ಎಫ್‌ಎಂ ಹಾವಳಿ: ಸಂಗೀತಾಸಕ್ತಿ ಕ್ಷೀಣ

7

ಎಫ್‌ಎಂ ಹಾವಳಿ: ಸಂಗೀತಾಸಕ್ತಿ ಕ್ಷೀಣ

Published:
Updated:

ಬೆಂಗಳೂರು: ಸತತ ಅಭ್ಯಾಸದಿಂದ ಮಾತ್ರ ಸಂಗೀತ ಒಲಿಯಲಿದ್ದು, ಕಲೆ ಬೆಳೆಯಲು ಸ್ಪರ್ಧೆಯಿಂದ ಮಾತ್ರ ಸಾಧ್ಯ ಎಂದು ನಿಘಂಟು ತಜ್ಞ ಪ್ರೊ. ಜಿ.ವೆಂಕಟಸುಬ್ಬಯ್ಯ ಭಾನುವಾರ ಇಲ್ಲಿ ಅಭಿಪ್ರಾಯಪಟ್ಟರು.ಸದ್ಗುರು ಸಂಗೀತ ಅಕಾಡೆಮಿ ಹಾಗೂ ಭಾಗವತರು ಸಾಂಸ್ಕೃತಿಕ ಸಂಘಟನೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ `ದಾಸ- ನಿರಂತರ ಸಂಗೀತೋತ್ಸವ~ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ತಂಬೂರಿ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, `ಸಂಗೀತ ಕ್ಷೇತ್ರಕ್ಕೆ ಕರ್ನಾಟಕದ ಪಾಲು ದೊಡ್ಡದಾಗಿದೆ. ಮಾನವ ಮನಃಶಾಂತಿಗೆ ಸಂಗೀತವನ್ನು ಅವಲಂಬಿಸುತ್ತಿದ್ದು, ಬೆಂಗಳೂರಿನಲ್ಲಿ ಎಫ್‌ಎಂ ಹಾವಳಿಯಿಂದ ಶಾಸ್ತ್ರೀಯ ಸಂಗೀತ ಕೇಳುವವರ ಸಂಖ್ಯೆ ಕಡಿಮೆ ಆಗಿದೆ~ ಎಂದು ವಿಷಾದಿಸಿದರು.`ಸಂಗೀತ ಕ್ಷೇತ್ರಕ್ಕೆ ಸದ್ಗುರು ಸಂಗೀತ ಅಕಾಡೆಮಿಯು ಸಲ್ಲಿಸಿದ ಸೇವೆ ಶ್ಲಾಘನೀಯ. ಕಳೆದ 19 ವರ್ಷಗಳಿಂದ ಸಂಸ್ಥೆಯು ಉತ್ತಮ ಕಾರ್ಯವನ್ನು ಮಾಡಿದೆ. ಇದೇ ರೀತಿ ಅಕಾಡೆಮಿಯು ರಾಜ್ಯದಾದ್ಯಂತ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಉತ್ತಮ ಸಂಗೀತ ಪ್ರತಿಭೆಗಳನ್ನು ಬೆಳೆಸಲಿ~ ಎಂದು ಹಾರೈಸಿದರು.ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ ಮಾತನಾಡಿ, `ಸಂಗೀತ ಮತ್ತು ನೃತ್ಯ ಒಂದೇ ನಾಣ್ಯದ ಎರಡು ಮುಖಗಳು. ಶಾಸ್ತ್ರೀಯ ಸಂಗೀತ ಕಲಿಯಲು ದೇಶ- ವಿದೇಶಗಳಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನಮ್ಮ ಸಂಗೀತಕ್ಕೆ ಎಷ್ಟೊಂದು ಮಹತ್ವವಿದೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ~ ಎಂದರು.ಸಮಾರಂಭದಲ್ಲಿ ಹಿಂದೂಸ್ತಾನಿ ಸಂಗೀತ ಗಾಯಕರಾದ ವಿ.ಎಂ.ನಾಗರಾಜ, ರಾಘವೇಂದ್ರ ಗುಡಿ, ಕಿರುತೆರೆ ನಟಿ ವಿಜಯಾ ಎಕ್ಕುಂಡಿ ಮತ್ತು ಗಿರಿಜಾ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಸಂಗೀತೋತ್ಸವದಲ್ಲಿ ಸದ್ಗುರು ಸಂಗೀತ ಅಕಾಡೆಮಿಯ ಯುವ ಪ್ರತಿಭೆಗಳು ಮತ್ತು ವಿವಿಧ ಗಾಯಕರು ಗಾಯನ ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಸದ್ಗುರು ಸಂಗೀತ ಅಕಾಡೆಮಿಯ ಸತೀಶ ಹಂಪಿಗೋಳಿ, ಅವರ ಪತ್ನಿ ಸ್ನೇಹಾ ಸತೀಶ ಹಂಪಿಗೋಳಿ ಹಾಗೂ ಭಾಗವತರು ಸಾಂಸ್ಕೃತಿಕ ಸಂಘಟನೆಯ ಕೆ. ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry