ಬುಧವಾರ, ನವೆಂಬರ್ 13, 2019
22 °C

ಎಫ್‌ಎಂ ನಿರೂಪಕಿಯರಿಗೆ ಲೈಂಗಿಕ ಕಿರುಕುಳ: ಪಿಐಎಲ್

Published:
Updated:

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಆಕಾಶವಾಣಿ (ಏಐಆರ್) ಎಫ್‌ಎಂ ಗೋಲ್ಡ್ ಚಾನೆಲ್ ನಿರೂಪಕಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದ್ದು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ `ಪ್ರಸಾರ ಭಾರತಿ' ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಗೆ ನೋಟಿಸ್ ಜಾರಿ ಮಾಡಿದೆ.`ಎಫ್‌ಎಂ ಚಾನೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ವಿಷಯ ತಮಗೆ ಮಾಧ್ಯಮ ವರದಿಗಳಿಂದಾಗಿ ತಿಳಿದುಬಂತು' ಎಂದಿರುವ ಸಾಮಾಜಿಕ ಕಾರ್ಯಕರ್ತೆ ಮೀರಾ ಮಿಶ್ರಾ ಈ ಅರ್ಜಿಯನ್ನು ಸಲ್ಲಿಸಿದ್ದು, ಮೇ 15ರೊಳಗೆ ಉತ್ತರ ನೀಡಲು  ವಿಭಾಗೀಯ ಪೀಠ ಆದೇಶಿಸಿದೆ.ಹಲವು ವರ್ಷಗಳಿಂದ ಇಂತಹ ಚಾನೆಲ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಿರೂಪಕಿಯರಿಗೆ ಲೈಂಗಿಕ ಕಿರುಕುಳ ನೀಡುವುದಲ್ಲದೆ ಯಾವುದೇ ಕಾರಣ ನೀಡದೆ ಸೇವೆಯಿಂದ ತೆಗೆದುಹಾಕುವ ಬೆದರಿಕೆ ಹಾಕಲಾಗುತ್ತಿದೆ. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿ ರಕ್ಷಣೆಗೆ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ' ಎಂದು ಮಿಶ್ರಾ ದೂರಿದ್ದಾರೆ.ಮಹಿಳಾ ಸಿಬ್ಬಂದಿ ಸ್ಥಿತಿಗತಿ ಗಮನಿಸಿ ಅವರ ರಕ್ಷಣೆಗಾಗಿ ಪ್ರಸಾರ ಭಾರತಿ ಸಮಗ್ರ ನೀತಿಯೊಂದನ್ನು ಅನುಷ್ಠಾನಕ್ಕೆ ತರಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯಬಹುದಾದ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ವಿಶಾಖಾ ನೇತೃತ್ವದ ಸಮಿತಿ ನೀಡಿರುವ ಸಲಹೆಗಳನ್ನು ಪಾಲಿಸಲು ಕೋರ್ಟ್ ಪ್ರಸಾರ ಭಾರತಿಗೆ ನಿರ್ದೇಶನ ನೀಡಬೇಕೆಂದು ಸಹ ಒತ್ತಾಯಿಸಲಾಗಿದೆ.

ಪ್ರತಿಕ್ರಿಯಿಸಿ (+)