಿರುವ ಅನ್ಯಾಯ' ಎಂದು ಟೀಕಿಸಿದರು.`ನಿರ್ಧಾರ ಖಂಡನೀಯ': ಬಡತನ ರೇಖೆಗಿಂತ ಮೇಲಿರುವ (ಎಪಿಎಲ್) ಕುಟುಂಬಗಳಿಗೆ ಅಕ್ಕಿ ವಿತರಣೆ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿರುವುದು ಖಂಡನೀಯ ಎಂದು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಹೇಳಿದರು.ವಿಧಾನಸೌಧದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, `ಎಪಿಎಲ್ ಕುಟುಂಬಗಳಿಗೆ ನೀಡುತ್ತಿದ್ದ ಅಕ್ಕಿ ದುರ್ಬಳಕೆ ಆಗುತ್ತಿತ್ತು ಎಂಬ ಕಾರಣಕ್ಕಾಗಿ ಅಕ್ಕಿ ವಿತರಣೆ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ.

ದುರ್ಬಳಕೆ ತಡೆಯುವುದನ್ನು ಬಿಟ್ಟು, ಅಕ್ಕಿ ವಿತರಣೆಯನ್ನೇ ಸ್ಥಗಿತಗೊಳಿಸುವುದು ಸರಿಯಾದ ತೀರ್ಮಾನ ಅಲ್ಲ. ಜನಸಾಮಾನ್ಯರ ಹಿತರಕ್ಷಣೆಗೆ ಈ ಸರ್ಕಾರ ಬದ್ಧವಾಗಿಲ್ಲ ಎಂಬುದು ಇದರಿಂದ ಸಾಬೀತಾಗಿದೆ' ಎಂದು ಟೀಕಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.